ನನಗೆ ಎಲ್ಲಾ ಗೊತ್ತು. ನಿನಗೇನು ಮಹಾ ಗೊತ್ತಿದೆ? ನಾನು ಎಲ್ಲವನ್ನೂ ತಿಳಿದು ಕೊಂಡಿದ್ದೀನಿ. ನೀನೇನು ತಿಳಿದಿದ್ದೀಯಾ..? ಹೀಗಂತ ಹೇಳ್ಳೋರು ಇದ್ದಾರೆ. ಅದನ್ನು ವರ್ತನೆಯಲ್ಲಿ ತೋರಿಸಿಕೊಳ್ಳೋರೂ ಇದ್ದಾರೆ. ನನಗೆ ಎಲ್ಲಾ ಗೊತ್ತು ಎಂಬ ವಿಚಾರ ಒಂದು ಸಲ ಮನಸ್ಸಿಗೆ ಹೊಕ್ಕರೆ ಸಾಕು; ಆನಂತರದಲ್ಲಿ ತಲೆಮೇಲೆ ಕೊಂಬು ಬಂದುಬಿಡುತ್ತದೆ. ಇಷ್ಟಾದಮೇಲೆ ಆ ಜನರನ್ನು ಕಂಟ್ರೋಲ್ ಮಾಡುವುದು ಕಷ್ಟ. ಏಕೆಂದರೆ, ಜಗತ್ತಿನಲ್ಲಿ ನನಗೆ ಮಾತ್ರ ಎಲ್ಲವೂ ಗೊತ್ತು. ಉಳಿದವರು ನನಗೆ ಲೆಕ್ಕಕ್ಕೇ ಇಲ್ಲ ಎಂಬ ಅಹಮಿಕೆಯಲ್ಲಿ ಅವರು ಬೀಗುತ್ತಿರುತ್ತಾರೆ.
ನೆನಪಿರಲಿ: ನಾನು ಅನ್ನೋದು ಇದ್ದರೆ ತಲೆ ನೋವು ಜಾಸ್ತಿ. ನನಗೆ ವಿಪರೀತ ಗೊತ್ತಿದೆ. ಆದರೆ, ನನ್ನ ಪ್ರತಿಭೆ ಯನ್ನು, ನನ್ನ ಐಡಿಯಾಗಳನ್ನು ನನ್ನ ಜ್ಞಾನವನ್ನು ಜೊತೆಯಲ್ಲಿ ಇರುವವರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಫೀಲ್ ಜೊತೆಯಾಗುವುದು- ನಾನು ಎಂಬ ಅಹಂ ಜೊತೆಗೆ ಇದ್ದಾಗಲೇ. ವಾಸ್ತವವಾಗಿ, ನನಗೆ ಎಲ್ಲಾ ಗೊತ್ತು ಅನ್ನೋ ಮನೋಸ್ಥಿತಿ ಹೊಂದಿರುವವರಿಗೆ, ಹೊರಗಿನ ಸ್ಪರ್ಧೆ ಎದುರಿಸುವಷ್ಟು ಜ್ಞಾನ ಇರೋದಿಲ್ಲ. ಅವರು ಬಾವಿ ಕಪ್ಪೆಯಂತೆ ತಮ್ಮ ಮೂಗಿನ ನೇರಕ್ಕೆ ಮಾತ್ರ ಯೋಚಿಸುತ್ತಾರೆ.
ಹಾಗಾಗಿ, ಈ ಕ್ಷಣದ ಸಂದರ್ಭಗಳಿಗೆ ತಕ್ಕಂತೆ ಅಪ್‌ಡೇಟ್ ಆಗಿರೋಲ್ಲ. ಇಂಥವರ ಸೈಕಾಲಜಿಯೇ ವಿಚಿತ್ರ. ಯಾರನ್ನೂ ನಂಬೊಲ್ಲ. ನಂಬಿದವರನ್ನು ಹೆಚ್ಚು ದಿನ ಹತ್ತಿರ ಇಟ್ಟುಕೊಳ್ಳಲ್ಲ. ಇವರು ಔಟ್ ಡೇಟೆಡ್ ಅಂತ ತಿಳಿಯುತ್ತಲೇ, ಜನ ಇವರನ್ನು ದೂರ ಇಡಲು ಶುರುಮಾಡುತ್ತಾರೆ. ಅದು ಗೊತ್ತಾಗುತ್ತಿದ್ದಂ ತೆಯೇ, ಈ ಜನ ವಿಚಿತ್ರವಾಗಿ ವರ್ತಿಸುತ್ತಾ ಕುಖ್ಯಾತಿಗೆ/ ಅಪಹಾಸ್ಯಕ್ಕೆ ಈಡಾಗುತ್ತಾರೆ. ನಾನು ಅನ್ನೋದನ್ನು ಮನಸ್ಸಿಂದ ತೆಗೆಯಬೇಕೆಂದರೆ, ಮನಸ್ಸನ್ನು ಹೊಸತನಕ್ಕೆ ತೆರೆದುಕೊಳ್ಳಬೇಕು. ಯಾರಾದರೂ ಒಳ್ಳೆ ಕೆಲಸ ಮಾಡಿದರೆ, ಬೆನ್ನು ತಟ್ಟುವ ಮನೋಭಾವ ರೂಢಿಸಿಕೊಳ್ಳಬೇಕು.
ಯಾರಾದರೂ ಸಲಹೆ ಕೊಟ್ಟರೆ, ಅವರ ಮಾತನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳುವ, ಅದರ ಸರಿ- ತಪ್ಪುಗಳನ್ನು ಲೆಕ್ಕ ಹಾಕುವ ವ್ಯವಧಾನ ಇರಬೇಕು. ಹೀಗೆ, ನಮ್ಮನ್ನು ನಾವೇ ಬದಲಿಸಿಕೊಳ್ಳಲು ಮುಂದಾದಾಗ “ನಾನು’ ಎಂಬ ಅಹಂ ಇಂಚಿಂಚಾಗಿ ನಮ್ಮಿಂದ ಕಳಚಿ ಕೊಳ್ಳುತ್ತದೆ. ಆನಂತರ ನಾವು ಸಮಾಜವನ್ನು, ಅಲ್ಲಿನ ಜನರನ್ನು ನೋಡುವ ಮನೋಭಾವವೇ ಬದಲಾಗುತ್ತದೆ. ಪ್ರತಿಯೊಬ್ಬರಿಂದಲೂ ಹೊಸದನ್ನು ಕಲಿಯುವ ಮನಸ್ಸಾಗುತ್ತದೆ. ನಿಮ್ಮ ಮನಸ್ಸಲ್ಲೂ ನಾನು ಇದೆಯಾ ನೋಡಿ…