Advertisement

ಬೇಡವೆಂದರೆ “ಆಧಾರ್‌’ಬಿಡಬಹುದು…!

06:00 AM Dec 07, 2018 | |

ಹೊಸದಿಲ್ಲಿ: ನಿಮಗೆ ಆಧಾರ್‌ ಕಾರ್ಡ್‌ ಬೇಕಿಲ್ಲವೇ… ಹಾಗಾದರೆ ಅದನ್ನು ಸರಕಾರಕ್ಕೆ ವಾಪಸ್‌ ಕೊಟ್ಟುಬಿಡಬಹುದು..! ಹೌದು, ಇಂಥದ್ದೊಂದು “ಐಚ್ಛಿಕ ಆಧಾರ್‌’ ಪ್ರಸ್ತಾವನೆ ಕೇಂದ್ರ ಸರಕಾರದ ಮಟ್ಟದಲ್ಲಿ ಸಿದ್ಧವಾಗಿದೆ. ಇದನ್ನು ಒಪ್ಪಿಗೆ ಗಾಗಿ ಕೇಂದ್ರ ಕಾನೂನು ಸಚಿವಾಲಯಕ್ಕೂ ಕಳುಹಿಸಲಾಗಿದೆ. ಶೀಘ್ರದಲ್ಲೇ ಕೇಂದ್ರ ಸಂಪುಟ ಸಭೆಯ ಮುಂದೆಯೂ ಈ ಪ್ರಸ್ತಾವವಾಗಲಿದೆ. ಅಲ್ಲಿ ನಿರ್ಧಾರವಾದ ಅನಂತರ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. ಆಧಾರ್‌ ಕಾರ್ಡ್‌ ಬೇಡವೆಂದವರು ತಮ್ಮ ಕಾರ್ಡ್‌ ವಾಪಸ್‌ ನೀಡಬಹುದು. ಪ್ರಾಧಿಕಾರ ಪಡೆದಿರುವ ಎಲ್ಲ ದಾಖಲೆ ಅಳಿಸುವಂತೆ ಕೋರಿಕೊಳ್ಳಬಹುದಾಗಿದೆ ಎಂದು ಮೂಲಗಳನ್ನು ಉಲ್ಲೇಖೀಸಿ “ದಿ ಹಿಂದೂ’ ವರದಿ ಮಾಡಿದೆ.

Advertisement

ಯಾರಿಗೆ ಅನ್ವಯಿಸಲ್ಲ ?
ಹಾಗಂತ ಕೇಂದ್ರ ಸರಕಾರ ಜಾರಿಗೆ ತರಲು ಇಚ್ಛಿಸಿರುವ “ಐಚ್ಛಿಕ ಆಧಾರ್‌’ ಎಲ್ಲರಿಗೂ ಅನ್ವಯವಾಗುವುದಿಲ್ಲ. ಇದು ಕೇವಲ ಪಾನ್‌ ಕಾರ್ಡ್‌ ಇಲ್ಲದೇ ಇರುವವರಿಗೆ ಮಾತ್ರ. ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಐಟಿಗೆ ಮತ್ತು ಪಾನ್‌ ಕಾರ್ಡ್‌ಗೆ ಆಧಾರ್‌ ಅನ್ನು ಕಡ್ಡಾಯವಾಗಿ ಲಿಂಕ್‌ ಮಾಡಲೇಬೇಕು. ಹೀಗಾಗಿ ಐಟಿ ರಿಟರ್ನ್ಸ್ ಸಲ್ಲಿಸುತ್ತಿರುವವರು ಮತ್ತು ಪಾನ್‌ ಕಾರ್ಡ್‌ ಹೊಂದಿರುವವರು ಆಧಾರ್‌ ಕಾರ್ಡ್‌ ಹೊಂದಿರಲೇಬೇಕು. ಸದ್ಯ ದೇಶದಲ್ಲಿ  ಪಾನ್‌ ಕಾರ್ಡ್‌ ಹೊಂದಿರು ವವರ ಸಂಖ್ಯೆ 2018ರ ಮಾರ್ಚ್‌ 12ಕ್ಕೆ ಸರಿಯಾಗಿ 37.50 ಕೋಟಿ. ಇದರಲ್ಲಿ 16.84 ಕೋಟಿ ಮಂದಿ ಆಧಾರ್‌-ಪಾನ್‌ ಲಿಂಕ್‌ ಮಾಡಿದ್ದಾರೆ.

ಪ್ರಸ್ತಾವನೆಯಲ್ಲಿ  ಏನೇನಿದೆ?
ಆಧಾರ್‌ ಕಾರ್ಡ್‌ ವಾಪಸ್‌ ಮತ್ತು ದಾಖಲೆಗಳನ್ನು ಅಳಿಸುವ ಸಲುವಾಗಿ 18 ವರ್ಷ ತುಂಬಿದ ಎಲ್ಲರಿಗೂ ಆರು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಅವರು ಮನವಿ ಕೊಟ್ಟರೆ ಆಧಾರ್‌ ದಾಖಲೆಗಳನ್ನು ಅಳಿಸಲಾಗುತ್ತದೆ. ಇಲ್ಲದಿದ್ದರೆ ಅದು ಹಾಗೆಯೇ ಉಳಿಯುತ್ತದೆ. ಈ ಅವಕಾಶವನ್ನು ಕೇವಲ ಪಾನ್‌ ಇಲ್ಲದೇ ಇರುವವರಿಗೆ ಮಾತ್ರ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟಪಡಿಸಿರುವ ಕೇಂದ್ರ ಸರಕಾರ ಎಲ್ಲ ನಾಗರಿಕರಿಗೂ ಅವಕಾಶ ನೀಡುತ್ತೇವೆ. ಆದರೆ ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ, ಪಾನ್‌-ಆಧಾರ್‌ ಜೋಡಣೆಯಾಗಲೇಬೇಕು. ಜತೆಗೆ ಹೊಸ ಪಾನ್‌ ಕಾರ್ಡ್‌ ಮಾಡಿಸಿಕೊಳ್ಳಬೇಕಾದರೆ ಆಧಾರ್‌ ಬೇಕೇ ಬೇಕು. ಹೀಗಾಗಿ ಜನರೇ ತಮಗೆ ಆಧಾರ್‌ ಬೇಕೋ ಅಥವಾ ಬೇಡವೋ ಎಂಬ ಬಗ್ಗೆ ನಿರ್ಧರಿಸಲಿ ಎಂಬ ಕಾರಣದಿಂದ ಈ ಅವಕಾಶ ನೀಡಲಾಗುತ್ತಿದೆ ಎಂದು ಕೇಂದ್ರ ಸರಕಾರದ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next