Advertisement

Harish Poonja ಬಂಧಿಸಿದರೆ ಮುಂದಾಗುವ ಘಟನೆಗಳಿಗೆ ಸರಕಾರ ನೇರ ಹೊಣೆ: ವಿಜಯೇಂದ್ರ ಎಚ್ಚರಿಕೆ

12:24 AM May 23, 2024 | Team Udayavani |

ಬೆಂಗಳೂರು: ಶಾಸಕ ಹರೀಶ್‌ ಪೂಂಜ ಅವರ ಬಂಧನದಂತಹ ದುಸ್ಸಾಹಸಕ್ಕೆ ಪೊಲೀಸರು ಕೈ ಹಾಕಿದರೆ ಮುಂದೆ ನಡೆಯುವ ಘಟನೆಗಳಿಗೆ ರಾಜ್ಯ ಸರಕಾರ ಹಾಗೂ ಪೊಲೀಸರೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಸಿದ್ದಾರೆ.

Advertisement

ಪ್ರಕರಣ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರೀಶ್‌ ಪೂಂಜ ಬಂಧನಕ್ಕೆ ಯತ್ನಿಸುತ್ತಿರುವುದು ಖಂಡನೀಯ. ಈ ವಿಚಾರದಲ್ಲಿ ಬಿಜೆಪಿ ಕೈ ಕಟ್ಟಿ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕಠಿನ ಶಿಕ್ಷೆ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ವಿನಾಕಾರಣ ಬಿಜೆಪಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್‌ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಿರುವ ಪೊಲೀಸರ ಕ್ರಮ ಖಂಡನೀಯ. ಅಕ್ರಮ ಗಣಿಗಾರಿಕೆ ವಿಚಾರವಾಗಿ ಪ್ರಕರಣ ದಾಖಲಾದಾಗ ಹರೀಶ್‌ ಪೂಂಜ ಅವರು ಕರೆ ಮಾಡಿ ಪ್ರಶ್ನಿಸಿದಾಗ ಎಫ್‌ಐಆರ್‌ನಲ್ಲಿ ಶಶಿರಾಜ್‌ ಹೆಸರಿಲ್ಲ ಎಂದು ಪೊಲೀಸರು ಸುಳ್ಳು ಹೇಳಿದ್ದರು. ಆದರೆ ಶಶಿರಾಜ್‌ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಿ ರಾತೋರಾತ್ರಿ ಬಂಧಿಸಿದ್ದರಿಂದ ಶಾಸಕರು ಠಾಣೆಗೆ ಹೋಗಿ ಗಲಾಟೆ ಮಾಡಿರುವುದು ಸತ್ಯ ಎಂದು ಸಮರ್ಥಿಸಿಕೊಂಡರು.

ಹೋರಾಟ ಹತ್ತಿಕ್ಕುವ ಪ್ರಯತ್ನ
ದ.ಕ. ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ದಬ್ಬಾಳಿಕೆ ನಡೆಸಿ ವಿನಾಕಾರಣ ಎಫ್‌ಐಆರ್‌ ದಾಖಲಿಸಿ ಸೇಡು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರ ಪರವಾಗಿ ಶಾಸಕರು ಠಾಣೆಗೆ ಹೋಗಿ ಕಾರ್ಯಕರ್ತರಿಗೆ ಶಕ್ತಿ ನೀಡುವ ಕೆಲಸ ಮಾಡಿದ್ದಾರೆ. ಇಷ್ಟಾದರೂ ಪೊಲೀಸರು ಸ್ಪಂದಿಸದಿದ್ದಾಗ ಪ್ರತಿಭಟನೆಗೆ ಕರೆ ಕೊಟ್ಟಿರುವುದು ನಿಜ. ಆದರೆ ನೀತಿಸಂಹಿತೆ ನೆಪವೊಡ್ಡಿ ಪೊಲೀಸರು, ಆಡಳಿತ ಪಕ್ಷದವರು ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರದ ನಡೆ ಖಂಡನಾರ್ಹ: ಅಶೋಕ್‌
ಬೆಂಗಳೂರು: ವಿಪಕ್ಷಗಳ ಸದಸ್ಯರ ಮೇಲೆ ಸರಕಾರ ಪ್ರಕರಣ ದಾಖಲಿಸುತ್ತಿದ್ದು, ಈಗ ಸರಕಾರ ಶಾಸಕ ಹರೀಶ್‌ ಪೂಂಜ ಅವರನ್ನು ಬಂಧಿಸಲು ಮುಂದಾಗಿದೆ. ಇದು ನಿಜಕ್ಕೂ ಖಂಡನಾರ್ಹ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಇದು ಮುಂದುವರಿದರೆ ಕಾಂಗ್ರೆಸ್‌ ಅಧಿಕಾರದಲ್ಲಿ ಉಳಿಯುವುದಿಲ್ಲ. ಶಾಸಕರ ಧ್ವನಿ ಅಡಗಿಸಲು ಮುಂದಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ಕಾಂಗ್ರೆಸ್‌ ಶಾಸಕರು ಆವಾಜ್‌ ಹಾಕುವ, ಹಲ್ಲೆ ಮಾಡುವ ಎಷ್ಟೋ ಘಟನೆಗಳು ರಾಜ್ಯದಲ್ಲಿ ನಡೆದಿವೆ. ಇತ್ತೀಚೆಗೆ ಕೆಂಗೇರಿಯಲ್ಲಿ ಪೊಲೀಸ್‌ ಠಾಣೆಗೆ ಮೂರು ಜನರು ನುಗ್ಗಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಕಪಾಳಕ್ಕೆ ಹೊಡೆದಿದ್ದಾರೆ. ಅವರನ್ನು ಬಂಧಿಸದೆ, ಇಲ್ಲಿ ಬೈದವರನ್ನು ಬಂಧಿಸಲು ಸರಕಾರ ಮುಂದಾಗಿದೆ. ಇದು ಸರಕಾರದ ದ್ವಿಮುಖ ನೀತಿ ಎಂದು ಅಶೋಕ್‌ ಟೀಕಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next