ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಎಸಗಿರುವುದು ಜಾಮೀನು ರಹಿತ ಅಪರಾಧ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಈಗ ತನಿಖೆ ನಡೆಯುತ್ತಿದೆ, ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿ. ಆ ನಂತರ ಅಪರಾಧಿಗಳ ಮೇಲೆ ಕಾನೂನು ಕ್ರಮ ಜರುಗಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆಯನ್ನು ನಾನು ಈಗಾಗಲೇ ಖಂಡಿಸಿದ್ದೇನೆ. ತಪ್ಪಿತಸ್ಥರು ಯಾರೇ ಇದ್ದರೂ ಅವರಿಗೆ ಶಿಕ್ಷೆಯಾಗಬೇಕು, ನಿರಾಪರಾಧಿಗಳ ಮೇಲೆ ಕ್ರಮ ಬೇಡ ಎಂದು ಹೇಳಿದ್ದೇನೆ ಎಂದರು.
ಕೇಜ್ರಿವಾಲ್ ಅವರು ರಾಜ್ಯ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿರುವುದಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ತೀರ್ಮಾನವನ್ನು ಜನಗಳಿಗೆ ಬಿಡೋಣ, ಈ 40% ಕಮಿಷನ್ ಸರ್ಕಾರವನ್ನು ಕಿತ್ತು ಹಾಕಿ ಎಂದು ನಾವೂ ಹೇಳುತ್ತಿದ್ಧೇವೆ, ಜನರೇ ತೀರ್ಮಾನ ಮಾಡಲಿ ಎಂದು ಹೇಳಿದರು.
ಆಪ್ ಪಕ್ಷದ ಬಗ್ಗೆ ನಾನು ಮಾತನಾಡುವುದಿಲ್ಲ. ಅದು ಕೂಡ ಬಹಳ ವರ್ಷಗಳಿಂದ ರಾಜಕೀಯದಲ್ಲಿದೆ. ದೊಡ್ಡ ಪಕ್ಷ ಅದು. ರಾಜ್ಯದಲ್ಲಿ ಅವರು ಇವತ್ತಿನವರೆಗೆ ಚುನಾವಣೆ ಎದುರಿಸಿರಲಿಲ್ಲ. ಕೇಜ್ರೀವಾಲ್ ಬಂದು ನಮ್ಮ ಅಭ್ಯರ್ಥಿಗಳನ್ನು ಚುನಾವಣೆಗೆ ಹಾಕುತ್ತೇವೆ ಎಂದಿದ್ದಾರೆ. ಹಾಕಲಿ ಜನ ತೀರ್ಮಾನ ಮಾಡುತ್ತಾರೆ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ನಲ್ಲಿ ಅಪ್ಪು… ಪಪ್ಪು ಅಷ್ಟೇ ಇರುವುದು: ಆರ್.ಅಶೋಕ್
ಯಾರೊ ಒಬ್ಬ ಮೌಲ್ವಿ ತಪ್ಪು ಮಾಡಿದ್ದಾರೆ ಎಂದರೆ, ಎಲ್ಲಾ ಮೌಲ್ವಿಗಳು ತಪ್ಪು ಮಾಡುತ್ತಾರೆ ಎಂದು ಅರ್ಥವಲ್ಲ. ಅವರು ಮೌಲ್ವಿ ಹೌದೋ ಅಲ್ಲವೋ ಎಂಬುದು ನನಗೂ ಗೊತ್ತಿಲ್ಲ. ಇದರಿಂದ ಇನ್ನಷ್ಟು ಕೆಸರೆರಚುವ ಕೆಲಸ ಮಾಡುತ್ತಾರೆ. ಸಮಾಜದಲ್ಲಿ ಶಾಂತಿ ನೆಲೆಸುವ ಕೆಲಸವನ್ನು ಸರ್ಕಾರ ಮಾಡಬೇಕು. ಶಾಂತಿ ಕದಡುವ ಪ್ರಯತ್ನ ಯಾರೂ ಮಾಡಬಾರದು ಎಂದು ಹೇಳಿದರು.
ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಪರವಾಗಿ ರಾಜ್ಯದ ಚುನಾವಣೆ ಕಾರ್ಯತಂತ್ರ ರೂಪಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ. ವೈಯಕ್ತಿಕವಾಗಿ ಮಾಹಿತಿ ಇಲ್ಲದೆ ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.