ಹೊನ್ನಾಳಿ: ಮಾತು ಬೆಳ್ಳಿ, ಮೌನ ಬಂಗಾರ. ಮೌನದಲ್ಲಿ ಅಗಾಧ ಶಕ್ತಿ ಇರುವುದರಿಂದಲೇ ನಮ್ಮ ಪೂರ್ವಜರು ಮೌನದ ಬಗ್ಗೆ ಈ ಗಾದೆ ಮಾತು ಸೃಷ್ಟಿಸಿದ್ದಾರೆ ಎಂದು ಹಿರೇಕಲ್ಮಠದ ಸ್ಥಿರ ಪಟ್ಟಾಧ್ಯಕ್ಷರಾದ ಡಾ| ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶನಿವಾರ ರಾತ್ರಿ ತಮ್ಮ ಮೂರು ದಿನದ ಮೌನ ಲಿಂಗ ಪೂಜಾನುಷ್ಠಾನದ ಮುಕ್ತಾಯ ಸಮಾರಂಭದ ಧರ್ಮಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಸೂರ್ಯ ಶಕ್ತಿಯ ರೂಪ. ವಿಶ್ವಕ್ಕೆ ಬೆಳಕು ಕೊಡುವ ಸೂರ್ಯ, ತಂಪು ನೀಡುವ ಚಂದ್ರ ಎಂದೂ ಮಾತಾಡಿಲ್ಲ. ಮೌನವಾಗಿ ತಮ್ಮ ಕೆಲಸ ಮಾಡಿ ಜೀವ ಸಂಕುಲಕ್ಕೆ ಒಳಿತನ್ನು ಮಾಡುತ್ತಿವೆ ಎಂದು ಹೇಳಿದರು.
ಮೂರು ದಿನಗಳ ಕಾಲ ನಡೆದ ಮೌನ ಲಿಂಗ ಪೂಜಾನುಷ್ಠಾನ ಕಾರ್ಯಕ್ರಮಕ್ಕೆ ಬೆಳಗುತ್ತಿ-ಮಲ್ಲಿಗೇನಹಳ್ಳಿ ಅವಳಿ ಗ್ರಾಮಗಳ ಸಹಕಾರ ಶ್ಲಾಘನೀಯವಾಗಿತ್ತು. ಗ್ರಾಮಗಳ ಸುತ್ತಮುತ್ತ ಇರುವ ಕೆರೆಗಳನ್ನು ತುಂಬಿಸುವ ಕೈಂಕರ್ಯಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ನುಡಿದರು.
ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಮಠಾಧೀಶರು ಕೈಗೊಳ್ಳುವ ಎಲ್ಲಾ ಕಾರ್ಯಗಳು ಲೋಕ ಕಲ್ಯಾಣಕ್ಕಾಗಿ ಎನ್ನುವುದನ್ನು ನಾವೆಲ್ಲ ಅರಿತುಕೊಳ್ಳಬೇಕಿದೆ. ಹಿರೇಕಲ್ಮಠದಲ್ಲಿ ಲಿಂ| ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಎಲ್ಲಾ ಕಾರ್ಯಕ್ರಮಗಳನ್ನು ಚಾಚೂ ತಪ್ಪದೆ ಇಂದಿನ ಶ್ರೀಗಳು ಮುಂದುವರಿಸಿದ್ದು, ಎಲ್ಲಾ ಭಕ್ತರು ಸಹಕಾರ ನೀಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಭಕ್ತರ ಏಳ್ಗೆಗಾಗಿ ಶ್ರೀಗಳು ಮೂರು ದಿನಗಳ ಕಾಲ ಮೌನವಾಗಿದ್ದುಕೊಂಡು ಲಿಂಗ ಪೂಜೆಗೈಯ್ದು ಈ ಭಾಗದ ಜನರನ್ನು ಹರಿಸಿದ್ದಾರೆ ಎಂದರು. ಬಿಜೆಪಿ ಮುಖಂಡ ಎಂ.ಪಿ. ರಮೇಶ್ ಮಾತನಾಡಿ, ಧರ್ಮ ಬಿಟ್ಟು ನಡೆಯಬಾರದು. ಧರ್ಮವೇ ನಮ್ಮ ಬಾಳಿನ ಬೆಳಕು. ಭಗವಂತನನ್ನು ಸದಾ ಸ್ಮರಿಸಿದರೆ ಮನುಷ್ಯರ ಬದುಕು ಹಸನಾಗುತ್ತದೆ ಎಂದರು. ರಾಮಲಿಂಗೇಶ್ವರ ಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿದ್ದರು.
ತಾ.ಪಂ ಮಾಜಿ ಸದಸ್ಯರಾದ ಜೆ.ಕೆ. ಸುರೇಶ್, ವಸಂತ ನಾಯ್ಕ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಎಸ್. ಬೀರಪ್ಪ, ಚನ್ನಪ್ಪಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರುಮಠ, ನಿರ್ದೇಶಕರಾದ ಕೆ.ಜಿ. ವೀರಭದ್ರಪ್ಪ, ಕೋರಿ ಮಲ್ಲಿಕಾರ್ಜುನಪ್ಪ, ಚನ್ನೇಶಯ್ಯ, ಚನ್ನಬಸಯ್ಯ ಇತರರು ಉಪಸ್ಥಿತರಿದ್ದರು. ಗ್ರಾಮದ ಕಾವೇರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.