Advertisement

ಪರಿಸರ ರಕ್ಷಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

11:33 AM Jun 06, 2019 | Suhan S |

ಮಂಡ್ಯ: ನಿಸರ್ಗ ನಮಗೆ ಶುದ್ಧ ಗಾಳಿ, ನೀರು, ಆಹಾರ ನೀಡುತ್ತಿದ್ದು, ನಾವು ಅವೆಲ್ಲವನ್ನೂ ಮಲಿನಗೊಳಿಸುತ್ತಿದ್ದೇವೆ. ಈ ಪ್ರಕ್ರಿಯೆಯಿಂದ ದೂರ ಉಳಿದು ಪರಿಸರದ ಮಡಿಲಿನಲ್ಲಿ ಎಲ್ಲರೂ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ನಗರಸಭೆ ಪರಿಸರ ಎಂಜಿನಿಯರ್‌ ಮೀನಾಕ್ಷಿ ತಿಳಿಸಿದರು.

Advertisement

ನಗರದ ಬಾಲಭವನದಲ್ಲಿ ಬುಧವಾರ ನಗರಸಭೆ ಹಾಗೂ 19ನೇ ವಾರ್ಡ್‌ನ ನಾಗರೀಕ ವೇದಿಕೆ ವತಿಯಿಂದ ನಡೆದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಂತ್ರಗಳಿಂದ ಪರಿಸರ ಮಾಲಿನ್ಯ: ಆಧುನಿಕತೆ ಹಾಗೂ ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿರುವ ನಾವು ಅಮೂಲ್ಯ ಅರಣ್ಯ ಸಂಪತ್ತನ್ನು ನಾಶಗೊಳಿಸುತ್ತಿದ್ದೇವೆ. ಕಾಡನ್ನು ಕಡಿದು ಕಾಂಕ್ರೀಟ್ ಜಗತ್ತು ಸೃಷ್ಟಿಸಲು ಮುಂದಾಗಿದ್ದೇವೆ. ನಮ್ಮ ಐಷಾರಾಮಿ ಜೀವನಕ್ಕೆ ಪರಿಸರಕ್ಕೆ ಮಾರಕವಾಗುವ ಕಾರ್ಖಾನೆ, ವಾಹನ, ಹವಾ ನಿಯಂತ್ರಣ ಯಂತ್ರಗಳ ಬಳಕೆಯಿಂದ ಪರಿಸರ ಮಾಲಿನ್ಯ ಮಾಡುತ್ತಿದ್ದೇವೆ. ವಿಶ್ವದಲ್ಲಿ ಬಾಂಗ್ಲಾ, ಪಾಕಿಸ್ತಾನ ಹಾಗೂ ಭಾರತ ಕ್ರಮವಾಗಿ ವಾಯುಮಾಲಿನ್ಯದಲ್ಲಿ ಪ್ರಥಮ ಸ್ಥಾನದಲ್ಲಿವೆ. ಇದರಿಂದ ಉಸಿರಾಡಲು ಶುದ್ಧಗಾಳಿ ಕೊರತೆಯಿಂದಾಗಿ ಸಾವನ್ನಪ್ಪುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಮೀನಾಕ್ಷಿ ವಿಷಾದ ವ್ಯಕ್ತಪಡಿಸಿದರು.

ಪ್ಲಾಸ್ಟಿಕ್‌ ಬಳಕೆ ನಿಷೇಧ: ವಿಶ್ವದಲ್ಲಿ ಪ್ಲಾಸ್ಟಿಕ್‌ ಬಳಕೆಯಿಂದ ಭೂಮಿ, ಸೇರಿ ಎಲ್ಲಾ ಜೀವರಾಶಿಗಳಿಗೂ ಮಾರಕ ಪರಿಣಾಮ ಎದುರಾಗಿದೆ. ಜೀವ ಸಂಕುಲ ಉಳಿಸಿಕೊಳ್ಳಲು ಪ್ಲಾಸ್ಟಿಕ್‌ ಬಳಕೆ ತ್ಯಜಿಸುವ ಕುರಿತು ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಈಗಾಗಲೇ ಸರ್ಕಾರದ ವತಿಯಿಂದ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿದೆ. ಆದರೂ ನಾವು ಎಚ್ಚೆತ್ತುಕೊಂಡಿಲ್ಲ. ಎಲ್ಲರೂ ಪ್ಲಾಸ್ಟಿಕ್‌ ತ್ಯಜಿಸಿ ಬಟ್ಟೆ ಚೀಲಗಳನ್ನು ಬಳಸುವಂತೆ ಮನವಿ ಮಾಡಿದರು.

ನಾಲ್ಕು ಉದ್ಯಾನ ದತ್ತು: ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಎಂ.ಎಸ್‌.ರಾಜು ಮಾತನಾಡಿ, ನಗರದಲ್ಲಿ ಕಾವೇರಿ ವನ ಹಾಗೂ ಭವ್ಯ ವನದಲ್ಲಿ ಗಿಡಗಳು ು ಬೆಳೆಸುವ ಮೂಲಕ ಉದ್ಯಾನದ ಸೌಂದರ್ಯ ಹೆಚ್ಚಿಸಲಾಗಿದೆ. ಇದೇ ನಿಟ್ಟಿನಲ್ಲಿ ನಗರ ಸಭೆಯಿಂದ ನಾಲ್ಕು ಉದ್ಯಾನಗಳನ್ನು ದತ್ತು ಪಡೆದು ವಿವಿಧ ಜೈವಿಕ ಉಪಯೋಗಿ ಗಿಡಗಳು ಹಾಗೂ ಹೂವಿನ ಸಸಿಗಳನ್ನು ಬೆಳೆಸಿ ಸುಂದರ ಉದ್ಯಾನವನಗಳನ್ನಾಗಿ ನಿರ್ಮಾಣ ಮಾಡ ಲಾಗುವುದು ಎಂದು ಹೇಳಿದರು.

Advertisement

ತಾರಸಿ ತೋಟ ನಿರ್ಮಿಸಿ: ನಾವು ಪ್ರತಿ ನಿತ್ಯ ರಾಸಾಯನಿಕ ಬಳಕೆ ಮಾಡಿದ ತರಕಾರಿ, ಸೊಪ್ಪು ಹಾಗೂ ಹಣ್ಣುಗಳನ್ನು ಬಳಕೆ ಮಾಡುತ್ತಿದ್ದೇವೆ. ಹೀಗಾಗಿ ಮನೆಯಲ್ಲಿಯೇ ತಾರಸಿ ತೋಟ ನಿರ್ಮಿಸಿ ಸಾವಯವ ರೀತಿಯಲ್ಲಿ ಸೊಪ್ಪು ತರಕಾರಿ ಬೆಳೆಯಬೇಕು. ವ್ಯಾಪಾರಿಗಳು ಹಣ್ಣು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್‌ ಬಳಕೆ ಮಾಡುತ್ತಾರೆ. ಹೀಗಾಗಿ ಕ್ಯಾಲ್ಸಿಯಂ ಕಾರ್ಬೈಡ್‌ ಬಳಸುವ ಮಂಡಿ ಮೇಲೆ ಧಾಳಿ ಮಾಡಿ, ಮಾಲೀಕರಿಗೆ 2 ಲಕ್ಷ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಸಾವಯವ ರೀತಿಯಲ್ಲಿ ಬೆಳೆದ ತರಕಾರಿ, ಸೊಪ್ಪುಗಳ ಬಳಕೆ, ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳ ಬಳಕೆಯಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಕಲ್ಮನೆ ಕಾಮೇ ಗೌಡರನ್ನು ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಪರಿಸರಕ್ಕೆ ಪೂರಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಾಗರಿಕರು ಹಾಗೂ ಗಣ್ಯರಿಂದ ಬಾಲಭವನ ಉದ್ಯಾನದಲ್ಲಿ ಸಸಿ ನೆಡಲಾಯಿತು.

ಅರಣ್ಯ ಇಲಾಖೆ ಉಪ ಸಂರಕ್ಷಣಾ ಅಧಿಕಾರಿ ಎನ್‌.ಶಿವರಾಜ್‌, ನಗರಸಭೆ ಸದಸ್ಯೆ ಮಂಜುಳಾ ಉದಯಶಂಕರ್‌, ನಗರಸಭೆ ಆರೋಗ್ಯ ಪರಿವೀಕ್ಷಕ ಗೋವಿಂದ್‌, ನಾಗರೀಕ ವೇದಿಕೆ ಸದಸ್ಯರಾದ ಉಮೇಶ್ಚಂದ್ರ, ಹರಿಪ್ರಸಾದ್‌, ರಾಜಶ್ರೀ, ಅನಂತರಾವ್‌, ವಿಶಾಲಾಕ್ಷಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next