Advertisement

ಜಾತಿ ಗಣತಿ ವರದಿ ಸ್ವೀಕರಿಸದಿದ್ದರೆ ಬೀದಿಗಿಳಿದು ಹೋರಾಟ: ಸಿದ್ದರಾಮಯ್ಯ

12:57 AM Oct 04, 2020 | mahesh |

ಬೆಂಗಳೂರು: “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಸರಕಾರ ತತ್‌ಕ್ಷಣ ಸ್ವೀಕರಿಸಬೇಕು. ಇಲ್ಲದಿದ್ದರೆ, ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯ ಆಗಲಿದೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎಚ್ಚರಿಸಿದ್ದಾರೆ.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015ರಲ್ಲಿ ಆರಂಭಗೊಂಡ ಜಾತಿ ಗಣತಿ ಈಗಾಗಲೇ ಪೂರ್ಣಗೊಂಡಿದೆ. ಜನಗಣತಿ ಮಾದರಿಯಲ್ಲಿ ಮನೆ ಮನೆಗೆ ತೆರಳಿ 55 ಅಂಶಗಳ ಪ್ರಶ್ನೆಗಳನ್ನು ಕೇಳಿ ಮಾಹಿತಿ ಸಂಗ್ರಹಿಸಲಾಗಿದೆ. ಇದಕ್ಕಾಗಿ 162.77 ಕೋ. ರೂ. ಖರ್ಚು ಮಾಡಲಾಗಿದೆ. ಇದು ಸಾಮಾಜಿಕ-ಆರ್ಥಿಕ ಯೋಜನೆಗಳನ್ನು ರೂಪಿಸುವುದು, ಮೀಸಲಾತಿ ಪ್ರಮಾಣ ನಿಗದಿಪಡಿಸುವುದು ಸಹಿತ ಎಲ್ಲದಕ್ಕೂ ಆಧಾರವಾಗಲಿದೆ. ಆದ್ದರಿಂದ ಸರಕಾರ ಈ ಕುರಿತು ತತ್‌ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

“ಗಣತಿಯಿಂದ ಜಾತಿ ವ್ಯವಸ್ಥೆ ಬರಲ್ಲ’
ಜಾತಿ ಗಣತಿಯಿಂದ ನಮ್ಮಲ್ಲಿ ಜಾತಿ ವ್ಯವಸ್ಥೆ ಬಂದುಬಿಡುವುದಿಲ್ಲ; ಬದಲಿಗೆ ಪ್ರತಿ ಸಮುದಾಯದ ಮತ್ತು ವ್ಯಕ್ತಿಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯುತ್ತದೆ. ಅದನ್ನು ಆಧರಿಸಿ ಕಾರ್ಯಕ್ರಮಗಳನ್ನು ರೂಪಿಸಬಹುದು, ಅನುದಾನ ನೀಡಬಹುದು. ಆ ಮೂಲಕ ತುಳಿತಕ್ಕೊಳಗಾದ ಸಮುದಾಯವನ್ನು ಮುಖ್ಯವಾಹಿನಿಗೆ ತರುವುದು ಸರಕಾರದ ಜವಾಬ್ದಾರಿಯಾಗಬೇಕು. ಮಂಡಲ್‌ ಆಯೋಗ ಕೂಡ ಇದಕ್ಕೆ ಒತ್ತು ನೀಡಿತ್ತು. ಸಾಮಾಜಿಕ ನ್ಯಾಯದ ಪರ ಮಾತನಾಡಿದರೆ ಸಾಲದು. ಅದರಂತೆ ನಡೆದುಕೊಳ್ಳಬೇಕು ಎಂದು ಕುಟುಕಿದರು.

ಮಾಜಿ ಸಚಿವ ಎಚ್‌. ಎಂ. ರೇವಣ್ಣ, ವಿಧಾನ ಪರಿಷತ್‌ ಸದಸ್ಯ ಪಿ.ಆರ್‌. ರಮೇಶ್‌, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಜಿ.ಡಿ. ಗೋಪಾಲ್‌ ಮತ್ತಿತರರು ಉಪಸ್ಥಿತರಿದ್ದರು.

2-3 ದಿನಗಳಲ್ಲಿ ಅಭ್ಯರ್ಥಿ ಅಂತಿಮ
ಬೆಂಗಳೂರು: ಉಪ ಚುನಾವಣೆ ನಡೆಯಲಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಹಲವರು ಆಕಾಂಕ್ಷಿಗಳಿದ್ದಾರೆ. ಎರಡು-ಮೂರು ದಿನಗಳಲ್ಲಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

Advertisement

“ಹನುಮಂತರಾಯಪ್ಪ ನನ್ನನ್ನು ಭೇಟಿ ಮಾಡಿದ್ದು ನಿಜ. ಆದರೆ, ನಾನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸಂಸದ ಡಿ.ಕೆ. ಸುರೇಶ್‌ ಹಾಗೂ ಕ್ಷೇತ್ರದ ಸ್ಥಳೀಯ ಮುಖಂಡರನ್ನ ಭೇಟಿ ಮಾಡಲು ಸಲಹೆ ಮಾಡಿದ್ದೇನೆ. ಅವರು ನಾಯಕರನ್ನು ಭೇಟಿ ಮಾಡಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next