ಮೈಸೂರು: ಸಿದ್ದರಾಮಯ್ಯ ಒಂದು ವಾರ ಸುಮ್ಮನಿದ್ದರೆ ರಾಜ್ಯ ಶಾಂತವಾಗಿರುತ್ತದೆ. ದಿನ ಬೆಳಗಾದರೆ ಟ್ವಿಟರ್ ನಲ್ಲಿ ಕುಟ್ಟುವುದನ್ನು ನಿಲ್ಲಿಸಬೇಕು. ನಾವು ಇನ್ನೂ ಕಠಿಣವಾಗಿ ಮಾತಾಡಬಹುದು. ಆದರೆ ಅಸಂವಿಧಾನಿಕವೆಂದು ಮಾತನಾಡುತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ತನ್ನ ವಿರುದ್ದ ಕೂಗು ಮಾರಿಗಳನ್ನು ಬಿಟ್ಟಿದ್ದಾರೆ ಎಂಬ ಸಿದ್ದರಾಮಯ್ಯ ಟ್ವೀಟ್ ವಿಚಾರಕ್ಕೆ ತಿರುಗೇಟು ನೀಡಿದ ಅವರು, ಕರ್ನಾಟಕದ ಅತಿ ದೊಡ್ಡ ಕೂಗುಮಾರಿಯೆಂದರೆ ಅದು ಸಿದ್ದರಾಮಯ್ಯ. ದಿನಾ ಬೆಳಗೆದ್ದು ಅರುಚುತ್ತಲೇ ಇರುತ್ತಾರೆ. ದಿನಾ ಮಾತನಾಡುವವರನ್ನು ಕೂಗುಮಾರಿ ಎನ್ನುವುದು ಎಂದರು.
ಇದನ್ನೂ ಓದಿ:ಬಸವಣ್ಣನ ನೈಜ ಸಂದೇಶಗಳನ್ನು ಮಕ್ಕಳಿಗೆ ನೀಡುವ ಕೆಲಸ ಆಗಬೇಕು: ಜಯ ಮೃತ್ಯುಂಜಯ ಶ್ರೀ
ಕರ್ನಾಟಕಕ್ಕೆ ಅದು ಕೊಟ್ಟೆ, ಇದು ಕೊಟ್ಟೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅದನ್ನು ಬಿಟ್ಟು ದಿನಾ ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಾರೆ. ಕರ್ನಾಟಕದ ಬಿಗ್ಗೆಸ್ಟ್ ಕೂಗುಮಾರಿ ಅಂದರೆ ಅದು ಸಿದ್ದರಾಮಯ್ಯ ಎಂದು ಪ್ರತಾಪ್ ಸಿಂಹ ಟೀಕಿಸಿದರು.
ರೆಕಾರ್ಡ್ ಗಾಗಿ ಯೋಗವಲ್ಲ: ಮೈಸೂರಿನಲ್ಲಿ ನಡೆಯುವ ಯೋಗ ಕಾರ್ಯಕ್ರಮವು ಸಂಪೂರ್ಣ ಕೇಂದ್ರ ಸರ್ಕಾರದ ಕಾರ್ಯಕ್ರಮ. ಇದರಲ್ಲಿ ರಾಜ್ಯ ಸರ್ಕಾರದ್ದು ಪೋಷಕ ಪಾತ್ರ ಮಾತ್ರ. ಇಲ್ಲಿ ನಾವು ವಿಶ್ವ ಯೋಗ ದಿನ ಆಚರಣೆ ಮಾಡುತ್ತೇವೆ. ಅದಕ್ಕೆ ಬೇಕಾದ ಸಹಕಾರವನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕೊಡುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದರು.
ನಾವು ಗಿನ್ನಿಸ್ ರೆಕಾರ್ಡ್ ಗಾಗಿ ಯೋಗ ಮಾಡುತ್ತಿಲ್ಲ. ರೆಕಾರ್ಡ್ ಮುಂದಿನ ವರ್ಷವೂ ಮಾಡಬಹುದು. ಈ ಬಾರಿ ಅಚ್ಚುಕಟ್ಟಾಗಿ ಯೋಗ ನಡೆಸುತ್ತೇವೆ. ಒಂದೆರಡು ಲಕ್ಷ ಜನ ಸೇರಿಸಬೇಕೆಂದು ಹಲವರಿಗೆ ಆಸೆಯಿರಬಹುದು. ಆದರೆ ನಮ್ಮದು ಆರೋಗ್ಯಕ್ಕಾಗಿ ಯೋಗ ಎಂದರು.