ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಿದ ಒಂದು ಮಾತು ಕ್ರೀಡಾವಲಯದಲ್ಲಿ ಆಶಾವಾದ ಮೂಡಿಸಿದೆ. ರಾಜ್ಯದ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಿಸಿದ ಅವರು, 75 ಕ್ರೀಡಾಪಟುಗಳಿಗೆ ಒಲಿಂಪಿಕ್ಸ್ ದೃಷ್ಟಿಯಿಂದ ವಿದೇಶದಲ್ಲಿ ತರಬೇತಿ ಕೊಡಿಸುವ ಉದ್ದೇಶವಿದೆ. ಒಟ್ಟಾರೆ ಕ್ರೀಡಾ ಕರ್ನಾಟಕವನ್ನು ರೂಪಿಸುವ ಚಿಂತನೆ ನಮ್ಮ ಮುಂದಿದೆ ಎಂದಿದ್ದಾರೆ. ಇಲ್ಲಿ ಗಮನ ಸೆಳೆದಿರುವುದು ಅವರ ಕ್ರೀಡಾ ಕರ್ನಾಟಕ ಎಂಬ ಪದ. ಹಲವಾರು ವರ್ಷಗಳಿಂದ ಕರ್ನಾಟಕದ ಕ್ರೀಡಾಪಟುಗಳು, ಏಷ್ಯಾಡ್, ಕಾಮನ್‌ವೆಲ್ತ್ ಗೇಮ್ಸ್, ಒಲಿಂಪಿಕ್ಸ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸನ್ನೇ ತೆಗೆದುಕೊಂಡರೆ ರಾಜ್ಯಕ್ಕೆ ಬಂದಿರುವುದು ಮೂರು ಕಂಚಿನ ಪದಕಗಳು. ಅದರಲ್ಲಿ ಎರಡು ತಂಡ ವಿಭಾಗದಲ್ಲಿ ಬಂದಿವೆ!
ಕರ್ನಾಟಕದ ಕ್ರೀಡಾ ಸಾಧನೆ ಈ ಮಟ್ಟಕ್ಕೆ ಇರುವಾಗ ಮುಖ್ಯಮಂತ್ರಿಗಳು ಕ್ರೀಡಾ ಕರ್ನಾಟಕದ ಮಾತನಾಡಿರುವುದು ಗಮನಾರ್ಹ. ಆದರೆ ಇದನ್ನು ಸಾಕಾರ ಮಾಡಲು ಅವರೇನು ಕಾರ್ಯಯೋಜನೆ ಹಾಕಿಕೊಂಡಿದ್ದಾರೆ ಎನ್ನುವುದೇ ಇಲ್ಲಿ ಮುಖ್ಯ. ಸದ್ಯದ ಮಟ್ಟಿಗೆ ಅಮೃತ ದತ್ತು ಯೋಜನೆಯಡಿ 75 ಕ್ರೀಡಾಪಟುಗಳನ್ನು ರಾಜ್ಯ ಸರಕಾರ ಒಲಿಂಪಿಕ್ಸ್‌ಗೆ ತಯಾರು ಮಾಡುತ್ತಿದೆ. ಈಗ ಮುಖ್ಯಮಂತ್ರಿಗಳೇ ಹೇಳಿರುವಂತೆ ಅವರನ್ನೆಲ್ಲ ವಿದೇಶದಲ್ಲಿ ತರಬೇತುಗೊಳಿಸಿ ಪದಕ ಗೆಲ್ಲುವಂತೆ ರೂಪಿಸಲು ನಿರ್ಧರಿಸಲಾಗಿದೆ. ಈ ಯೋಜನೆ ಅತ್ಯುತ್ತಮವಾಗಿದೆ, ಅದು ಅಕ್ಷರಶಃ ಯಾವುದೇ ವಿವಾದಗಳಿಗೆ ಅವಕಾಶವಿಲ್ಲದಂತೆ ಸಾಧ್ಯವಾಗಬೇಕಿದೆ. ಆಗ ಸರಕಾರದ ಮಾತುಗಳನ್ನು ಜನ ಮತ್ತು ಕ್ರೀಡಾಪಟುಗಳು ಗಂಭೀರವಾಗಿ ಸ್ವೀಕರಿಸುತ್ತಾರೆ.
ಸದ್ಯ ರಾಜ್ಯದಲ್ಲಿ ಕ್ರಿಕೆಟ್ ಹೊರತುಪಡಿಸಿದರೆ, ಬೇರೆ ಕ್ರೀಡೆಗಳಲ್ಲೂ ಹೇಳಿಕೊಳ್ಳುವಂತಹ ಪ್ರಮಾಣದಲ್ಲಿ ಹೆಸರುಗಳು ಕಾಣುತ್ತಿಲ್ಲ. ಕೆಲವರು ಅನ್ಯರಾಜ್ಯಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮೊದಲು ಇಂತಹ ಕ್ರೀಡಾಪಟುಗಳನ್ನು ವಾಪಸ್ ಕರೆಸಿಕೊಂಡು ತರಬೇತಿ ಗುಣಮಟ್ಟ ವೃದ್ಧಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅತ್ಯುತ್ತಮ ತರಬೇತಿಯ ವ್ಯವಸ್ಥೆಯಾಗಬೇಕು. ಅದಕ್ಕಾಗಿ ಆಯಾಯ ಕ್ರೀಡೆಗಳಲ್ಲಿ ನುರಿತವರನ್ನೇ ತರಬೇತುದಾರರನ್ನಾಗಿ ನೇಮಿಸಿಕೊಳ್ಳಬೇಕು. ಮುಖ್ಯಮಂತ್ರಿಗಳೂ ಕೋಚ್‌ಗಳ ಕೊರತೆಯಿದೆ ಎಂದಿದ್ದಾರೆ. ಆಧುನಿಕ ತಂತ್ರಜ್ಞಾನ, ಪರಿಸ್ಥಿತಿಗೆ ಪೂರಕವಾಗಿರುವ ಕೋಚ್‌ಗಳ ಆವಶ್ಯಕತೆ ಈಗಿದೆ. ಅದಕ್ಕಾಗಿ ಕೋಚ್‌ಗಳನ್ನೇ ಸಿದ್ಧಪಡಿಸುವ ಒಂದು ವ್ಯವಸ್ಥೆ ರೂಪಿಸಿದರೂ ಅದು ಉತ್ತಮ ಹೆಜ್ಜೆಯಾಗುತ್ತದೆ!
ಇನ್ನು ಆಗಬೇಕಿರುವುದು ಕ್ರೀಡಾಸಂಸ್ಥೆಗಳಲ್ಲಿ ರಚನಾತ್ಮಕ ಬದಲಾವಣೆ. ರಾಜ್ಯದಲ್ಲಿ ಕೆಲವು ಸಂಸ್ಥೆಗಳನ್ನು ಬಿಟ್ಟರೆ, ಮಿಕ್ಕ ಸಂಸ್ಥೆಗಳು ಏನು ಮಾಡುತ್ತಿವೆ ಎನ್ನುವುದು ಹೊರಜಗತ್ತಿಗಂತೂ ಗೊತ್ತಾಗುತ್ತಿಲ್ಲ. ಇನ್ನೂ ಬೆಂಗಳೂರಿ ನಲ್ಲೊಂದು ಸುಸಜ್ಜಿತ ಅಂತಾರಾಷ್ಟ್ರೀಯ ಫುಟ್‌ಬಾಲ್ ಮೈದಾನವಿಲ್ಲ. ದೀರ್ಘಾವಧಿಯಿಂದ ಕೆಲವು ಕ್ರೀಡಾಸಂಸ್ಥೆಗಳು ಕೆಲವರ ಸ್ವತ್ತೆನ್ನುವಂತೆ ಆಗಿವೆ. ಆಡಳಿತ ವ್ಯವಸ್ಥೆಯಲ್ಲಿ ದಕ್ಷ ಆಡಳಿತಾಧಿಕಾರಿಗಳ ಪ್ರವೇಶವಾಗಬೇಕು. ಇವರಲ್ಲಿ ಕ್ರೀಡಾಪಟುಗಳಿಗೆ, ಉದ್ಯಮಕ್ಷೇತ್ರದಿಂದ ಹಣ ಸೆಳೆಯಬಲ್ಲ ವ್ಯಕ್ತಿಗಳಿಗೆ, ನುರಿತ ಆಡಳಿತಗಾರರಿಗೆ ಅವಕಾಶ ವಿರಬೇಕು. ಪರಸ್ಪರ ಕಾಲೆಳೆಯುವ, ವಾದ-ವಿವಾದಗಳಲ್ಲೇ ಕಾಲ ಕಳೆಯುವರನ್ನು ಮೊದಲು ಹೊರಹಾಕಬೇಕು. ಆಗ ಮುಖ್ಯಮಂತ್ರಿಗಳ ಮಾತು ತನ್ನಿಂತಾನೇ ಸಾಕಾರಗೊಳ್ಳುವುದು ಖಚಿತ.