Advertisement

ಅಗತ್ಯಬಿದ್ದರೆ ಪ.ಬಂಗಾಲದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬಹುದು

01:22 AM Jun 11, 2019 | sudhir |

ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ಬಿಜೆಪಿ-ಟಿಎಂಸಿ ನಡುವಿನ ಘರ್ಷಣೆ ಮತ್ತು ವಾಗ್ವಾದದ ಬಿಸಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಗೋಚರಿಸುತ್ತಿಲ್ಲ. ಸೋಮವಾರವೂ ಎರಡೂ ಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆದಿದ್ದು, ಪ್ರತಿಭಟನೆಗಳು, ಬಂದ್‌ನಂಥ ಘಟನೆಗಳೂ ವರದಿಯಾಗಿವೆ. ಇದರ ನಡುವೆಯೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆಯೇ ಎಂಬ ಅನುಮಾನಗಳೂ ಮೂಡತೊಡಗಿವೆ.

Advertisement

ಇದಕ್ಕೆ ಪೂರಕವೆಂಬಂತೆ ಪಶ್ಚಿಮ ಬಂಗಾಲ ರಾಜ್ಯಪಾಲ ಕೇಸರಿನಾಥ್‌ ತ್ರಿಪಾಠಿ ಅವರು ಸೋಮವಾರ ದಿಲ್ಲಿಗೆ ತೆರಳಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದಾರೆ. ರಾಜ್ಯದಲ್ಲಿನ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದಾಗಿ ತ್ರಿಪಾಠಿ ಮಾಹಿತಿ ನೀಡಿದ್ದಾರೆ. ಆದರೆ ಮಾತುಕತೆಯ ಹೆಚ್ಚಿನ ವಿವರವನ್ನು ಬಹಿರಂಗಪಡಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರಪತಿ ಆಳ್ವಿಕೆ?
“ಇಂಡಿಯಾ ಟುಡೇ’ಗೆ ಸೋಮವಾರ ನೀಡಿದ ಸಂದರ್ಶನದಲ್ಲಿ ರಾಜ್ಯಪಾಲ ತ್ರಿಪಾಠಿ ಅವರು, ಪಶ್ಚಿಮ ಬಂಗಾಲದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋದರೆ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅಭಿ ಪ್ರಾಯಪಟ್ಟಿದ್ದಾರೆ. ಅಂಥ ಬೇಡಿಕೆ ಬಂದಾಗ ಕೇಂದ್ರ ಸರಕಾರವೇ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಆದರೆ ನಾನು ಪ್ರಧಾನಿ ಅಥವಾ ಅಮಿತ್‌ ಶಾ ಬಳಿ ರಾಷ್ಟ್ರಪತಿ ಆಳ್ವಿಕೆ ಹೇರುವ ವಿಚಾರದ ಕುರಿತು ಚರ್ಚಿಸಿಲ್ಲ ಎಂದಿದ್ದಾರೆ ತ್ರಿಪಾಠಿ. ಜತೆಗೆ, ಎಲ್ಲ ರಾಜಕೀಯ ಪಕ್ಷಗಳೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

ಕರಾಳ ದಿನ
ಬಂಗಾಲದಲ್ಲಿ ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆ ಮತ್ತು ತಮ್ಮ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಬಿಜೆಪಿ ಸೋಮವಾರ ರಾಜ್ಯಾದ್ಯಂತ “ಕರಾಳ ದಿನ’ ಆಚರಿಸಿದೆ. ಜತೆಗೆ ಅತೀ ಹೆಚ್ಚು ಹಿಂಸಾಚಾರಕ್ಕೆ ಸಾಕ್ಷಿಯಾದ ನಾರ್ತ್‌ 24 ಪರಗಣ ಜಿಲ್ಲೆಯಲ್ಲಿ 12 ಗಂಟೆಗಳ ಕಾಲ ಬಂದ್‌ ಕೂಡ ನಡೆಸಲಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಭಟನ ಮೆರವಣಿಗೆ ನಡೆಸಿ ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಸೀರ್ಹಾತ್‌ನಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಯಿತು. ಬಿಜೆಪಿ ಕಾರ್ಯಕರ್ತರ ಮೃತದೇಹಗಳನ್ನು ಕೋಲ್ಕತಾಗೆ ಕೊಂಡೊಯ್ಯಲು ಪೊಲೀಸರು ಅಡ್ಡಿಪಡಿಸಿದ್ದನ್ನು ಖಂಡಿಸಿ, ಸೋಮವಾರ ಬಂದ್‌ಗೆ ಬಿಜೆಪಿ ರವಿವಾರವೇ ಕರೆ ನೀಡಿತ್ತು.

ನನ್ನ ಸರಕಾರವನ್ನು ಉರುಳಿಸಬೇಕೆಂದೇ ಕೇಂದ್ರ ಸರಕಾರ ಮತ್ತು ಬಿಜೆಪಿ ರಾಜ್ಯದಲ್ಲಿ ಹಿಂಸೆಗೆ ಕುಮ್ಮಕ್ಕು ನೀಡುತ್ತಿವೆ.ಅವರ ವಿರುದ್ಧ ಧ್ವನಿಯೆತ್ತುವ ಧೈರ್ಯ ಮಮತಾಗೆ ಮಾತ್ರ ಇರುವುದು ಎಂಬುದು ಅವರಿಗೂ ಗೊತ್ತಿದೆ.
– ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next