Advertisement

ಹೋರಾಡದಿದ್ದರೆ ಭವಿಷ್ಯವಿಲ್ಲ

12:14 PM May 02, 2017 | |

ಬೆಂಗಳೂರು: ದೇಶದ ಭ್ರಷ್ಟ ವ್ಯವಸ್ಥೆ ವಿರುದ್ಧ ಪ್ರಜೆಗಳು ಹೋರಾಡದಿದ್ದರೆ ದೇಶಕ್ಕಾಗಲೀ ಅಥವಾ ಅಲ್ಲಿನ ಪ್ರಜೆಗಳಿಗಾಗಲೀ ಭವಿಷ್ಯವಿಲ್ಲ ಎಂದು ಸ್ವಾತಂತ್ರ್ಯ ಹಿರಿಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹೇಳಿದ್ದಾರೆ.

Advertisement

ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಬ್ಯಾನರ್‌, ಬಾವುಟ ಹಿಡಿದು ಧಿಕ್ಕಾರ ಕೂಗುವುದು ಭ್ರಷ್ಟಾಚಾರದ ವಿರುದ್ಧದ ಹೋರಾಟವಲ್ಲ. ಸ್ಥಳೀಯ ಮಟ್ಟದ ಸಮಸ್ಯೆಗಳಿಗೆ ಸ್ಪಂದಿಸಿ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗುವಂತೆ ಮಾಡುವುದಾಗಿದೇ ನಿಜವಾದ ಹೋರಾಟ ಎಂದು ತಿಳಿಸಿದರು.

ಪ್ರತಿಯೊಬ್ಬರಲ್ಲಿ ಇಂತಹ ಮನೋಭಾವನೆ ಬಂದಾಗ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ. ಇಲ್ಲದಿದ್ದರೆ, ಅಭಿವೃದ್ಧಿ ಕೇವಲ ಕನಸಿನ ಮಾತಷ್ಟೇ. ದೇಶದಲ್ಲಿ ಬಡತನ ಹೋಗುವವರೆಗೂ ಭ್ರಷ್ಟಾಚಾರ ತಾಂಡವವಾಡುತ್ತಲೇ ಇರುತ್ತದೆ ಎಂದರು. 

ಈಗಲೂ ಬಡವರು ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರ ಅಕ್ರಮ ಸಂಪತ್ತು ಏರುತ್ತಲೇ ಇದೆ. ಮೂಲ ಸೌಕರ್ಯಕ್ಕೂ ವರ್ಷಾನುಗಟ್ಟಲೇ ಹೋರಾಟ ನಡೆಸಬೇಕಾದ ದುಸ್ಥಿತಿ ಇರುವುದು ವಿಷಾದನೀಯ. ಪ್ರಜೆಗಳ ಯೋಗಕ್ಷೇಮ ನೋಡಿಕೊಳ್ಳಬೇಕಾದ ಸರ್ಕಾರಗಳು ಏನು ಮಾಡುತ್ತಿವೆ ಎಂಬುದೇ ಅರ್ಥವಾ ಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೂರ್ವಾಪರ ತಿಳಿಯದ ಜನಪ್ರತಿನಿಧಿ ಗಳನ್ನು ಆಯ್ಕೆ ಮಾಡುವುದು ಐದು ವರ್ಷ ಚೆನ್ನಾಗಿ ಮೇಯಲಿ ಎಂದಲ್ಲ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕು. ದೇಶ, ರಾಜ್ಯದ ಅಭಿವೃದ್ಧಿ ಕುರಿತು ಚಿಂತಿಸಬೇಕು ಎಂದು. ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಜನಪ್ರತಿನಿಧಿಗಳಿಂದಾಗಿ ಪ್ರಜಾತಂತ್ರ ವ್ಯವಸ್ಥೆ ಕುಂಭಕರ್ಣನಂತೆ ನಿದ್ದೆಗೆ ಜಾರುತ್ತಿದೆ ಎಂದು ವ್ಯಂಗ್ಯವಾಡಿದರು.

Advertisement

ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿ ರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡ ಭ್ರಷ್ಟಾಚಾರಕ್ಕೆ ಹೊರತಾಗಿಲ್ಲ. ಸಚಿವರು, ಶಾಸಕರು, ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದಾರೆ. ಎಲ್ಲವನ್ನು ನೋಡಿ ಸುಮ್ಮನೆ ಇರುವುದು ಕೂಡ ಭ್ರಷ್ಟಾಚಾರಕ್ಕೆ ಕುಮ್ಮಕ್ಕುನೀಡಿದಂತಾಗುತ್ತದೆ ಎಂದು ಹೇಳಿದರು.

ನಿವೃತ್ತ ಲೋಕಾಯುಕ್ತ ಮುಖ್ಯ ನ್ಯಾ.ಸಂತೋಷ್‌ ಹೆಗಡೆ ಮಾತನಾಡಿ, ಲೋಕಪಾಲ್‌ ಕಾಯ್ದೆ ಜಾರಿಗೆ ಬರುವಂತೆ ಆಗ್ರಹಿಸಿ ನಡೆದ ಹೋರಾಟದ ಸಂದರ್ಭದಲ್ಲಿ ದೊರೆಸ್ವಾಮಿ ಅವರು ಪರಿಚಿತರಾದರು. ಅವರು ವ್ಯವಸ್ಥೆಯ ವಿರುದ್ಧ ಹೋರಾಟ, ಜನಸಾಮಾನ್ಯರ ಪರ ಕಳಕಳಿ ಇರುವ ವ್ಯಕ್ತಿ. ನೂರನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲೂ ಭ್ರಷ್ಟಾಚಾರದ ವಿರುದ್ಧ ದನಿ ಎತ್ತುತ್ತಿರುವ ಅವರು, ಇಂದಿನ ಯುವಜನತೆಗೆ ಮಾರ್ಗದರ್ಶನೀಯ. 

ರಾಜ್ಯ ಸರ್ಕಾರದ ನಿವೃತ್ತ ಕಾರ್ಯದರ್ಶಿ ಚಿರಂಜೀವಿ ಸಿಂಗ್‌ ಮಾತನಾಡಿ, ಹಿಂದೆ ಕರ್ನಾಟಕವೆಂದರೆ ನಮ್ಮನ್ನು ಬಹಳ ಗೌರವದಿಂದ ನೋಡುತ್ತಿದ್ದರು. ದೆಹಲಿಯಲ್ಲಿ ನಮಗೆ ವಿಶೇಷ ಸ್ಥಾನಮಾನ ಸಿಗುತ್ತಿದ್ದವು. ಈಗ ಇಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದ್ದು ಕನ್ನಡಿಗರೆಂದು ಹೇಳಿಕೊಳ್ಳಲು ನೋವಾಗುತ್ತದೆ.

ರಾಜ್ಯವನ್ನು ಭ್ರಷ್ಟಾಚಾರ ಮುಕ್ತಗೊಳಿಸಿ, ಜಗತ್ತಿನಲ್ಲಿ ಕನ್ನಡಿಗರ ಗೌರವ ಹೆಚ್ಚುವಂತೆ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು. ಭಾರತೀಯ ವಿದ್ಯಾಭವನ ಅಧ್ಯಕ್ಷ ಎನ್‌.ರಾಮಾನುಜ ಅಧ್ಯಕ್ಷತೆ ವಹಿಸಿದ್ದರು. ಎಚ್‌.ಎಸ್‌. ದೊರೆಸ್ವಾಮಿ ಅವರನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next