Advertisement

ನನ್ನನ್ನು ಆಯ್ಕೆ ಮಾಡಿದರೆ ಜನರ ಮಧ್ಯೆ ಇದ್ದು ಕೆಲಸ ಮಾಡುವೆ

10:00 PM Apr 14, 2019 | Team Udayavani |

ಕೆ.ಆರ್‌.ನಗರ: “ಏ.18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಮತದಾರರು ನನ್ನನ್ನು ಆಯ್ಕೆ ಮಾಡಿದರೆ ನಾನು ಜನರ ಮಧ್ಯೆ ಇದ್ದು ಉತ್ತಮ ಕೆಲಸ ಮಾಡಿ ನನ್ನ ಸಾಮರ್ಥ್ಯ ಸಾಬೀತುಪಡಿಸುತ್ತೇನೆ’ ಎಂದು ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌ಕುಮಾರಸ್ವಾಮಿ ಹೇಳಿದರು.

Advertisement

ಪಟ್ಟಣದಲ್ಲಿರುವ ಕಾಂಗ್ರೆಸ್‌ ಕಚೇರಿಗೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ರೊಂದಿಗೆ ಆಗಮಿಸಿ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮತ್ತು ಜಿಪಂ ಸದಸ್ಯ ಡಿ.ರವಿಶಂಕರ್‌ರನ್ನು ಭೇಟಿಯಾಗಿ ಕಾಂಗ್ರೆಸ್‌ ಬೆಂಬಲ ಕೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜಕೀಯದಲ್ಲಿ ನಾನು ಇನ್ನೂ ಚಿಕ್ಕವನಿದ್ದು, ಮುಂದಿನ ದಿನಗಳಲ್ಲಿ ಎಲ್ಲವನ್ನೂ ಹಿರಿಯರಿಂದ ಕಲಿಯುತ್ತೇನೆಂದರು. ಚುನಾವಣೆಗೆ 4 ದಿನ ಬಾಕಿ ಇರುವಾಗ ತಾಲೂಕಿನ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿ ಮುಖಂಡರ ಬೆಂಬಲ ಕೋರುತ್ತಿದ್ದೀರಲ್ಲ.

ಈ ಹಿಂದೆ ಏಕೆ ಬಂದಿರಲಿಲ್ಲ ಎಂಬ ಪ್ರಶ್ನೆಗೆ, ಕೆ.ಆರ್‌.ನಗರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಪರಸ್ಪರ ಸಮನ್ವಯದ ಕೊರತೆಯಿಂದ ಸ್ವಲ್ಪ ಗೊಂದಲವಿತ್ತು. ಹೀಗಾಗಿ ನಾಯಕರನ್ನು ಭೇಟಿ ಮಾಡಿರಲಿಲ್ಲ. ಈಗ ಎಲ್ಲವೂ ಸರಿಯಾಗಿದೆ ಎಂದರು.

ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸಾಮೇಗೌಡ ಮಾತನಾಡಿ, ಕಾಂಗ್ರೆಸ್‌ ಮುಖಂಡರು-ಕಾರ್ಯಕರ್ತರಿಗೆ ಮೈತ್ರಿ ಧರ್ಮ ಪಾಲಿಸುವಂತೆ ಮನವಿ ಮಾಡುವುದರ ಜತೆಗೆ ನಿಖಿಲ್‌ಕುಮಾರಸ್ವಾಮಿ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ. ಇದಕ್ಕಿಂತ ಹೆಚ್ಚಿನ ಭರವಸೆ ನೀಡಲು ನಮ್ಮಿಂದ ಸಾಧ್ಯವಿಲ್ಲ ಎಂದರು.

Advertisement

ಕಾಂಗ್ರೆಸ್‌ ಕಾರ್ಯಕರ್ತರ ಅಸಮಾಧಾನ: 3 ಬಾರಿ ಚುನಾವಣಾ ಪ್ರಚಾರಕ್ಕೆಂದು ಕೆ.ಆರ್‌.ನಗರಕ್ಕೆ ಆಗಮಿಸಿದ್ದರೂ ಕಾಂಗ್ರೆಸ್‌ ಕಚೇರಿಗೆ ಬಂದು ದೊಡ್ಡಸ್ವಾಮೇಗೌಡ ಮತ್ತು ಡಿ.ರವಿಶಂಕರ್‌ರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳದ ನಿಖಿಲ್‌ ಕುಮಾರಸ್ವಾಮಿ ವರ್ತನೆ ಬಗ್ಗೆ ಕಚೇರಿ ಬಳಿಯಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

ಜಿಪಂ ಸದಸ್ಯರಾದ ಡಿ.ರವಿಶಂಕರ್‌, ಅಚ್ಚುತಾನಂದ, ಮಾಜಿ ಸದಸ್ಯ ಜಿ.ಆರ್‌.ರಾಮೇಗೌಡ, ನವನಗರ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ಬಸಂತ್‌, ಮೈಮುಲ್‌ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್‌, ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್‌ ಚಿನ್ನಿರವಿ,

ತಾಲೂಕು ಜೆಡಿಎಸ್‌ ವಕ್ತಾರ ಕೆ.ಎಲ್‌.ರಮೇಶ್‌, ಎಪಿಎಂಸಿ ನಿರ್ದೇಶಕ ಎಸ್‌.ಟಿ.ಕೀರ್ತಿ, ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಸಾ.ಮಾ.ಯೋಗೇಶ್‌, ತಾಲೂಕು ಕಾಂಗ್ರೆಸ್‌ ವಕ್ತಾರ ಸೈಯದ್‌ಜಾಬೀರ್‌, ತಾಲೂಕು ಯುವ ಜೆಡಿಎಸ್‌ ಅಧ್ಯಕ್ಷ ಎಚ್‌.ಆರ್‌.ಮಧುಚಂದ್ರ ಮತ್ತಿತರರಿದ್ದರು.

ಟೀಕೆ ಮಾಡಿದರೆ ನಾನೇನೂ ಮಾಡಕ್ಕಾಗಲ್ಲ…: ಸಂಸದ ಎಲ್‌.ಆರ್‌.ಶಿವರಾಮೇಗೌಡರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ರನ್ನು ಸಾರ್ವಜನಿಕ ಸಭೆಯಲ್ಲಿ ಮಾಯಾಂಗನೆ ಎಂದು ಜರಿದಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ, ಯಾರೇ ಆಗಲಿ ವೈಯಕ್ತಿಕವಾಗಿ ಟೀಕೆ ಮಾಡಬಾರದು.

ತಾನು ವಯಸ್ಸಿನಲ್ಲಿ ಚಿಕ್ಕವನಾಗಿರುವುದರಿಂದ ಎಲ್‌.ಆರ್‌.ಶಿವರಾಮೇಗೌಡರಿಗೆ ಬುದ್ಧಿ ಹೇಳಲು ಆಗುವುದಿಲ್ಲ. ಮುಂದೆ ಈ ರೀತಿ ಟೀಕೆ ಮಾಡದಂತೆ ಮನವಿ ಮಾಡುತ್ತೇನೆ. ಆದಾಗ್ಯೂ ಅವರು ಅದೇ ಚಾಳಿ ಮುಂದುವರಿಸಿದರೆ ನಾನೇನು ಮಾಡಲಾಗುವುದಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next