ಕಲಬುರಗಿ: ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರುತ್ತಿರುವ ಕೇಂದ್ರ ಸರ್ಕಾರವು ಮತ್ತೆ 2024ರಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದೇಯಾದರೆ ಸಂವಿಧಾನಕ್ಕೆ ಆಪತ್ತು ಎದುರಾಗಲಿದೆ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2024ರಲ್ಲಿ ಬಹುಮತದೊಂದಿಗೆ ಬಿಜೆಪಿ ಅಧಿಕಾರ ಬಂದರೆ ಸಂವಿಧಾನ ಬದಲಾಯಿಸುವ ಎಲ್ಲ ಪ್ರಯತ್ನ ಬಿಜೆಪಿ ಹೊಂದಿದೆ. ಹೀಗಾಗಿ ಸಂವಿಧಾನ ಬದಲಾಯಿಸುವುದನ್ನು ತಪ್ಪಿಸಲು ಜನರು ಈಗಲಾದರೂ ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿದೆ ಎಂದು ಖರ್ಗೆ ಹೇಳಿದರು.
ಇದನ್ನೂ ಓದಿ:ವೈಯಕ್ತಿಕ ಸಮಸ್ಯೆಗಳನ್ನು ಮೊದಲು ಹೇಳುವುದೇ ಬೊಮ್ಮಾಯಿಗೆ: ಸಚಿವ ನಿರಾಣಿ
ಬಲವಂತದ ಮತಾಂತರ ತಡೆಯಲು ಈಗಾಗಲೇ ಭಾರತೀಯ ದಂಡ ಸಂಹಿತೆಯಡಿ ಕ್ರಮ ಕೈಗೊಳ್ಳಲು ಅವಕಾಶವಿದೆ. ಇಷ್ಟಿದ್ದರೂ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಜಾರಿಗೆ ತರುತ್ತಿರುವುದನ್ನು ನೋಡಿದರೆ ಬಿಜೆಪಿ ತನ್ನ ಅಜೆಂಡಾ ಹೇಗಾದರೂ ಮಾಡಿ ಕಾರ್ಯರೂಪಕ್ಕೆ ತಂದೇ ತರುತ್ತೇವೆ ಎಂಬುದಕ್ಕೆ ಸಾಕ್ಷೀಕರಿಸುವಂತಿದೆ ಎಂದು ಟೀಕಿಸಿದರು.
ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಕ್ಷದ ಪ್ರಚಾರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳೊದೊಂದು ಮಾಡೋದು ಇನ್ನೊಂದು. ಸಂಸತ್ ಅಧಿವೇಶನ ನಡೆದಾಗ ಸಂಸತ್ ಗೆ ಬಾರದ ಮೋದಿ ಚುನಾವಣಾ ಪ್ರಚಾರದಲ್ಲಿ 15 ದಿನಗಳಟ್ಟಲೇ ತೊಡಗಿಸಿಕೊಳ್ಳುತ್ತಾರೆ. ಈಗ ಚುನಾವಣಾ ಎದುರಾಗುತ್ತಿರುವುದರಿಂದ ಪ್ರತಿದಿನ ಟಿವಿ ಹಾಗೂ ಮಾಧ್ಯಮಗಳ ಮುಂದೆ ಬರುತ್ತಿದ್ದಾರೆ. ಯಾಕೆ ಲೋಕಸಭೆ ಹಾಗೂ ರಾಜ್ಯಸಭೆಗೇಕೆ ಬಂದು ಹೇಳಲಿಲ್ಲ. ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಅನೇಕ ರಾಷ್ಟ್ರಗಳು ಕೆಲಸ ಮಾಡುತ್ತಿವೆ. ಈ ಹಿಂದೆ ಕೋವಿಡ್ ಅಲೆಯಲ್ಲಿ ದೇಶದಲ್ಲಿ 50 ಲಕ್ಷ ಜನ ಸಾವನ್ನಪ್ಪಿದ್ದರೂ ನಾಲ್ಕೈದು ಲಕ್ಷ ಎಂಬುದಾಗಿ ತೋರಿಸಲಾಗಿದೆ. ಹೀಗೆ ಮೋದಿ ಆಡಳಿತ ನಡೆಯುತ್ತಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಪ್ರಚಾರ ಮಾಡುವುದು ಹಿಂದೆಂದೂ ಆಗಿಲ್ಲ. ಮೋದಿಯಿಂದ ಇದೆಲ್ಲವೂ ನಡೆಯುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.