Advertisement

ಕರ್ನಾಟಕ ಒಡೆದರೆ ಉತ್ತರ ದರಿದ್ರ ಆಗುತ್ತೆ: ಜಾಮದಾರ್‌

07:57 AM Jan 05, 2019 | |

ಧಾರವಾಡ (ಅಂಬಿಕಾತನಯದತ್ತ ವೇದಿಕೆ): ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿದರೆ ದರಿದ್ರ ರಾಜ್ಯ ಮಾಡಿದಂತೆ ಆಗುತ್ತದೆ. ಈ ಕುರಿತು ನನ್ನ ಮಾತುಗಳಿಗೆ ವಿರೋಧ ಬಂದರೂ ನಾನು ಹೆದರುವುದಿಲ್ಲ. ಸಮಾನತೆಯ ಸಾಧನೆಗೆ ಹೋರಾಟ ಆಗಬೇಕೇ ವಿನಃ ಒಡೆಯಬಾರದು ಎಂದು ಹಿರಿಯ ನಿವೃತ್ತ ಅಧಿಕಾರಿ, ಡಾ. ಎಸ್‌. ಎಂ.ಜಾಮದಾರ್‌ ಸ್ಪಷ್ಟಪಡಿಸಿದರು.

Advertisement

ಭಾರತದಲ್ಲಿ ರಾಜಸ್ಥಾನ ಬಿಟ್ಟರೆ ಕರ್ನಾಟಕದಲ್ಲಿಯೇ ಹೆಚ್ಚು ಬರಭೂಮಿ ಇರುವುದು. ಇದು ಬಹಳ ಮಂದಿಗೆ ಗೊತ್ತಿಲ್ಲ.
ಕರ್ನಾಟಕದಲ್ಲಿ ಪ್ರತಿ ನಾಲ್ಕು ವರ್ಷಕ್ಕೆ ಬರಗಾಲ ಬಂದಿದೆ. ರಾಜ್ಯ ಸರ್ಕಾರ ಬರಗಾಲ ನಿರ್ವಹಣಾ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ “ಬರಗಾಲ ಮತ್ತು ವಲಸೆ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಹಿರಿಯರು ಹೋರಾಡಿಒಂದುಗೂಡಿಸಿದ ಸಮಗ್ರ ಕರ್ನಾಟಕವನ್ನು ಒಡೆಯುವ ಕೆಲಸ ಮಾಡಬಾರದು. ಅಂಥ ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ. ಪ್ರತ್ಯೇಕ ರಾಜ್ಯ ಆದರೆ, ಅಭಿವೃದ್ಧಿ ರಾಜ್ಯ ಆಗದು. ಬರಗೈ, ಬರಗಾಲದ ರಾಜ್ಯ ಆಗುತ್ತದೆ. ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಮುಂದುವರಿಯಬೇಕು.

ಸರಕಾರ ಇಲ್ಲಿನ ತಾಲೂಕುಗಳನ್ನು ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಿದರು. ಬೆಂಗಳೂರಿನಿಂದ ರಾಜ್ಯದ ಬೊಕ್ಕಸಕ್ಕೆ ಶೇ.70ರಷ್ಟು ಆದಾಯ ಇದೆ. ಒಂದು ಮೂರಾಂಶ ಕೂಡ ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕ ಇಲ್ಲ. ಈ ಭಾಗದಲ್ಲಿ ಎಲ್ಲೂ ಐಟಿ ಆಗಿಲ್ಲ. ಉತ್ತರ ಕರ್ನಾಟಕದವರೇ ಐಟಿ ಮಂತ್ರಿ ಆಗಿದ್ದರೂ ಅದು ಈಡೇರಿಲ್ಲ. ಇಲ್ಲಿನ ಅಭಿವೃದ್ಧಿಗೆ ಮೂಲಭೂತ ಸತ್ಯಾಂಶ ಪರಿಗಣಿಸಬೇಕು. ಪ್ರತ್ಯೇಕ ರಾಜ್ಯವೇ ಬೇಕಾದರೆ ಮೂರ್‍ನಾಲ್ಕು ಪೀಳಿಗೆಗೆ ಬಳಿಕ ನೋಡಬೇಕು ಎಂದು ಸಲಹೆ ನೀಡಿದರು.

ಬರಗಾಲ ಉತ್ತರ ಕರ್ನಾಟಕ ಜನರಿಗೆ ಹೊಸತಲ್ಲ. ನಾನೂ ಕೂಡ ವಲಸೆ ಅನುಭವಿಸಿದ ವ್ಯಕ್ತಿ, ವಲಸೆಯನ್ನು ನೋಡಿ ನಿರ್ವಹಿಸಿದ ಅಧಿಕಾರಿಯೂ ಹೌದು. ಕರ್ನಾಟಕದ ಬರಗಾಲದಲ್ಲಿ ಶೇ.90ರಷ್ಟು ಉತ್ತರ ಕರ್ನಾಟದಲ್ಲಿ ಮಾತ್ರ ಇದೆ. ಇಂಥ ಸಮಸ್ಯೆ ಅನುಭವಿಸುವವರ ಪ್ರಮಾಣ ಶೇ.52ರಷ್ಟು ಇದೆ. ಬರಗಾಲ ನಿಯಂತ್ರಣ ಕಾರ್ಯಕ್ರಮವಾಗಿಯೂ ಅಪ್ಪರ್‌ ಕೃಷ್ಣ ಯೋಜನೆ 54 ವರ್ಷ ಆದರೂ ಪೂರ್ಣ ಆಗಿಲ್ಲ ಎಂದೂ ಅವರು ವಿವರಿಸಿದರು.
 
ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪಕುಮಾರ ಕಲ್ಕೂರು ಸ್ವಾಗತಿಸಿದರು. ಡಾ. ವೈ.ಡಿ. ರಾಜಣ್ಣ ವಂದಿಸಿದರು. ರಾಜಶೇಖರ್‌ ಗು. ಅಂಗಡಿ ನಿರ್ವಹಿಸಿದರು.

ಸಮಗ್ರ ಅಭಿವೃದ್ಧಿಗೆ ನಂಜುಡಪ್ಪ ವರದಿ ಶ್ರೇಷ್ಠ ಗ್ರಂಥವಾಗಬೇಕು ಕರ್ನಾಟಕ ಸಮಗ್ರ ಅಭಿವೃದ್ಧಿ ಆಗುವವರೆಗೆ ನಂಜುಡಪ್ಪ ವರದಿ ಸರ್ಕಾರಕ್ಕೆ ಶ್ರೇಷ್ಠ ಗ್ರಂಥ ಇದ್ದಂತೆ, ಬೈಬಲ್‌ ಇದ್ದಂತೆ ಎಂದು ಮಾಜಿ ಸಚಿವ ಎಚ್‌.ಕೆ. ಪಾಟೀಲ ಪ್ರತಿಪಾದಿಸಿದರು. ಉಕ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅವರು, ಅಖಂಡ ಕರ್ನಾಟಕ ಜೊತೆಗೆ ನಮ್ಮ ಉತ್ತರ ಕರ್ನಾಟಕದ ಆಹಾರ ಸಂಸ್ಕೃತಿ ಉಳಿಸಿಕೊಳ್ಳಬೇಕು. ಆಹಾರ ಸಂಸ್ಕೃತಿ ರಕ್ಷಣೆಗಾಗಿ ಸಾಹಿತ್ಯದ ಮೂಲಕ ಜಾಗೃತಿ ಮಾಡಬೇಕು. ಸುತ್ತೋಲೆ, ಭಾಷಣಗಳ ಮೂಲಕ ಇದು ಸಾಧ್ಯವಿಲ್ಲ. ಈ
ಭಾಗದಲ್ಲಿ ಆತ್ಮಹತ್ಯೆ ಮುಕ್ತವಾಗಲು ಕೃಷ್ಣಾ ಕಣಿವೆ ಯೋಜನೆ ಜಾರಿ ಮಾಡಬೇಕು. ಬರಗಾಲಕ್ಕೆ ಉತ್ತರ, ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲ. ನಮ್ಮೂರು ಬಿಟ್ಟು ಬೆಂಗಳೂರಿಗೆ ಹೋದರೆ, ಅಲ್ಲಿ ಅಷ್ಟು ಆದಾಯ, ಅಭಿವೃದ್ಧಿ ಸಂತೋಷ ತರುವಂತೆ ನೂರಾರು ವರ್ಷ ಕೆಲಸ ಮಾಡಿದ ರೈತರಿಗೆ ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

Advertisement

ಪ್ರತ್ಯೇಕ ಕೂಗೇತಕೆ?
ಇದೇ ವೇಳೆ ಸಾಂಸ್ಕೃತಿಕ ಪ್ರಾತಿನಿಧ್ಯ ವಿಷಯದ ಕುರಿತು ಡಾ. ಗುರುಪಾದ ಮರಿಗುದ್ದಿ ಮಾತನಾಡಿ, ಉತ್ತರ ಕರ್ನಾಟಕ ಏಕೀಕರಣಕ್ಕೆ ಯಾವತ್ತೋ ಮನಸ್ಸು ಮಾಡಿದೆ. ರಾಜ್ಯ ಒಡೆಯುವುದು ಸರಿಯಲ್ಲ. ಪ್ರತ್ಯೇಕ ರಾಜ್ಯ ಕೂಗು ಬಿಟ್ಟು ಪ್ರಾತಿನಿಧ್ಯ ಕೇಳಬೇಕು. ಇಲ್ಲಿಗೆ ಸಾಂಸ್ಕೃತಿಕ ಪ್ರಾತಿನಿಧ್ಯ ಸಿಗಬೇಕು. ಕೆಲವೇ ಜನರಿಗೆ ಪದೇಪದೆ ಸಿಗುವ ಪ್ರಾತಿನಿಧ್ಯ ಸಿಗುವುದು ತಪ್ಪಬೇಕು. ಕಲಬುರ್ಗಿ ಹೆಸರಿನಲ್ಲಿ ಉನ್ನತ ಸಂಶೋಧನಾ ಸಂಸ್ಥೆ ಸ್ಥಾಪಿಸಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next