Advertisement

ಕೇಂದ್ರ ಒಪ್ಪಿದರೆ ಮೆಕ್ಕೆಜೋಳ ಖರೀದಿ

07:35 AM Nov 22, 2017 | Team Udayavani |

ವಿಧಾನ ಪರಿಷತ್‌: “ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ತಕ್ಷಣ ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿ ಪ್ರಾರಂಭಿಸಲಿದೆ’ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

Advertisement

ಮಂಗಳವಾರ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ವರ್ಷ ರಾಜ್ಯದಲ್ಲಿ ಉತ್ಪಾದನೆಯಾಗಿರುವ 28 ಲಕ್ಷ ಟನ್‌ ಮೆಕ್ಕೆಜೋಳದ ಪೈಕಿ 6 ಲಕ್ಷ ಟನ್‌ ಮೆಕ್ಕೆಜೋಳ ಖರೀದಿಸಲು ಕೇಂದ್ರ ಸರ್ಕಾರ ಮುಂದಾದರೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು. ರಾಜ್ಯದಲ್ಲಿ ಮೆಕ್ಕೆಜೋಳದ ಬೆಲೆ ಕುಸಿತವಾಗಿದೆ. ರೈತರು ಕಷ್ಟದಲ್ಲಿರುವ ವಿಚಾರ ಸರ್ಕಾರಕ್ಕೂ ಗೊತ್ತು. ಈ ಕುರಿತು ಈಗಾಗಲೇ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದ್ದು, ಪತ್ರವನ್ನೂ ಬರೆಯಲಾಗಿದೆ. ಆದರೆ, ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಧಾರವಾಡ, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ವರ್ಷ ಮೆಕ್ಕೆಜೋಳದ ಬಂಪರ್‌ ಬೆಳೆ ಬಂದಿದೆ ಎಂದು ಹೇಳಿದರು.

ಸಹಾಯಧನ ಹೆಚ್ಚಳ ಪರಿಶೀಲನೆ
ವಿಧಾನಪರಿಷತ್‌: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‌ಕೆವಿವೈ) ಯೋಜನೆಯಡಿ ಬರ ಹಾಗೂ ಕೀಟ/ರೋಗಗಳಿಂದ ಹಾನಿಯಾಗಿರುವ ತೆಂಗಿನ ತೋಟಗಳ ಪುನಃಶ್ಚೇತನ ಕಾರ್ಯಕ್ರಮದಡಿ ಪ್ರತಿ ಹೆಕ್ಟೇರ್‌ಗೆ ನೀಡುವ ಸಹಾಯಧನ ಹೆಚ್ಚಳಕ್ಕೆ ಪರಿಶೀಲಿಸಲಾಗುವುದು ಎಂದು ತೋಟಗಾರಿಕಾ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಭರವಸೆ ನೀಡಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಮಂಗಳವಾರ ಕಾಂಗ್ರೆಸ್‌ನ ಎಂ.ಎ.ಗೋಪಾಲಕೃಷ್ಣ ಪ್ರಶ್ನೆಗೆ ಅವರು ಉತ್ತರಿಸಿದರು.

ಸಂಪ್ರದಾಯಬದ್ಧ ಪೂಜೆಗೆ ಕ್ರಮ
ವಿಧಾನಪರಿಷತ್‌: ಕಾವೇರಿ ನದಿಯಲ್ಲಿ ಇತ್ತೀಚೆಗೆ ನಡೆದ ಪುಷ್ಕರ ಹಿನ್ನೆಲೆಯಲ್ಲಿ ಕೆಲ ಭಕ್ತಾದಿಗಳು ತಮಗಿಷ್ಟ ಬಂದಂತೆ ಆಚರಣೆ ನಡೆಸಿದ್ದಾರೆ. ಮುಂದೆ ಇಷ್ಟಬಂದಂತೆ ಪೂಜೆ ಸಲ್ಲಿಸಲು ಅವಕಾಶ ನೀಡದೆ, ಸಂಪ್ರದಾಯಬದ್ಧವಾಗಿ ಪೂಜೆ ಪುನಸ್ಕಾರ ನಡೆಯುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಹೇಳಿದ್ದಾರೆ. ಕಾಂಗ್ರೆಸ್‌ನ ವೀಣಾ ಆಚ್ಚಯ್ಯ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ನಿವೃತ್ತ ಅಧಿಕಾರಿಗಳು, ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿಕೊಂಡು ತಲಕಾವೇರಿಯಲ್ಲಿ ವಿಧಿ ವಿಧಾನಗಳು ಸಂಪ್ರದಾಯ ಬದ್ಧವಾಗಿ ನಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next