Advertisement

Puttur; ಚುನಾವಣೆ ಘೋಷಣೆಯಾದರೆ ಅಡಿಕೆ ಧಾರಣೆ ಏರಿಕೆ?

12:20 AM Feb 28, 2024 | Team Udayavani |

ಪುತ್ತೂರು: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯ ಧಾರಣೆ ಅಸ್ಥಿರತೆಯ ಆತಂಕಕ್ಕೆ ತಾತ್ಕಾಲಿಕ ಪರಿಹಾರ ಸಿಗುವ ಕಾಲ ಸನ್ನಿಹಿತವಾದಂತಿದೆ; ಕಾರಣ ಸದ್ಯವೇ ಘೋಷಣೆಯಾಗಲಿರುವ ಲೋಕಸಭಾ ಚುನಾವಣೆ. ಹೀಗೊಂದು ಲೆಕ್ಕಾಚಾರ ಮಾರುಕಟ್ಟೆ ಯಲ್ಲಿ ಹರಿದಾಡುತ್ತಿದೆ.

Advertisement

ವಿದೇಶಿ ಅಡಿಕೆ ಅಕ್ರಮವಾಗಿ ದೇಶದೊಳಕ್ಕೆ ಬರುತ್ತಿರುವ ಪರಿಣಾಮ ದೇಶೀ ಅಡಿಕೆಯ ಧಾರಣೆ ಕುಸಿತ ಕಂಡಿದೆ. ಅಕ್ರಮ ಆಮದು ತಡೆಯಲು ಸರಕಾರ ಇನ್ನೂ ಬಿಗಿ ಕ್ರಮ ಕೈಗೊಳ್ಳದ ಕಾರಣ ಧಾರಣೆ ಅಸ್ಥಿರತೆಯಲ್ಲಿ ಮುಂದುವರಿದಿದೆ.

ಕ್ಯಾಂಪ್ಕೋ ಮಾರುಕಟ್ಟೆ ಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 325ರಿಂದ 345 ರೂ., ಹಳೆ ಅಡಿಕೆ (ಸಿ) 400ರಿಂದ 410 ರೂ., ಹಳೆ ಅಡಿಕೆ (ಡ) 400ರಿಂದ 425 ರೂ. ತನಕ ಇದೆ. ಕಳೆದ ವರ್ಷ ಹೊಸ ಅಡಿಕೆ 400 ರೂ. ಗಡಿ ದಾಟಿದ್ದರೆ ಹಳೆ ಅಡಿಕೆ 500 ರೂ. ಗಡಿ ದಾಟಿತ್ತು.

ಏನಿದು ಚುನಾವಣೆ
ಲೆಕ್ಕಾಚಾರ?
2024ರ ಮೇಯಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಮಾರ್ಚ್‌ನಲ್ಲೇ ನೀತಿಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಅಂತಾರಾಷ್ಟ್ರೀಯ ಗಡಿಭಾಗಗಳಲ್ಲಿ ಬಿಗಿ ಬಂದೋಬಸ್ತ್, ತಪಾಸಣೆ ನಡೆಯಲಿದ್ದು ಇದರಿಂದ ಅಕ್ರಮವಾಗಿ ಅಡಿಕೆ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವುದು ನಿಯಂತ್ರಣಕ್ಕೆ ಬರಲಿದೆ. ಇದರಿಂದ ದೇಶೀ ಅಡಿಕೆಗೆ ಧಾರಣೆ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಿದೆ ಮಾರುಕಟ್ಟೆ ಮೂಲಗಳು. ಚುನಾವಣೆ ಸಂದರ್ಭ ದೇಶ-ವಿದೇಶದ ಗಡಿಭಾಗಗಳಲ್ಲಿ ಬಿಗಿ ಭದ್ರತೆ ಸಹಜ. ಆಗ ಇಂತಹ ಅಕ್ರಮ ಚಟುವಟಿಕೆಗಳು ನಿಯಂತ್ರಣಕ್ಕೆ ಬರುತ್ತವೆ. ಇದರಿಂದ ಅಡಿಕೆ ಕೊರತೆಯಾಗಿ ಅಡಿಕೆ ಆಧಾರಿತ ಉತ್ಪಾದನ ಕಂಪೆನಿಗಳು ದೇಶೀ ಅಡಿಕೆಗೆ ಮೊರೆಹೊಗುವ ಅನಿವಾರ್ಯ ಇದೆ ಅನ್ನುವುದು ಧಾರಣೆ ಏರಿಕೆಯ ಲೆಕ್ಕಾಚಾರ.

ಪಾತಾಳದಲ್ಲಿದ್ದ ಧಾರಣೆ ಏರಿತ್ತು
ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಳಿತ ಸಹಜ. ಪಾತಾಳದಲ್ಲಿದ್ದ ಧಾರಣೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರೀ ಏರಿಕೆ ಕಂಡಿರುವುದನ್ನು ಅಂಕಿ-ಅಂಶ ದೃಢಪಡಿಸುತ್ತದೆ. 1999ರಲ್ಲಿ 160 ರೂ. ಇದ್ದ ಧಾರಣೆ 2023ರಲ್ಲಿ 500 ರೂ.ಗಡಿಗೆ ತಲುಪಿತ್ತು. 1999ರಿಂದ 2011ರ ತನಕ ಕೆಲವು ವರ್ಷಗಳಲ್ಲಿ ಅಡಿಕೆ ಧಾರಣೆ 100 ರೂ. ಒಳಗಿತ್ತು. 2012ರಲ್ಲಿ ಕೆ.ಜಿ.ಗೆ 150 (ಕನಿಷ್ಠ)-190 (ಗರಿಷ್ಠ), 2013ರಲ್ಲಿ 140-150 ರೂ., 2014ರಲ್ಲಿ 150-310 ರೂ., 2015ರಲ್ಲಿ 250-280 ರೂ., 2016ರಲ್ಲಿ 230-260 ರೂ., 2017 ರಲ್ಲಿ 210-260 ರೂ., 2018 ರಲ್ಲಿ 210-280 ರೂ., 2019 ರಲ್ಲಿ 220-250 ರೂ. ತನಕ ಧಾರಣೆ ಇತ್ತು. 2020, 2021ರಲ್ಲಿನ ಕೋವಿಡ್‌ ಕಾಲಘಟ್ಟದಲ್ಲಿ ಅಡಿಕೆ ಧಾರಣೆ ಭಾರೀ ಏರಿಕೆಯತ್ತ ಸಾಗಿತ್ತು. 2022, 2023ರಲ್ಲಿ ಗರಿಷ್ಠ ಹಂತಕ್ಕೆ ತಲುಪುವ ಮೂಲಕ ದಾಖಲೆ ನಿರ್ಮಿಸಿತ್ತು.

Advertisement

ಅಗತ್ಯವಿದ್ದರಷ್ಟೇ ಮಾರಾಟ ಮಾಡಿ
ಧಾರಣೆ ಇಳಿಯುತ್ತಿದೆ ಎಂದು ಬೆಳೆಗಾರರು ಆತುರಪಟ್ಟು ಅಡಿಕೆ ಮಾರಾಟ ಮಾಡಬಾರದು. ಇದರಿಂದ ಧಾರಣೆಯನ್ನು ಮತ್ತಷ್ಟು ಇಳಿಸುವ ತಂತ್ರಗಾರಿಕೆ ನಡೆಯುವ ಸಾಧ್ಯತೆ ಇದೆ. ಪೂರೈಕೆ ಕುಸಿದಾಗ ಸಹಜವಾಗಿ ಧಾರಣೆ ಏರುತ್ತದೆ.

ಚುನಾವಣೆ ಸಂದರ್ಭ ಅಂತಾರಾಷ್ಟ್ರೀಯ ಗಡಿಗಳಲ್ಲಿ ಬಿಗಿ ತಪಾಸಣೆ ಇರುವುದರಿಂದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ಇಂಡೋನೇಶ್ಯಾ, ಬರ್ಮಾ ಮುಂತಾದ ದೇಶಗಳಿಂದ ಆಮದು ಆಗುವ ಅಡಿಕೆಯ ಗುಣಮಟ್ಟ ತುಂಬಾ ಕಳಪೆ. ಇವು ಊಖಖಅಐ ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸುವುದಿಲ್ಲ. ವಶಪಡಿಸಿಕೊಂಡ ಅಡಿಕೆಯ ಗುಣಮಟ್ಟದ ಪರೀಕ್ಷೆಯನ್ನು ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಕಟ್ಟುನಿಟ್ಟಾಗಿ ನಡೆಸಬೇಕೆಂದು ಕ್ಯಾಂಪ್ಕೊ ಪ್ರಧಾನಮಂತ್ರಿಗೆ ಪತ್ರ ಬರೆದು ಆಗ್ರಹಿಸಿದೆ.
– ಕಿಶೋರ್‌ ಕುಮಾರ್‌ ಕೊಡ್ಗಿ, ಕ್ಯಾಂಪ್ಕೊ ಅಧ್ಯಕ್ಷ

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next