ಗದಗ: ಬಳ್ಳಾರಿ ಸಮೀಪದ ಜಿಂದಾಲ್ ಸ್ಟೀಲ್ಸ್ ಕಂಪನಿಗೆ ಸರ್ಕಾರ 3,667 ಎಕರೆ ಭೂಮಿಯನ್ನು ಖರೀದಿಗೆ ನೀಡಲು ಸಚಿವ ಸಂಪುಟ ಕೈಗೊಂಡಿರುವ ನಿರ್ಣಯವನ್ನು ಒಂದು ವಾರದಲ್ಲಿ ವಾರದಲ್ಲಿ ಕೈಬಿಡಬೇಕು. ಇಲ್ಲವಾದರೆ ಕಾನೂನು ಹೋರಾಟದೊಂದಿಗೆ ಈ ಭಾಗದ ಸ್ವಾಮೀಜಿಗಳು, ಪರಿಸರವಾದಿಗಳ ಜೊತೆಗೂಡಿ ಜನಾಂದೋಲನ ನಡೆಸಬೇಕಾಗುತ್ತದೆ ಎಂದು ಉತ್ತರ ಕರ್ನಾಟಕ ಮಹಾಸಭಾದ ಅಧ್ಯಕ್ಷ ರವಿಕಾಂತ ಅಂಗಡಿ ಎಚ್ಚರಿಸಿದರು.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ ಕಂಪನಿ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಲಿಮಿಟೆಡ್ ಕಂಪನಿಗೆ 1,200 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಅಲ್ಲದೇ, 667.185 ಎಕರೆ ಜಮೀನಿನಲ್ಲಿ ಅದಿರು ಗಣಿಗಾರಿಕೆಗೆ ಅನುಮತಿ ಪಡೆದಿದ್ದ ಈ ಕಂಪನಿ, 2009-10ರಲ್ಲಿ ಅಕ್ರಮವಾಗಿ ಅದಿರು ಸಾಗಣೆ ಮಾಡಿ 219.54 ಕೋಟಿ ರೂ. ಸರ್ಕಾರಿ ತೆರಿಗೆ ವಂಚಿಸಿದೆ. ಈ ಬಗ್ಗೆ ಲೋಕಾಯುಕ್ತ ನಿವೃತ್ತ ನ್ಯಾಮೂರ್ತಿ ಸಂತೋಷ ಹೆಗ್ಡೆ ಅವರ ವರದಿಯಲ್ಲಿ ಉಲ್ಲೇಖವಿದೆ.
ಜೊತೆಗೆ ಪರಿಸರವಾದಿ ಎಸ್.ಆರ್. ಹಿರೇಮಠ ಅವರು ಜಿಂದಾಲ್ ಕಂಪನಿ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ಇತ್ಯರ್ಥವಾಗುವವರೆಗೂ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಇಷ್ಟೆಲ್ಲ ಆರೋಪಗಳಿದ್ದರೂ ರಾಜ್ಯದ ಅಡ್ವೋಕೇಟ್ ಜನರಲ್ ಅವರು ಜಿಂದಾಲ್ ಕಂಪನಿ ಮೇಲೆ ಯಾವುದೇ ಪ್ರಕರಣಗಳಿಲ್ಲವೆಂದು ಸರ್ಕಾರವನ್ನು ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿದರು.
80ರ ದಶಕದಲ್ಲಿ ಆರಂಭವಾಗಿದ್ದ ಸರ್ಕಾರಿ ಸ್ವಾಮ್ಯದ ವಿಜಯ ನಗರ ಸ್ಟೀಲ್ಸ್ ಕಾರ್ಖಾನೆಯು ಬಳಿಕ ಖಾಸಗೀಕರಣವಾದಾಗ ಅದು ಜಿಂದಾಲ್ ಪಾಲಾಯಿತು. ಈ ವೇಳೆ ಸರ್ಕಾರಿ ಜಮೀನು ಎಷ್ಟಿತ್ತು ಎಂಬುದನ್ನೂ ಸ್ಪಷ್ಟಪಡಿಸಬೇಕು. ಜಿಂದಾಲ್ ಕಂಪನಿಯಲ್ಲಿ ಸ್ಥಳೀಯರಿಗೆ ಎಷ್ಟು ಉದ್ಯೋಗ ನೀಡಿದ್ದಾರೆ, 2006ರಲ್ಲಿ ಆದ ಒಪ್ಪಂದದಲ್ಲಿ ಕಂಪನಿ ಪಾಲಿಸಿದ ನಿಯಮಗಳೆಷ್ಟು ಎಂಬುದರ ಬಗ್ಗೆ ಸರ್ಕಾರ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಬಗರ್‌ಹುಕುಂ ಸಾಗುವಳಿದಾರರಿಗೆ ಒಂದು ಎಕರೆ ಜಮೀನು ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ಹೀಗಾಗಿ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೇ ನೆನೆಗುದಿಗೆ ಬಿದ್ದಿವೆ. ಆದರೆ, ಜಿಂದಾಲ್ ಸ್ಟೀಲ್ಸ್ ಕಂಪನಿಗೆ ಭೂಮಿ ನೀಡಲು ಸರ್ಕಾರ ಏಕಾಏಕಿ ತೀರ್ಮಾನ ಕೈಗೊಂಡಿದೆ ಎಂದು ದೂರಿದರು.
ಇನ್ನೋವೇಟಿವ್ ಕಾರ್ಯಾಧ್ಯಕ್ಷ ಎಸ್.ಕೆ. ನದಾಫ್ ಮಾತನಾಡಿ, ಜಿಂದಾಲ್ ಕಂಪನಿಗೆ ಜಮೀನು ನೀಡಲು ಉದ್ದೇಶಿಸಿರುವ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು. ಇಲ್ಲದಿದ್ದರೆ ಸುಪ್ರೀಂ ಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು ಕಂಪನಿಯ ವಿರುದ್ಧ ಶೀಘ್ರವೇ ರಾಜ್ಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಕಾನೂನಿನ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.
ಇನ್ನೋವೇಟಿವ್ ಕಾರ್ಯಾಧ್ಯಕ್ಷ ಎಸ್.ಕೆ. ನದಾಫ್, ಜಯಕರ್ನಾಟಕ ಸಂಘಟನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ, ಪಾಂಡು ಚವ್ಹಾಣ ಇದ್ದರು.