ತ್ರಿಪುರಾ: ತ್ರಿಪುರಾದಲ್ಲಿ ಡಬ್ಬಲ್ ಎಂಜಿನ್ ನೇತೃತ್ವದ ಸರ್ಕಾರ ಬುಲೆಟ್ ರೈಲಿನ ವೇಗವನ್ನು ಪಡೆದಿದೆ. ಈ ವೇಗದ ಪರಿಣಾಮವಾಗಿ ಕೋವಿಡ್ 19 ಕಾಲದಲ್ಲಿ ಜನರು ಉಚಿತವಾಗ ಲಸಿಕೆಗಳನ್ನು, ಚಿಕಿತ್ಸೆಯನ್ನು ಆಹಾರವನ್ನು ಪಡೆದುಕೊಂಡಿದ್ದಾರೆ. ಒಂದು ವೇಳೆ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಥವಾ ಸಿಪಿಐ(ಎಂ) ಸರ್ಕಾರ ಅಧಿಕಾರದಲ್ಲಿದ್ದಿದ್ದರೆ ಈ ಯಾವ ಸೌಲಭ್ಯವೂ ಜನರಿಗೆ ಸಿಗುತ್ತಿರಲಿಲ್ಲವಾಗಿತ್ತು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದರು.
ಅವರು ಬುಧವಾರ ತ್ರಿಪುರಾದಲ್ಲಿನ ಸೂರ್ಯಮಣಿನಗರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ತ್ರಿಪುರಾ ಉತ್ತಮ ಮಾದರಿ ಆಡಳಿತ ವ್ಯವಸ್ಥೆ ಮತ್ತು ಜನರ ರಕ್ಷಣೆಯನ್ನು ಕಂಡಿದೆ. ಈ ಸಂಪ್ರದಾಯವನ್ನು ತ್ರಿಪುರಾ ಜನರು ಮುಂದುವರಿಸಬೇಕಾಗಿದೆ ಎಂದು ಸಿಎಂ ಯೋಗಿ ಮನವಿ ಮಾಡಿಕೊಂಡರು.
ಕಳೆದ 5ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮೂರು ಲಕ್ಷ ಮಂದಿ ಮನೆಯನ್ನು ಪಡೆದುಕೊಂಡಿದ್ದಾರೆ. ಉಜ್ವಲಾ ಯೋಜನೆಯಡಿ 2.70 ಲಕ್ಷ ಜನರು ಪ್ರಯೋಜನ ಪಡೆದುಕೊಂಡಿದ್ದಾರೆ. 2.5 ಲಕ್ಷ ರೈತರು ಕೃಷಿಕ್ ಸಮ್ಮಾನ್ ನಿಧಿಯನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ರಾಜ್ಯದ ಶೇ.80ಕ್ಕಿಂತಲೂ ಅಧಿಕ ಜನರಿಗೆ ಶುದ್ಧ ಕುಡಿಯುವ ನೀರು ದೊರಕಿದೆ ಎಂದು ಯೋಗಿ ತಿಳಿಸಿದ್ದಾರೆ.
ತ್ರಿಪುರಾದಲ್ಲಿ ಗಮನಾರ್ಹ ಅಭಿವೃದ್ಧಿಯಾಗುತ್ತಿದೆ. ಹೊಸ ರಸ್ತೆಗಳು, ನೂತನ ಶಾಲೆಗಳು ಮತ್ತು ಆಸ್ಪತ್ರೆಗಳು ನಿರ್ಮಾಣವಾಗುತ್ತಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಶೀಘ್ರವೇ ರಾಮಮಂದಿರ ನಿರ್ಮಾಣಗೊಳ್ಳಲಿದ್ದು, ಜನರು ಅಯೋಧ್ಯೆಗೆ ಭೇಟಿ ನೀಡಬೇಕೆಂದು ಈ ಸಂದರ್ಭದಲ್ಲಿ ಸಿಎಂ ಯೋಗಿ ಮನವಿ ಮಾಡಿಕೊಂಡರು.