Advertisement

ಪ್ರತಿಭಟನೆ ಮಾಡಿದರೆ ದೇಶದ್ರೋಹಿ ಪಟ್ಟ

09:11 PM Jan 04, 2020 | Lakshmi GovindaRaj |

ತುಮಕೂರು: ಫ್ಯಾಸಿಸ್ಟ್‌ ಶಕ್ತಿಗಳು ವೈವಿಧ್ಯತೆ ಸಹಿಸುವುದಿಲ್ಲ ಮತ್ತು ಸಂವಿಧಾನ ಒಪ್ಪಿಕೊಳ್ಳುವುದಿಲ್ಲ. ಅವರಿಗೆ ಮನುಸ್ಮತಿ ಸಂವಿಧಾನವಾಗಿದೆ ಎಂದು ಮಲಯಾಳಿ ಸಾಹಿತಿ ಮತ್ತು ಸಿನಿಮಾ ವಿಮರ್ಶಕ ಜಿ.ಪಿ.ರಾಮಚಂದ್ರ ತಿಳಿಸಿದರು.

Advertisement

ನಗರದ ಕನ್ನಡ ಭವನದಲ್ಲಿ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಯುವ ಬರಹಗಾರರ ಕಾರ್ಯಾಗಾರದಲ್ಲಿ ಮಾತನಾಡಿ, ಫ್ಯಾಸಿಸ್ಟ್‌ಗಳು ವೈವಿಧ್ಯತೆ ಸಹಿಸದಿರುವುದರಿಂದ ದೇಶದಲ್ಲಿ ಗುಂಪು ಹತ್ಯೆ, ಹಲ್ಲೆ ನಡೆಯುತ್ತಿವೆ. ಪ್ರಸ್ತುತ ಸರ್ಕಾರದ ನೀತಿ ಖಂಡಿಸಿ ಪ್ರತಿಭಟಿಸುವ ಯುವ ಸಮುದಾಯವನ್ನು ದೇಶದ್ರೋಹಿಗಳು ಎಂದು ಕರೆಯುತ್ತಿದ್ದಾರೆ ಎಂದು ಟೀಕಿಸಿದರು.

ಕಠಿಣ ಪರಿಸ್ಥಿಯಲ್ಲಿ ಜೀವಿಸುತ್ತಿದ್ದೇವೆ. ನಮ್ಮ ಮುಂದೆ ಹಲವು ಸವಾಲುಗಳು ನರ್ತಿಸುತ್ತಿವೆ. ಫ್ಯಾಸಿಸ್ಟ್‌ ಶಕ್ತಿಗಳು ನಮ್ಮಿಂದ ನೆಮ್ಮದಿ ಕಿತ್ತುಕೊಳ್ಳುತ್ತಿವೆ. ಸ್ವಾತಂತ್ರ ಹರಣವಾಗುತ್ತಿದೆ. ಮೌಲ್ಯಗಳಿಗೆ ಧಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಜ.8ರಂದು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದೆ ಎಂದು ತಿಳಿಸಿದರು.

ಗೊಂದಲ ಪರಿಸ್ಥಿತಿಯಲ್ಲಿದ್ದೇವೆ: ಸಾಹಿತಿ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಮಾತನಾಡಿ, ಪ್ರಸ್ತುತದಲ್ಲಿ ಇತಿಹಾಸಕಾರರು ಹಾಗೂ ಕಾನೂನು ತಜ್ಞರು ವಿಭಜಿತಗೊಂಡು, ಕಾನೂನು ತಜ್ಞರು ಪಕ್ಷಬದ್ಧತೆ ತೋರಿಸುತ್ತಿದ್ದಾರೆ. ನಿಜವಾದ ಇತಿಹಾಸ ತಜ್ಞರಿಗೆ ಕಡ್ಡಾಯ ರಜೆ ಘೋಷಿಸಿ ಅವರನ್ನು ಮನೆ ಕಳುಹಿಸಿ ರಾಜಕಾರಣಿಗಳೇ ಇತಿಹಾಸ ತಜ್ಞರಾಗಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಹೆಚ್ಚು ಓದಿ: ಈಗಿನ ವಾತಾವರಣದಲ್ಲಿ ಪ್ರಗತಿಪರವಾಗಿ ಮಾತನಾಡಿದರೂ ರಾಜಕೀಯ ಪಕ್ಷಕ್ಕೆ ಹೋಲಿಸಿ, ಅನುಮಾನಿಸುವ ಗೊಂದಲ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇಂದು ಪಕ್ಷಬದ್ಧ ಬೌದ್ಧಿಕ ವಲಯ ಸೃಷ್ಟಿಯಾಗಿದೆ. ನಮ್ಮೆಲ್ಲರಿಗೂ ವಿಶ್ವಾಸಾರ್ಹದ ಪ್ರಶ್ನೆ ಕಾಡುತ್ತಿದೆ. ಯುವ ಪೀಳಿಗೆ ಕನ್ನಡ ಸಾಹಿತ್ಯ ಹೆಚ್ಚು ಓದಬೇಕು. ಪಂಪನು ಕುಲಪದ್ಧತಿ ಕುರಿತು ಮರುವ್ಯಾಖ್ಯಾನ ಮಾಡಿದವನು ರಾಜಕೀಯದೊಳಗೆ ಪ್ರತಿನಾಯಕತ್ವ ಸೃಷ್ಟಿಸಿದನು.

Advertisement

ವಚನ ಸಾಹಿತ್ಯದಲ್ಲಿ ಬರುವ ಸುಧಾರಕರನ್ನು ಓದಬೇಕು. ಕನ್ನಡ ಸಾಹಿತ್ಯ ಓದುವ ಮೂಲಕ ಮರುಚಿಂತನೆ ಮಾಡುವ ಅಗತ್ಯವಿದೆ. ಎಲ್ಲರೂ ಪ್ರಗತಿಪರ ಆಶಯ ಹೊಂದಬೇಕು. ಬೌದ್ಧಿಕ ವಲಯ ಪಕ್ಷಬದ್ಧವಾಗಿರುವ ಬದಲಾಗಿ ಜನಬದ್ಧ, ತತ್ವ ಬದ್ಧ ಬೌದ್ಧಿಕ ವಲಯವಾಗಬೇಕು ಎಂದು ಹೇಳಿದರು. ಇತಿಹಾಸ ಓದಿಕೊಂಡ ರಾಜಕಾರಣಿಯೊಬ್ಬ ಹೇಳುವ ಇತಿಹಾಸ ಕೇಳಬಹುದು. ಆದರೆ ಅಂತಹ ರಾಜಕಾರಣಿಗಳು ನಮ್ಮಲ್ಲಿಲ್ಲ.

ಇತಿಹಾಸ, ಕಾನೂನು, ಸಾಹಿತ್ಯ, ಅಭಿಪ್ರಾಯ ಪಕ್ಷ ಬದ್ಧತೆಯಿಂದ ನೋಡುವವರೇ ಹೆಚ್ಚಾಗಿದ್ದಾರೆ. ಪಕ್ಷಬದ್ಧವಾಗಿರುವ ಬೌದ್ಧಿಕ ವಲಯ ನಮ್ಮಲ್ಲಿದೆ. ಒಂದು ಪಕ್ಷಕ್ಕೆ ಒಲವು ತೋರಿಸುವುದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತಪ್ಪಲ್ಲ. ಯಾವುದೇ ವ್ಯಕ್ತಿಯಾದರೂ ಪಕ್ಷದ ಬಗೆಗಿನ ಒಲವಿನಿಂದ ಪಕ್ಷಕ್ಕೆ ತನ್ನ ನಾಲಿಗೆ ಮಾರಿಕೊಳ್ಳಬಾರದು. ಪಕ್ಷದೊಳಗಿದ್ದು ಪಕ್ಷ ಮೀರಿದ ನಾಯಕತ್ವ ಗುಣ ಹೊಂದಬೇಕು. ಅದು ನಿಜವಾದ ನಾಯಕತ್ವ ಎಂದರು.

ಚಿಂತಕ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅಧ್ಯಕ್ಷತೆ ವಹಿಸಿದ್ದರು. ಭೂಮಿ ಬಳಗದ ಜಿ.ಎಸ್‌.ಸೋಮಶೇಖರ್‌, ಸಾಹಿತಿಗಳಾದ ಎಸ್‌.ರಮೇಶ್‌, ಡಾ.ವೈ.ಬಿ.ಹಿಮ್ಮಡಿ, ಆರ್‌.ಜಿ ಹಳ್ಳಿ ನಾಗರಾಜ್‌, ಸಿದ್ದನಗೌಡ ಪಾಟೀಲ್‌, ಜಿಲ್ಲಾ ಸಂಚಾಲಕ ಡಾ.ನಾಗಭೂಷಣ್‌ ಬಗ್ಗನಡು ಪಾಲ್ಗೊಂಡಿದ್ದರು.

ರಾಷ್ಟ್ರೀಯವಾದದ ಅಪಮೌಲ್ಯ: ಜಾತಿ ಮೀರಿದ ಸಾಮಾಜಿಕ ನಾಯಕತ್ವ ನಮಗೆ ಬೇಕಾಗಿದೆ. ವ್ಯಕ್ತಿಗೆ ಸ್ವವಿಮರ್ಶೆ ಬಹಳ ಮುಖ್ಯ. ಪ್ರತಿ ನಾಯಕತ್ವದಿಂದ ಸಾಹಿತ್ಯ, ಸಂಸ್ಕೃತಿ ಅರ್ಥೈಸಿಕೊಳ್ಳಬಹುದು. ಧಾರ್ಮಿಕ ಮೂಲಭೂತವಾದವೇ ರಾಷ್ಟ್ರೀಯವಾದ ಅಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯವಾದದ ಅಪಮೌಲ್ಯ ಮಾಡಲಾಗುತ್ತಿದೆ. ಮಠಮಾನ್ಯಗಳು ಧರ್ಮ ಹೇಳದೆ ಜಾತಿ ಕುರಿತು ಹೇಳುತ್ತವೆ. ಸಾಮಾಜಿಕ ವಲಯದ ಅಪ ವ್ಯಾಖ್ಯಾನ ಮಾಡುತ್ತಿವೆ. ಇವೆಲ್ಲವುಗಳಿಂದ ಮುಂದಿನ ಯುವಕರಿಗೆ ಗೊಂದಲ ಸೃಷ್ಟಿಯಾಗುತ್ತಿದೆ ಎಂದ‌ು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.

ದೇಶದಲ್ಲಿರುವ ಭಾಷೆಗಳಲ್ಲಿ ಹಿಂದಿ ಮಾತ್ರ ಶ್ರೇಷ್ಟವಲ್ಲ. ಕನ್ನಡ, ಮಲಯಾಳ, ತೆಲುಗು, ತಮಿಳು ಮೊದಲಾದ ಭಾಷೆಗಳು ಭಾರತದ ಸೌಂದರ್ಯ, ವೈವಿಧ್ಯತೆ ಹೆಚ್ಚಿಸಿವೆ. ಆದರೆ, ವೈವಿಧ್ಯತೆ ಫ್ಯಾಸಿಸ್ಟ್‌ಗಳು ಸಹಿಸದಿರುವುದೇ ವಿಷಾದನೀಯ.
-ಜಿ.ಪಿ.ರಾಮಚಂದ್ರ, ಮಲಯಾಳಿ ಸಾಹಿತಿ ಮತ್ತು ಸಿನಿಮಾ ವಿಮರ್ಶಕ

Advertisement

Udayavani is now on Telegram. Click here to join our channel and stay updated with the latest news.

Next