ನವದೆಹಲಿ:ಭಯೋತ್ಪಾದನೆ ಹಲವು ಸಮಸ್ಯೆಗಳಿಗೆ ಮೂಲಕಾರಣ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಪ್ರತಿಪಾದಿಸಲಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ಯುಎನ್ ಸಭೆಯಲ್ಲಿ ತಕ್ಕ ಉತ್ತರ ಕೊಡಲು ಸಿದ್ಧತೆ ನಡೆಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಈ ಕುರಿತು ಹೇಳಿಕೆ ನೀಡಿರವ ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್, ಒಂದು ವೇಳೆ ಪಾಕಿಸ್ತಾನದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕಾಶ್ಮೀರದ ಕುರಿತು ಮತ್ತೆ ಕ್ಯಾತೆ ತೆಗೆದರೆ, ಭಾರತ ಇನ್ನೂ ಹೆಚ್ಚಿನ ರೀತಿಯಲ್ಲಿ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ನೀವು ಏನನ್ನು ಹೇಳಲು ಬಯಸುತ್ತೀರೋ…ನಮ್ಮ ಉತ್ತರ ಕೂಡಾ ಅದಕ್ಕಿಂತ ಹೆಚ್ಚು ತೀಕ್ಷ್ಣವಾಗಿರುತ್ತದೆ. ಜಾಗತಿಕ ಮಟ್ಟದಲ್ಲಿ ನಾವು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೋ ಅದೇ ರೀತಿ ಭಾರತ ಉತ್ತರ ಕೊಡಲು ಸಿದ್ಧವಾಗಿದೆ. ಒಂದು ವೇಳೆ ಅನಾವಶ್ಯಕ ವಿಚಾರಗಳಲ್ಲಿ ಮೂಗು ತೂರಿಸಿದರೆ, ನಮ್ಮ ಉತ್ತರ ಮತ್ತಷ್ಟು ಮೊನಚಾಗಿರಲಿದೆ ಎಂದು ಅಕ್ಬುರುದ್ದೀನ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರದ ವಿಚಾರ ಪ್ರಸ್ತಾಪವಾದರೆ ಹೇಗೆ ಅದನ್ನು ಭಾರತ ಎದುರಿಸಲಿದೆ ಎಂಬ ಪ್ರಶ್ನೆಗೆ ಅಕ್ಬರುದ್ದೀನ್ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸೆಪ್ಟೆಂಬರ್ 27ರಿಂದ ನ್ಯೂಯಾರ್ಕ್ ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಈಗಾಗಲೇ ಬಹಿರಂಗ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.