Advertisement

ಸಿದ್ದು ಕೋಲಾರಕ್ಕೆ ಬಂದರೆ ಸೋಲು ಖಚಿತ; ಸಚಿವ ಡಾ. ಕೆ.ಸುಧಾಕರ್‌

06:18 PM Jul 22, 2022 | Team Udayavani |

ಕೋಲಾರ: ನಾನು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಶ್ರೀನಿವಾಸಪುರದ ಉತ್ತರ ಕುಮಾರನಂತವರು ಇನ್ನಷ್ಟು ಮಂದಿ ಹೋಗಿ ಆಹ್ವಾನಿಸಿದರೂ ಅವರು ಕೋಲಾರಕ್ಕೆ ಬರುವುದಿಲ್ಲ. ಸಿದ್ದು ಅವರನ್ನು ಮುಖ್ಯಮಂತ್ರಿ ಮಾಡಲು ವಿರೋಧ ಮಾಡಿದವರಲ್ಲಿ ಈ ಉತ್ತರ ಕುಮಾರನು ಒಬ್ಬನಾಗಿದ್ದು, 2023ರಲ್ಲಿ ಅವರನ್ನು ಸೋಲಿಸಲು ಕೋಲಾರದಲ್ಲಿ ಖೆಡ್ಡಾ ತೋಡಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ವಾಗ್ಧಾಳಿ ನಡೆಸಿದರು.

Advertisement

ನಗರದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಸಾಧನಾ ಸಮಾವೇಶ ಕುರಿತು ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಮೇಶ್‌ ಕುಮಾರ್‌ ಅವರನ್ನು ಗುರಿಯಾಗಿಟ್ಟುಕೊಂಡು ವಾಗ್ಧಾಳಿ ನಡೆಸಿ, ಶ್ರೀನಿವಾಸಪುರದಲ್ಲಿ 2023ರಲ್ಲಿ ಸೋಲು ಅನುಭವಿಸುವ ವಾತಾವರಣ ಸೃಷ್ಟಿಯಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

ವರ್ತೂರು ಪ್ರಕಾಶ್‌ ಆಯ್ಕೆ ಖಚಿತ: 2023ರ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ವರ್ತೂರು ಪ್ರಕಾಶ್‌ ಆಯ್ಕೆಯಾಗುವುದು ಖಚಿತ. ಎಲ್ಲಾ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮಾಜಿಕ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಇಂತಹ ಜನ ನಾಯಕ ಆಯ್ಕೆಯಾಗುತ್ತಾರೆ. ಹೇಳಿ ಮಾಡುವುದು ಬೇರೆ. ಆದರೆ, ಅವರು ಮಾಡಿ ಹೇಳುತ್ತಿದ್ದಾರೆ.ಸದಾ ನಿಮ್ಮೊಟ್ಟಿಗೆ ಇರುವ ಜನನಾಯಕರ ಅಗತ್ಯವಾಗಿದೆ ಎಂದು ವಿವರಿಸಿದರು.

ಸ್ವಯಂ ನಿವೃತ್ತಿ ಘೋಷಣೆ: ಈಗ ಅಧಿಕಾರದಲ್ಲಿರುವವರು ಯಾರಾದರೂ ಕಾಣಿಸುತ್ತಾರೆಯೇ? ಕೋಲಾರ ನಗರದೊಳಗೆ ಹೋದರೆ ಏನಕ್ಕೆ ಬಂದ್ವಿ ಅನಿಸುತ್ತಿದೆ. ಇದಕ್ಕಾಗಿ ಹಾಲಿ ಶಾಸಕರು ಸ್ವಯಂ ನಿವೃತ್ತಿ ಘೋಷಣೆ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಉತ್ತರಕುಮಾರ ಸೋಲು ಖಚಿತ: ಖಾಲಿ ಡಬ್ಟಾ ಆಗಿರುವ ಕಾಂಗ್ರೆಸ್‌ ಮುಖ್ಯಮಂತ್ರಿ ಕುರ್ಚಿಗಾಗಿ ಇಬ್ಬರು ಕಿತ್ತಾಡುತ್ತಿದ್ದಾರೆ. ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ. 2023ಕ್ಕೆ ಮಾಲೂರು ಮಂಜುನಾಥ್‌ಗೌಡ ಗೆಲ್ಲುವುದು ಖಚಿತ. ಶ್ರೀನಿವಾಸಪುರದಲ್ಲಿ ಉತ್ತರಕುಮಾರ ಸೋಲು ಖಚಿತ. ಕಾರ್ಯಕರ್ತರು ಮೈಮರೆಯದೆ ಗಂಭೀರವಾಗಿ ಚುನಾವಣೆ ಎದುರಿಸಲು ಮುಂದಾಗಬೇಕು ಎಂದು ಎಚ್ಚರಿಸಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ, ಕೋಲಾರದಲ್ಲಿ ಈ ಬಾರಿ ಭಾರತೀಯ ಜನತಾ ಪಾರ್ಟಿ ಬಾವುಟ ಹಾರಬೇಕು. ವರ್ತೂರು ಪ್ರಕಾಶ್‌ ನಮಗೆ ಸಿಕ್ಕಿರುವುದು ಪಕ್ಷದ ಪುಣ್ಯ. ಈಗಾಗಲೇ ಅವರನ್ನು ಕ್ಷೇತ್ರದ ಅಭ್ಯರ್ಥಿಯೆಂದು ಘೋಷಿಸಲಾಗಿದೆ. ಅವರು ವಿರುದ್ಧ ಯಾರೇ ಸ್ಪರ್ಧಿಸಿದರೂ ಪ್ರಚಾರ ಮಾಡದೆ ಇದ್ದರೂ ಪ್ರಕಾಶ್‌ ಆಯ್ಕೆಯಾಗುತ್ತಾರೆ ಎಂದು ಹೇಳಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ವರ್ತೂರು ಪ್ರಕಾಶ್‌ ಪಾಲಿಗೆ ಕೋಲಾರ ಕ್ಷೇತ್ರ ಬಹಳ ಕಿರಿದಾಗಿದೆ. 2023ರ ಚುನಾವಣೆಯಲ್ಲಿ ಗೆದ್ದು ವಿಧಾನ ಸೌಧ ಪ್ರವೇಶ ಮಾಡುವುದು ಖಚಿತ ಎಂದು ತಾಮ್ರದ ತಟ್ಟೆಯಲ್ಲಿ ಬರೆದು ಇಟ್ಟುಕೊಳ್ಳಬೇಕು. ಬಸವರಾಜ ಬೊಮ್ಮಾಯಿ ಸಿಎಂ ಆಗಿ ಒಂದು ವರ್ಷ ಕಳೆದಿದೆ.

ದೊಡ್ಡಬಳ್ಳಾಪುರದಲ್ಲಿ ಇದೇ ತಿಂಗಳು ಸಾಧನಾ ಸಮಾವೇಶ ಏರ್ಪಡಿಸಲಾಗಿದ್ದು, ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮನವಿ ಮಾಡಿದರು. ಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷ ಡಾ.ಕೆ.ಎನ್‌.ವೇಣುಗೋಪಾಲ್‌, ಮಾಜಿ ಶಾಸಕರಾದ ಕೆ.ಎಸ್‌.ಮಂಜುನಾಥ್‌ಗೌಡ, ಎಂ. ನಾರಾಯಣ ಸ್ವಾಮಿ, ವಕ್ತಾರ ಎಸ್‌.ಬಿ. ಮುನಿವೆಂಟಪ್ಪ, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್‌. ವೆಂಕಟೇಶ್‌, ಕೆಯುಡಿಎ ಅಧ್ಯಕ್ಷ ವಿಜಯಕುಮಾರ್‌ ಮತ್ತಿತರ ಮುಖಂಡರು ಹಾಜರಿದ್ದರು.

ಶಾಸಕ ರಮೇಶ್‌ ಕುಮಾರ್‌ ಸೋಲು ಖಚಿತ: ವರ್ತೂರ್‌ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 3 ವರ್ಷ ಕಳೆದಿದೆ. ಯಡಿಯೂರಪ್ಪ ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿ 1 ವರ್ಷ ಪೂರೈಸಿದೆ. ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸಾಧನಾ ಸಮಾವೇಶ ನಡೆಸಲಾಗುತ್ತಿದೆ. 1 ಲಕ್ಷಕ್ಕೂ ಹೆಚ್ಚು ಮಂದಿ ಸೇರಿಸಲಾಗುವುದು ಎಂದು ಮಾಜಿ ಸಚಿವ ವರ್ತೂರು ಆರ್‌.ಪ್ರಕಾಶ್‌ ತಿಳಿಸಿದರು.

ಕಾಂಗ್ರೆಸ್‌ನಲ್ಲಿ ನೂರು ಮಂದಿ ಕಾರ್ಯಕರ್ತರು ಇದ್ದಾರೆ ಅಷ್ಟೇ. ಮುಂದೆ ಆಗಸ್ಟ್‌, ಸೆಪ್ಟೆಂಬರ್‌ ತಿಂಗಳೊಳಗೆ ಜೆಡಿಎಸ್‌ ಖಾಲಿಯಾಗುತ್ತದೆ. ಶ್ರೀನಿವಾಸಪುರದಲ್ಲಿ ರಮೇಶ್‌ಕುಮಾರ್‌ ಸೋಲು ಖಚಿತ. ಮಾಲೂರಲ್ಲಿ, ಬಂಗಾರಪೇಟೆಯಲ್ಲಿ ಉಳಿದು ಹಿಂದುಳಿದ ವರ್ಗಗಳ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುತ್ತೇನೆ. ರಮೇಶ್‌ಕುಮಾರ್‌ ಕೋಲಾರ ಕ್ಷೇತ್ರದ ಐದು ಸಾವಿರ ಮಂದಿಯನ್ನು ಸೇರಿಸಿದರೆ ನಾನು ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ಸವಾಲು ಹಾಕಿದರು. ಬೆಂಗಳೂರಿನಿಂದ ಕೋಲಾರಕ್ಕೆ ಬಂದಿದ್ದ ಉದ್ಯಮಿಗಳು ಜಾಗ ಖಾಲಿ ಮಾಡಿದರು. ಈಗ ಟೊಮೆಟೊ ಮಾರೋರು ಮಾತ್ರ ಓಡಾಡುತ್ತಿದ್ದಾರೆ. ಶೀಘ್ರದಲ್ಲೇ ಅವರು ಸುಮ್ಮನಾಗಿ ಮನೆಯಲ್ಲಿ ಇರುತ್ತಾರೆ. ಮುಂದಿನ ಡಿಸೆಂಬರ್‌ನಲ್ಲಿ ಬೃಹತ್‌ ಕಾರ್ಯ ಕ್ರಮ ನಡೆಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.

ಸಿದ್ದರಾಮಯ್ಯನವರೇ ಹುಷಾರ್‌!
ಕ್ಷೇತ್ರದ ಯಾವ ಹಳ್ಳಿಯಲ್ಲೂ ಕಾಂಗ್ರೆಸ್‌ ಇಲ್ಲ. ನಿಮ್ಮನ್ನು ಬಲಿ ಪಡೆಯಲು ಹುನ್ನಾರ ನಡೆಸಲು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ತಂಡ ಹುನ್ನಾರ ನಡೆಸುತ್ತಿದೆ. ನಿಮ್ಮನ್ನು ಭೇಟಿ ಮಾಡಲು ಬಂದಿದ್ದ ಮುಖಂಡರ ಪೈಕಿ ಕೇವಲ 20 ಮಂದಿ ಮಾತ್ರ ಕಾಂಗ್ರೆಸ್‌ ನವರು. ಉಳಿದವರೆಲ್ಲ ಶ್ರೀನಿವಾಸಪುರ, ಬಂಗಾರಪೇಟೆ ಕ್ಷೇತ್ರದ ಬೇರೆಯವರು. ಎಚ್ಚರಿಕೆಯಿಂದ ಇರಬೇಕು. ನಮ್ಮ ಸಮುದಾಯಕ್ಕೆ ಅವಮಾನ ಆಗಬಾರದು ಎಂಬ ಉದ್ದೇಶದಿಂದ ಹೇಳುತ್ತಿದ್ದೇನೆ.
ವರ್ತೂರ್‌ ಪ್ರಕಾಶ್‌, ಮಾಜಿ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next