ಸುರಪುರ: ಮತಾಂಧ ಶಕ್ತಿಗಳು ಹಾಗೂ ಕೋಮುವಾದಿಗಳಿಂದ ಸಂವಿಧಾನ ಬದಲಾವಣೆ ಮಾತು ಮತ್ತು ಸಂವಿಧಾನದ ಪ್ರತಿಗಳನ್ನು ಸುಡುವ ಅಮಾನವೀಯ ಕೃತ್ಯ ದೇಶದಲ್ಲಿ ನಡೆಯುತ್ತಿವೆ. ಆದ್ದರಿಂದ ಸಂವಿಧಾನ ರಕ್ಷಣೆಗೆ ಮುಂದಾಗಬೇಕು. ಸಂವಿಧಾನ ಉಳಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ| ಡಿ.ಜಿ. ಸಾಗರ ಹೇಳಿದರು.
ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಡಿ. ದೇವರಾಜ ಅರಸು ಅವರ 103ನೇ ಜಯಂತ್ಯುತ್ಸವ ನಿಮಿತ್ತ ಕೋಮುವಾದಿ ಶಕ್ತಿ ವಿರುದ್ಧ ದಲಿತ ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಒಗ್ಗಟ್ಟಿನ ಹೋರಾಟ ಕುರಿತು ತಾಲೂಕು ಸಮಿತಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ದಲಿತರಿಗಾಗಿ ಸಂವಿಧಾನ ರಚಿಸಲಿಲ್ಲ. ಹಿಂದುಳಿದ ತುಳಿತಕ್ಕೊಳಗಾದ ಶೋಷಿತ ಅಲ್ಪ ಸಂಖ್ಯಾತರ ಹಿತರಕ್ಷಣೆಗಾಗಿ ಸಮಾನತೆಯ ಅಂಶಗಳನ್ನು ಸೇರಿಸಿ ಎಲ್ಲರಿಗೂ ನ್ಯಾಯ ಹೊದಗಿಸಿಕೊಡುವ ನಿಟ್ಟಿನಲ್ಲಿ ಸಂವಿಧಾನ ರಚಿಸಿದರು. ಆದರೆ ಕೆಲ ಮತಾಂಧ ಶಕ್ತಿಗಳು, ಪಟ್ಟಭದ್ರರು ಜನರಿಗೆ ತಪ್ಪು ಸಂದೇಶ ತಲುಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಬಸವ ತತ್ವವನ್ನು ಮೈಗೊಡಿಸಿಕೊಂಡಿದ್ದ ಅರಸು, ಅಂಬೇಡ್ಕರ್ ವಿಚಾರಗಳನ್ನು ಭಾಗಶಃ ಅನುಷ್ಠಾನಕ್ಕೆ ತಂದ ದೀಮಂತ ನಾಯಕರು, ದಲಿತರಿಗೆ ಶೋಷಿತರಿಗೆ ಹಿಂದುಳಿದ, ಅಲ್ಪ ಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿದ ಮಹಾನ್ ಜನನಾಯಕ, ರಾಜ್ಯ ಕಂಡ ಅಪರೂಪದ ರಾಜಕಾರಣಿ, ಡಾ| ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ, ಚಿಮನಕಟ್ಟಿ ಸೇರಿದಂತೆ ಹಿಂದುಳಿದ ವರ್ಗದವರು ಇವತ್ತು ರಾಜಕೀಯದ ಉತುಂಗಕ್ಕೇರಿದ್ದರೆ ಅದು ಅರಸು ಅವರ ಕೊಡುಗೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಬಣ್ಣಿಸಿದರು.
ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ತಾತಾ ಕಾರ್ಯಕ್ರಮ ಉದ್ಘಾಟಿಸಿದರು. ಶಹಾಪುರ ತಾಲೂಕು ಜೆಡಿಎಸ್ ಮುಖಂಡ ಅಮೀನರೆಡ್ಡಿ ಪಾಟೀಲ ಯಾಳಗಿ ದೇವರಾಜ ಅರಸು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಜಿಪಂ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ಮಾತನಾಡಿದರು, ಸಮಿತಿ ಕಲಬುರಗಿ ಸಂಚಾಲಕ ಸಿದ್ದರಾಜ ಹೊಸ್ಮನಿ, ದುರ್ಗಪ್ಪ ಗೋಗಿಕರ್, ಬಸವರಾಜ ಕವಲಿ, ಪ್ರದೀಪ ಪುರ್ಲೆ, ಮಲ್ಲು ಬಿಲ್ಲವ್ ಚಂದಪ್ಪ ಮುನಿಪ್ಪನೋರ್, ಶಿವುಕುಮಾರ ತಳವಾರ, ಭೀಮಣ್ಣ ಹುಣಸಗಿ, ಹಣಮಂತ ರೋಜಾ ವೇದಿಕೆಯಲ್ಲಿದ್ದರು. ಸಮಿತಿ ಜಿಲ್ಲಾ ಸಂಚಾಲಕ ಶಿವುಪುತ್ರ ಜವಳಿ ಸ್ವಾಗತಿಸಿದರು. ಮಲ್ಲಿಕಾರ್ಜುನ ತಳ್ಳಳ್ಳಿ ನಿರೂಪಿಸಿದರು. ಶಿವಲಿಂಗ ಹಸನಾಪುರ ವಂದಿಸಿದರು.