ಶಿಕಾರಿಪುರ : ನಾನು ರಾಜಕಾರಣದಲ್ಲಿ ಇಷ್ಟರಮಟ್ಟಿಗೆ ಬೆಳೆದಿದ್ದರೆ ಅದಕ್ಕೆ ಆಶೀರ್ವಾದ ಮಾಡಿದ್ದು ಯಡಿಯೂರಪ್ಪ ಅವರು, ಇಂಥ ದೊಡ್ಡ ಮನಸ್ಸಿನ ನಾಯಕ ಹುಡುಕಿದರೂ ಸಿಗುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಅವರನ್ನು ಶನಿವಾರ ಹಾಡಿ ಹೊಗಳಿದ್ದಾರೆ.
ಶಿಕಾರಿಪುರದಲ್ಲಿ ನಡೆದ ರೈತಾಭಿಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ, ಯಡಿಯೂರಪ್ಪ ಅವರು ಬಡವರು ಬಗ್ಗೆ ದೀನದಲಿತರ ಬಗ್ಗೆ ಕಾಳಜಿ ಇರುವವರಾಗಿದ್ದಾರೆ. ನನ್ನನ್ನು ಪ್ರೀತಿ ವಿಶ್ವಾಸದಿಂದ ಬೆಳೆಸಿ ಅಧಿಕಾರವನ್ನು ನೀಡಿದ್ದಾರೆ. ನನ್ನನ್ನು ಜಲಸಂಪನ್ಮೂಲ ಸಚಿವವನ್ನು ಮಾಡಿ ನೀರಾವರಿ ಯೋಜನೆ ರೂಪಿಸುವ ಕೆಲಸ ಮಾಡಿಸಿದವರು.ಭದ್ರಾ ಮೇಲ್ದಂಡೆ ಯೋಜನೆಯನ್ನು ನನ್ನ ಅವಧಿಯಲ್ಲೇ ಮಾಡಿದ್ದು ಎಂಬ ಸಂತಸ ನನಗಿದೆ. ಭದ್ರಾ ಮೇಲ್ದಂಡೆ ಯೋಜನೆ ಇದೀಗ ರಾಷ್ಟ್ರೀಯ ಯೋಜನೆಯಾಗುತ್ತಿದೆ. ಇದರ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದರು.
ದೂರದೃಷ್ಟಿಯ ನಾಯಕತ್ವ ಇದ್ದವರು ಇದ್ದರೆ ರಾಜ್ಯ ಸುಭೀಕ್ಷವಾಗುತ್ತದೆ ಎಂಬುದಕ್ಕೆ ಯಡಿಯೂರಪ್ಪ ಅವರೇ ನಿದರ್ಶನ.ಶಿಕಾರಿಪುರ ತಾಲೂಕು ಸಂಪೂರ್ಣ ನೀರಾವರಿಯಾಗುತ್ತಿದೆ.ನಾನು ನೀರಾವರಿ ಸಚಿವನಾದಾಗ ನಾನು ಚಾಮರಾಜ ನಗರಕ್ಕೆ ಹೋಗಿದ್ದೆ.ಆಗ ಸುತ್ತೂರು ಶ್ರೀಗಳು ನೀರಾವರಿ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.ಆಗ ಕಬಿನಿ ಸೆಕೆಂಡ್ ಸ್ಟೇಜ್ ಯೋಜನೆ ರೂಪಿಸಲು ಕಾರಣಿಕರ್ತರಾದವರು ಯಡಿಯೂರಪ್ಪ ಅವರು.ಬಳಿಕ ನಾವು ಅಧಿಕಾರ ಕಳೆದುಕೊಂಡೆವು. ಆದರೂ ಜನ ಯಡಿಯೂರಪ್ಪ ಅವರನ್ನು ಹುಡುಕಿಕೊಂಡು ಬಂದು ಸನ್ಮಾನ ಮಾಡುತ್ತಿದ್ದರು.ಈ ರೀತಿಯ ಪ್ರೀತಿ ಸಿಗಬೇಕು ಎಂದರೆ ಹಾಗೆ ಕೆಲಸವನ್ನೂ ಮಾಡಬೇಕು. ಯಡಿಯೂರಪ್ಪ ರಾಜ್ಯದ ಮೂಲೆ ಮೂಲೆಯಲ್ಲಿ ಕೆಲಸ ಮಾಡಿದ್ದಾರೆ. ಅವರ ಕೆಲಸಗಳು ಇಂದು ಮಾತನಾಡುತ್ತಿವೆ ಎಂದರು.
ಯಾವುದೇ ಕೆಲಸ ಮಾಡಬೇಕು ಎಂದು ಕೊಂಡರೆ ಅದನ್ನು ಮಾಡಿಯೇ ತೀರುವವರು ಯಡಿಯೂರಪ್ಪ ಅವರು.ನಾಯಕನಿಗೆ ಸೂಕ್ಷ್ಮತೆ ಇರಬೇಕು ಎಂಬುದನ್ನು ನಾವು ಯಡಿಯೂರಪ್ಪ ಅವರನ್ನು ನೋಡಿ ಕಲಿಯಬೇಕಿದೆ. ರೈತರಿಗೆ ಹತ್ತು ಎಚ್ ಪಿ ಪಂಪ್ ವರೆಗೆ ಉಚಿತ ವಿದ್ಯುತ್ ನೀಡಿದ್ದು ಯಡಿಯೂರಪ್ಪ ಅವರು. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 58 ಲಕ್ಷ ರೈತರಿಗೆ ತಲಾ 4 ಸಾವಿರ ರೂಪಾಯಿ ರಾಜ್ಯದ ಪಾಲನ್ನು ನೀಡಿದ್ದು ಯಡಿಯೂರಪ್ಪ ಅವರು.ಅವರು ಎಂದು ವೈಯಕ್ತಿಕವಾಗಿ ಯೋಚಿಸುವುದಿಲ್ಲ. ಅವರು ಅಧಿಕಾರ ಬಿಟ್ಟಾಗಲೂ ಅವರಲ್ಲಿ ಕಹಿ ಎಂಬುದಿರಲಿಲ್ಲ. ಮತ್ತೆ ರಾಜ್ಯ ಸುತ್ತಿ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂಬುದ ಅವರ ಬದ್ಧತೆ ತೋರುತ್ತಿದೆ ಎಂದರು.
ರಾಜ್ಯದಲ್ಲಿ ಕೋವಿಡ್ ಯಶಸ್ವಿಯಾಗಿ ನಿಭಾಯಿಸಿದ್ದು ಯಡಿಯೂರಪ್ಪ ಅವರು.ಬಜೆಟ್ ನಲ್ಲಿ ಇದನ್ನುನಾನು ಹೇಳಿದ್ದೇನೆ.ಯಡಿಯೂರಪ್ಪ ಹಾಕಿಕೊಟ್ಟ ಯೋಜನೆಗಳು ಹಾಗೂ ಹಾದಿಯಲ್ಲಿ ನಾವು ನಡೆಯುತಿದ್ದೇವೆ.ನಾನು ಬಜೆಟ್ ನಲ್ಲಿ ದುಡಿಮೆಯೇ ದೊಡ್ಡಪ್ಪ ಎಂದು ಹೇಳಿದ್ದೇನೆ.
ನಾನು ಜನರಲ್ಲಿ ನಂಬಿಕೆ ಇಟ್ಟಿದ್ದೇನೆ. ಅವರಿಗೆ ಸಹಾಯ ಮಾಡಿದಾರೆ ದುಡಿದು ಹೆಚ್ಚಿನ ಆದಾಯ ಗಳಿಸುತ್ತಾರೆ ಎಂಬ ನಂಬಿಕೆ ನನಗಿದೆ. ಕರ್ನಾಟಕ ಇಡೀ ದೇಶದಲ್ಲಿ ಮಾದರಿಯಾಗಬೇಕು ಎಂಬ ಯಡಿಯೂರಪ್ಪ ಅವರ ಆಸೆಯಂತೆಯೇ ನಾನು ಕೆಲಸ ಮಾಡುತ್ತೇನೆ ಎಂದರು.