Advertisement

ಆ ವ್ಯಕ್ತಿ ಬರದೇ ಹೋಗಿದ್ದರೆ…

09:50 AM Dec 04, 2019 | Team Udayavani |

ನನ್ನ ಮೊಮ್ಮಗನನ್ನು ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಹಾಸ್ಟೆಲ್‌ಗೆ ಸೇರಿಸುವ ಸಲುವಾಗಿ ಬಾಡಿಗೆ ಕಾರೊಂದರಲ್ಲಿ ಬೆಳಗಿನ ಜಾವ ಐದು ಘಂಟೆಗೆ ಚಿತ್ರದುರ್ಗದಿಂದ ಹೊರಟೆ. ಅಲ್ಲಿ ನಮ್ಮ ಎಲ್ಲ ಕೆಲಸ ಮುಗಿಸಿ ಮತ್ತೆ ನಾನು ನನ್ನ ಮಗಳು ಲಲಿತೆ ವಾಪಸ್ಸು ಹೊರಟಾಗ ಸಂಜೆ 6 ಗಂಟೆ. ಮಳೆಯ ಸೂಚನೆ ಜೋರಾಗಿಯೇ ಇತ್ತು.

Advertisement

ಹೇಗೂ ಕಾರು ಇದೆಯಲ್ಲ ಅನ್ನೋ ಧೈರ್ಯ. ಸಂಜೆ ಬಂದನೆಂಟರು ವಾಪಸ್‌ ಹೋಗೋಲ್ಲ ಅನ್ನೋ ಹಾಗೆ ಮುಂಗಾರು ಮಳೆ

ಧೋ ಎಂದು ಸುರಿಯತೊಡಗಿತು. ಗಂಟೆ ರಾತ್ರಿ ಒಂಭತ್ತು. ಇದ್ದಕ್ಕಿದ್ದಂತೆ ನಮ್ಮ ಕಾರು ಧಡ್‌, ಧಡ್‌ ಎಂದು ಎಡ

ತಿರುವಿನ ಪ್ರಪಾತದ ಪಕ್ಕದಲ್ಲಿ ನಿಂತುಬಿಟ್ಟಿತು. ಕಾರಿನೊಳಗಿದ್ದ ನಮ್ಮ ಎದೆ ಝಲ್‌ ಎಂದಿತು.

ಹೊರಗೆ ಗಾಢಾಂಧಕಾರ. ಕಾರಿನ ಲೈಟೂ ಹೊತ್ತುತ್ತಿಲ್ಲ. ನಮಗೆ ಕಾಣದ ದೇವರೆಲ್ಲ ನೆನಪಿಗೆ ಬಂದರು. ಏನಾಯ್ತಪ್ಪ ಎಂದೆ ಡ್ರೆವರ್‌ಗೆ. “ಮೇಡಮ್‌, ಕಾರು ಒಂಚೂರೂ ಮುಂದೋಗ್ತಿಲ್ಲಅಂದ . ರಾತ್ರಿ ಸಮಯ. ಕಾರಿನಲ್ಲಿ ತಾಯಿಮಗಳು ಇಬ್ಬರೇ! ಅಷ್ಟರಲ್ಲಿ ಎದುರಿಗೆ ಸ್ಕೂಟರ್‌ ಸವಾರನೊಬ್ಬ ಬಂದವನೇ, ಬೆಳಕಿಗಾಗಿ ಬೈಕ್‌ ಚಾಲನೆಯಲ್ಲೇ ಇಟ್ಟು, “ಏನಾಗಿದೆ?’ ಅಂದ. ಡ್ರೈವರ್‌ ಬೈಕ್‌ನ ಬೆಳೆಕಿನಲ್ಲಿಯೇ ಬಾನೆಟ್‌ ತೆರೆದು ನೋಡಿ ಅಣ್ಣಾ, ಗಾಡಿಯ ಬೆಲ್ಟ್ ಕಟ್ಟಾಗಿದೆ. ಕಾರು ಮುಂದೆ ಹೋಗೋಲ್ಲಎಂದ. ಅವನ ಮಾತಿಂದ ನಮ್ಮ ಜಂಘಾಬಲವೇ ಉಡುಗಿಹೋಯ್ತು. ಈ ರಾತ್ರಿಯಲ್ಲಿ ನಾವು ಎಲ್ಲಿ ಹೋಗಬೇಕು ಈ ಕಾಡಿನಲ್ಲಿ? ಮಾಂಗಲ್ಯ ಸರ, ಕೈಯಲ್ಲಿ ನಾಲ್ಕು ಬಳೆ, ಸ್ವಲ್ಪ ದುಡ್ಡು ಇತ್ತು.. ಈ ಸ್ಕೂಟರ್‌ನವನು ಏನಾದರೂ ನಕ್ಸಲೈಟೆ? ಹೀಗೆ ಏನೇನೋ ಕೆಟ್ಟ ಆಲೋಚನೆಗಳೇ ಧುತ್ತೆಂದು ಎರಗಿ ಆ ಚಳಿಯಲ್ಲೂ ಮೈ ಬೆವರಿದ್ದು ದಿಟ! ಆಗ ಸ್ಕೂಟರಿನವನು ಅಮ್ಮಾ ನಮ್ಮ ಮನೆಗೇ ಬನ್ನಿ .

Advertisement

ಅಲ್ಲೇ ಉಳ್ಕೊಂಡು ಬೆಳಗ್ಗೆ ಹೋಗಿಅಂದ. ಈ ದಾರಿಹೋಕನನ್ನು ನಂಬುವುದು ಹೇಗೆ? ಇಲ್ಲೇ ಇರೋಣವೆಂದರೆ ಕಾರಿನ ಒಳಗೆ ರಾತ್ರಿಯಿಡೀ ಕಳೆಯೋದು ಹೇಗೆ? ನಾನು ಏನೂ ಮಾತನಾಡದದ್ದನ್ನು ನೋಡಿ ಅಮ್ಮಾ, ಬೇರೆ ಯಾವುದಾದ್ರೂ ಕಾರ್‌ ಬಾಡಿಗೆಗೆ ಹೇಳಾ ಎಂದ. ಆಯ್ತು ಎಂದೆ. ಫೋನಿನಲ್ಲಿ ಮಾತನಾಡಿ ಇನ್ನು ಹತ್ತು ನಿಮಿಷದಲ್ಲಿ ಬೇರೆ ಕಾರು ಬರುತ್ತೆ. ಬಾಡಿಗೆ ಮಾತ್ರ ಅವನು ಹೇಳಿದಷ್ಟು ಕೊಡಿಅಂದ. ಕಾರು ಬಂದನಂತರ ಹೋಗಪ್ಪಾ ಎಂದೆ ನಾನು. ಹದಿನೈದು ನಿಮಿಷದ ನಂತರ ಕಾರೊಂದು ಬಂದು ನಿಂತಿತು. ಆಗ ನನಗೆ ಸ್ವಲ್ಪ ಧೈರ್ಯ ಬಂತು. ನಿನ್ನ ಹೆಸರೇನಪ್ಪ ಎಂದೆ. ಹರ್ಷ ಅಂದ. ನಮ್ಮನ್ನು ಬೇರೊಂದು ಕಾರಿಗೆ ಹತ್ತಿಸಿ, “ನಾನು ಬರ್ತಿನಿ ಮೇಡಮ್‌ಅಂತ ಹೊರಟೇ ಬಿಟ್ಟ. ಯಾಕೋ ನನ್ನ ಕಣ್ಣಾಲಿಗಳು ತುಂಬಿ ಬಂದವು.

ಆವತ್ತು ಚಿತ್ರದುರ್ಗವನ್ನು ತಲುಪಿದಾಗ ರಾತ್ರಿ 12 ಘಂಟೆ. ಹರ್ಷ ಯಾರೋ ಗೊತ್ತಿಲ್ಲ. ಆದರೆ ಇಂದು ನಮ್ಮ ಕುಟುಂಬದವರಿಗೆಲ್ಲ ತುಂಬಾ ಆತ್ಮೀಯ. ಆವತ್ತು ದೇವರೇ ಹರ್ಷನ ರೂಪದಲ್ಲಿ ಬಂದು ನಮ್ಮನ್ನು ಕಾಪಾಡಿದ ಎಂಬ ನಂಬಿಕೆ ನಮ್ಮದು.

 

ಎಮ್‌.ಎಸ್‌.ಮಂಜುಳ ಡಾ. ಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next