Advertisement

ಪರಿಸರ ಉಳಿದರೆ ಮನುಕುಲ ಉಳಿದೀತು: ಬಸವಶಾಂತಲಿಂಗ ಸ್ವಾಮೀಜಿ

05:33 PM Jun 06, 2024 | Team Udayavani |

■ ಉದಯವಾಣಿ ಸಮಾಚಾರ
ಹಾವೇರಿ: ಸುಖ ಭೋಗಗಳನ್ನು ತ್ಯಜಿಸಿ ಬುದ್ಧ ನಡೆದದ್ದು ಕಾಡಿನತ್ತ, ಮರದ ಕೆಳಗೆ ಕುಳಿತು ಜ್ಞಾನೋದಯ ಪಡೆದವ ನಾಡಿಗೆ
ಒಂದು ಬೆಳಕನ್ನು ಹಂಚಿದ. ಪರಿಸರ ನಮಗೆ ಬರಿ ಗಿಡಮರಗಳ ತಾಣವಲ್ಲ, ವೃಕ್ಷವೆಂದರೆ ದೇವತೆ ಎಂಬ ಆದರ್ಶ ನಮ್ಮದು. ಪರಿಸರ ಉಳಿದರೆ ಮನುಕುಲ ಉಳಿದೀತು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

Advertisement

ಸ್ಥಳೀಯ ಹೊಸಮಠದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವರ್ಗದಲ್ಲಿ ನಿಸರ್ಗವಿಲ್ಲ, ನಿಸರ್ಗದಲ್ಲಿ ಸ್ವರ್ಗವಿದೆ. ಮಕ್ಕಳು ನಮ್ಮ ಭವಿಷ್ಯ, ಅವರಿಗೆ ಗಿಡಮರಗಳನ್ನು ಪರಿಚಯಿಸ ಬೇಕು. ಅವರಲ್ಲಿ ಪರಿಸರ ಪ್ರೀತಿ ಬೆಳೆಸ ಬೇಕು ಎಂದು ತಿಳಿಸಿ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಜನಮುಖಿ ಕಾರ್ಯ ಶ್ಲಾಘಿಸಿದರು.

ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿ, ಗಿಡಮರಗಳು ಹಾಗೂ ಮನುಷ್ಯನಿಗೂ ಅವಿನಾಭಾವ ಸಂಬಂಧವಿದೆ. ಗಿಡಮರಗಳನ್ನು ಮಕ್ಕಳಂತೆ ಪ್ರೀತಿಸಿ ಬೆಳೆಸಬೇಕು. ಮಕ್ಕಳು ಮನೆಯ ಖಾಲಿ ಜಾಗೆಯಲ್ಲಿ ಹೂವು ಗಿಡಗಳನ್ನು ಬೆಳೆಸ ಬೇಕು ಎಂದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎಸ್‌.ಎ. ವಜ್ರಕುಮಾರ ಮಾತನಾಡಿ, ವೃಕ್ಷೋ ದೇವೋಭವ ಎಂಬುದು ನಮ್ಮ ಉಸಿರಾಗಬೇಕು. ಪರಿಸರ ನಮಗೆ ಬರಿ ಮರ, ಗಿಡಗಳ ತಾಣವಲ್ಲ. ವೃಕ್ಷವೆಂದರೆ ದೇವತೆ ಎನ್ನುವ ಆದರ್ಶ ನಮ್ಮದು ಎಂದರು.

ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಪರಿಸರಕ್ಕೆ ಮಾನವನೇ ಮಾರಕ ವೈರಸ್‌. ಕೊಳ್ಳುಬಾಕತನ ಕಡಿಮೆ ಯಾಗಲಿ, ಮಿತ ಬಳಕೆ, ಮರುಬಳಕೆ, ಸರಳ ಜೀವನ ನಮ್ಮದಾದರೆ ಪರಿಸರದ ಮೇಲಿನ ಒತ್ತಡ ಕಡಿಮೆ ಮಾಡಬಹುದು. ಪ್ರಕೃತಿ ನಮ್ಮ ಆಸೆ ಪೂರೈಸಬಲ್ಲದು, ಆದರೆ ದುರಾಸೆಯನ್ನಲ್ಲ ಎಂದರು. ಮುರಳಿ ದಂಡೆಮ್ಮನವರ ಹಾಗೂ ಸಿಂಚನ ಮಾಕನೂರ ವಿದ್ಯಾರ್ಥಿಗಳು
ಮಾತನಾಡಿದರು. ಒಕ್ಕೂಟದ ಅಧ್ಯಕ್ಷೆ ಬೀಬಿ ಫಾತೀಮಾ ವೇದಿಕೆಯಲ್ಲಿದ್ದರು. ಯೋಜನಾಧಿಕಾರಿ ನಾರಾಯಣ ಸ್ವಾಗತಿಸಿದರು. ಹರಿಪ್ರಿಯಾ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next