Advertisement

ಆರೋಪ ಸಾಬೀತುಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿ!

01:26 PM Jul 17, 2017 | Team Udayavani |

ದಾವಣಗೆರೆ: ನಾನು ಮತ್ತು ನನ್ನ ಹಿಂಬಾಲಕರು ಮರಳು ಲೂಟಿ ಮಾಡಿದ್ದೇವೆ ಎಂಬ ಆರೋಪವನ್ನು ಶಾಸಕ ಡಿ.ಜಿ. ಶಾಂತನಗೌಡ ಸಾಬೀತು ಮಾಡಿದಲ್ಲಿ ನಾನು ರಾಜಕೀಯದಿಂದಲೇ ನಿವೃತ್ತಿ ಆಗುತ್ತೇನೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.

Advertisement

ನಾನಾಗಲಿ ಹಾಗೂ ನನ್ನ ಬೆಂಬಲಿಗರಾಗಲಿ ಯಾರೂ ಸಹ ಮರಳು ಲೂಟಿ ಮಾಡಿಲ್ಲ. ಆದರೂ, ಶಾಸಕರು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ನಿಜವಾಗಿಯೂ ಅವರು ಮಾಡಿರುವಂತಹ ಆರೋಪವನ್ನ ಸಾಬೀತು ಮಾಡಿದ್ದಲ್ಲಿ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಲೂಕಿನ ಅಭಿವೃದ್ಧಿ ಹಾಗೂ ಗ್ರಾಮಗಳಲ್ಲಿ ಶಾಂತಿ- ನೆಮ್ಮದಿಯ ಕಾರಣಕ್ಕೆ ನಾನು ಮೌನವಾಗಿದ್ದೆ. ಆದರೆ, ಶಾಸಕರು ಅದನ್ನೇ ನನ್ನ ದೌರ್ಬಲ್ಯ ಎಂದು ತಿಳಿದುಕೊಂಡಿದ್ದಾರೆ. ಈಗ ನಾನು, ನನ್ನ ಹಿಂಬಾಲಕರೇ ಮರಳು ಲೂಟಿ ಮಾಡಿದ್ದೇವೆ ಎಂದು ಆರೋಪ
ಮಾಡುತ್ತಿದ್ದಾರೆ. ನನ್ನ ಬಗ್ಗೆ ಏಕವಚನದಲ್ಲೆಲ್ಲಾ ಮಾತನಾಡಿದ್ದಾರೆ. ಅದು ಅವರ ಸಂಸ್ಕೃತಿಯನ್ನ ತೋರಿಸುತ್ತದೆ. ಶಾಸಕರ ಬಗ್ಗೆ ವೈಯಕ್ತಿಕವಾಗಿ ಗೌರವ ಇದೆ. ಆದರೆ, ವಿನಾಕಾರಣ ಆರೋಪ ಮಾಡಿರುವುದನ್ನು ಸಹಿಸಲಿಕ್ಕೆ ಆಗುವುದಿಲ್ಲ ಎಂದು ತಿಳಿಸಿದರು.

ಕಳೆದ ನಾಲ್ಕು ವರ್ಷದಿಂದ ತಾಲೂಕಿನಲ್ಲಿ ಮರಳು ಸಾಗಾಣಿಕೆ, ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಪಾಲಿಶ್‌ ಮಾಡಿ, ಮಾರಾಟ ನಡೆಯುತ್ತಿದೆ ಎಂದು ಅನೇಕ ಹೋರಾಟ ನಡೆಸಲಾಗಿದೆ. ಜಿಲ್ಲಾಧಿಕಾರಿ ಒಳಗೊಂಡಂತೆ ಅನೇಕ ಅಧಿಕಾರಿಗಳ ಎದುರಿನಲ್ಲೇ ತಾಲೂಕಿನಲ್ಲಿ ನಡೆಯುತ್ತಿರುವ ಎಲ್ಲವನ್ನೂ ತಿಳಿಸಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ತಾಲೂಕಿನಲ್ಲಿ ಮನೆ, ಶೌಚಾಲಯ ಕಟ್ಟಿಕೊಳ್ಳಲಿಕ್ಕೆ ಮರಳು ಸಿಗುತ್ತಿಲ್ಲ. ಸಣ್ಣ ಪುಟ್ಟ ಕೆಲಸಕ್ಕೆ ಎತ್ತಿನಗಾಡಿ, ಬೈಕ್‌ನಲ್ಲಿ ಮರಳು ತರುವವರ ವಿರುದ್ಧ ಕೇಸ್‌ ದಾಖಲಾಗಿವೆ. ಹೊನ್ನಾಳಿಯಲ್ಲಿ 110, ನ್ಯಾಮತಿಯಲ್ಲಿ 40, ಗೋವಿನಕೋವಿಯಲ್ಲಿ 20 ಜನರ ವಿರುದ್ಧ ಕೇಸ್‌ ದಾಖಲಾಗಿವೆ. ಎತ್ತಿನಗಾಡಿಯಲ್ಲಿ ಮರಳು ತೆಗೆದುಕೊಂಡು ಹೋಗುತ್ತಿರುವುದಕ್ಕೆ ಕೇಸ್‌ ದಾಖಲಾದವರು ಶಾಸಕರ ಬಳಿಗೆ ಹೋದರೆ, ನಾನು ಯಾವ ಕಾರಣಕ್ಕೂ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿ ಕಳಿಸಿದ್ದಾರೆ ಎಂದು ತಿಳಿಸಿದರು.

ಹೊನ್ನಾಳಿ-ನ್ಯಾಮತಿ ರಸ್ತೆ ಕಾಮಗಾರಿಯನ್ನ ಗುತ್ತಿಗೆದಾರರು ಅರ್ಧಕ್ಕೆ ಬಿಟ್ಟಿದ್ದಾರೆ. ಕೆಲಸದ ಸಹವಾಸವೇ, ಮರಳು ಬೇಡ ಎನ್ನುತ್ತಿದ್ದಾರೆ. ಆದರೂ, ಆ ರಸ್ತೆ ಕೆಲಸದ ಹೆಸರಲ್ಲಿ ಶಾಸಕರು ಮರಳು ಪಡೆದಿದ್ದಾರೆ ಎಂದು ಎಲ್ಲಾ ಕಡೆ ನಾವು ಹೋರಾಟ ಮಾಡಿದ ನಂತರ ಜು. 13 ರಂದು 119 ಲೋಡ್‌ ಮರಳುಗೆ ಸಂಬಂಧಿಸಿದಂತೆ 7.22 ಲಕ್ಷ ಹಣವನ್ನು ಶಾಸಕರೇ ಕಟ್ಟಿದ್ದಾರೆ. ಅದರಲ್ಲಿ 60 ಲೋಡ್‌ ಮರಳಿನ ಟ್ರಿಪ್‌ಶೀಟ್‌ ಇಲ್ಲ. ಮರಳುಗೆ ಸಂಬಂಧಿಸಿದಂತೆ ಚೆಕ್‌ ಮೂಲಕವೇ ಹಣ ಕಟ್ಟಬೇಕು. ಆದರೂ, ಕ್ಯಾಷ್‌
ಕಟ್ಟಲಾಗಿದೆ. ಇಷ್ಟಕ್ಕೂ ಶಾಸಕರೂ ಹಣ ಕಟ್ಟಿರುವುದಾದರೂ ಯಾವ ಕಾರಣಕ್ಕೆ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಬಡವರು ಒಂದು ಎತ್ತಿನಗಾಡಿ ಮರಳು ತೆಗೆದುಕೊಂಡು ಹೋಗುವುದಕ್ಕೆ ಬಿಡುವುದಿಲ್ಲ. ಇನ್ನು ಉದ್ರಿಯ ಮಾತೇ ಇಲ್ಲ. ಆದರೂ, ಮರಳು ತೆಗೆದುಕೊಂಡ ಒಂದು ತಿಂಗಳ ನಂತರ ಶಾಸಕರಿಂದ ಹಣ ಕಟ್ಟಿಸಿಕೊಂಡಿದ್ದಾರೆ. ಹಾಗಾದರೆ ಜಿಲ್ಲಾಡಳಿತ ಎಲ್ಲರಿಗೂ ಉದ್ರಿಯಾಗಿ ಮರಳು ಕೊಡುತ್ತದೆಯೇ. ಜಿಲ್ಲಾಡಳಿತ ಈ ಬಗ್ಗೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ಜಿಪಂ ಸದಸ್ಯ ಸುರೇಂದ್ರನಾಯ್ಕ, ತಾಪಂ ಸದಸ್ಯ ರಂಗಪ್ಪ, ಹೊನ್ನಾಳಿ ತಾಲೂಕು ಬಿಜೆಪಿ ಅಧ್ಯಕ್ಷ ಡಿ.ಜಿ. ರಾಜಪ್ಪ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌, ನಾಗರಾಜ್‌, ಕುಬೇಂದ್ರಪ್ಪ, ಶಿವಾನಂದ್‌, ಪ್ರೇಮಕುಮಾರ್‌ ಬಂಡಿಗಡಿ. ಉಮೇಶ್‌ನಾಯ್ಕ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next