Advertisement

ಸಂಪುಟದಿಂದ ಜಾರ್ಜ್‌ ಕೈಬಿಡದಿದ್ದರೆ ಉಗ್ರ ಹೋರಾಟ

11:43 AM Sep 12, 2017 | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ರನ್ನು ತಕ್ಷಣವೇ ಸಂಪುಟದಿಂದ ಕೈಬಿಡದಿದ್ದರೆ ರಾಜ್ಯಾದ್ಯಂತ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಸಿದ್ದಾರೆ. ಮಹಾನಗರ ಮತ್ತು ನಗರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಸಚಿವ ಜಾರ್ಜ್‌ ರಾಜೀನಾಮಗೆ ಆಗ್ರಹಿಸಿ ಸೋಮವಾರ ಮೌರ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

Advertisement

“ಡಿವೈಎಸ್‌ಪಿ ಗಣಪತಿ ಸಾವಿನ ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸಿ, ಸಚಿವ ಜಾರ್ಜ್‌ ವಿರುದ್ಧ ಬಿ-ರಿಪೋರ್ಟ್‌ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್‌ ಈಗ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದೆ. ಈ ಮಧ್ಯೆ ಸಿಐಡಿ ಪೊಲೀಸರು ಕೆಲವರಿಗೆ ದೂರವಾಣಿ ಕರೆ ಮಾಡಿ, ಸಾಕ್ಷ್ಯನಾಶಕ್ಕೆ ಮುಂದಾಗಿದ್ದಾರೆ. ಇದರಲ್ಲಿ ಸಚಿವ ಜಾರ್ಜ್‌ ಹಾಗೂ ಸರ್ಕಾರದ ಕೈವಾಡ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಚ್ಚೆತ್ತುಕೊಂಡು ಕೂಡಲೇ ಸಚಿವ ಜಾರ್ಜ್‌ರನ್ನು ಸಂಪುಟದಿಂದ ಕೈಬಿಡಬೇಕು,’ ಎಂದು ಆಗ್ರಹಿಸಿದರು.

ಖಾಕಿಗೆ ಅವಮಾನ: “ಡಿವೈಎಸ್‌ಪಿ ಗಣಪತಿ ಸಾವು ನಿಗೂಢ. ರಾಜ್ಯ ಸರ್ಕಾರ ವ್ಯವಸ್ಥಿತ ಪಿತೂರಿ ಮಾಡಿ, ಅದನ್ನು ಆತ್ಮಹತ್ಯೆ ಎಂಬುದಾಗಿ ಬಿಂಬಿಸಿದೆ. ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ಅಲ್ಲ. ಸಿಬಿಐ ತನಿಖೆಗೂ ಮೊದಲೇ ಎಲ್ಲ ಸಾಕ್ಷ್ಯ ನಾಶಮಾಡುವ ಷಡ್ಯಂತ್ರ ಸರ್ಕಾರದಿಂದ ನಡೆಯುತ್ತಿದೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಅಧಿಕಾರಿಗಳಿಗೆ ಬೆಲೆ ನೀಡುತ್ತಿಲ್ಲ. ಜಾತಿ ಆಧಾರದಲ್ಲಿ, ಪಕ್ಷಕ್ಕೆ ನಿಷ್ಠರಾಗಿರುವ ಅಧಿಕಾರಿಗಳಿಗೆ ಮಣಿ ಹಾಕುತ್ತಿದ್ದಾರೆ.

ಸರ್ಕಾರದಿಂದ ಖಾಕಿ ಬಟ್ಟೆಗೆ ಅವಮಾನವಾಗುತ್ತಿದೆ. ಗಣಪತಿ ಸಾವಿನ ಪ್ರಕರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು,’ ಎಂದು ಒತ್ತಾಯಿಸಿದರು. ಮಹಾನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ಶಾರದಾ ನಾಯಕ್‌, ಜಿಲ್ಲಾ ಮೋರ್ಚಾದ ಅಧ್ಯಕ್ಷೆ ವಿಜಯಲಕ್ಷ್ಮೀ ಆನಂದ್‌, ರಾಜ್ಯ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಭಾರತಿ ಮಲ್ಲಿಕಾರ್ಜುನ್‌ ಮೊದಲಾದವರು ಪ್ರತಿಭಟನೆಯಲ್ಲಿದ್ದರು.

ಆಡಳಿತದ ವೈಫ‌ಲ್ಯದಿಂದ ನಗರ ಮುಳುಗಡೆ
ಮಳೆಯಿಂದ ಬೆಂಗಳೂರು ಅಕ್ಷರಶಃ ಮುಳುಗಡೆಯಾಗಿದೆ. ಮಳೆ ಬರುತ್ತಿದೆ ಎಂದರೆ ಸಾರ್ವಜನಿಕರು ಮನೆಯಿಂದ ಹೊರ ಬರಲು ಭಯ ಪಡುತ್ತಿದ್ದಾರೆ. ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದ್ದರೂ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಯಾವುದೇ ಮುನ್ನೆಚ್ಚರಿಕೆ ವಹಿಸಿಲ್ಲ. ಬೆಂಗಳೂರು ಉಸ್ತುವಾರಿ ಸಚಿವ ಜಾರ್ಜ್‌ ಅವರ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ ಎಂದು ಶೋಭಾ ಕರಂದ್ಲಾಜೆ ದೂರಿದರು.

Advertisement

ಗೌರಿ ಲಂಕೇಶ್‌ ಹತ್ಯೆ ಪ್ರಕರಣವನ್ನು ದಕ್ಷ ಅಧಿಕಾರಿಗಳ ಮೂಲಕ ತನಿಖೆ ನಡೆಸಲಿ. ರಾಜ್ಯ ಸರ್ಕಾರಕ್ಕೆ ಪ್ರಾಮಾಣಿಕವಾಗಿ ತನಿಖೆ ನಡೆಸಲು ಆಗುವುದಿಲ್ಲ ಎಂದಾದರೆ ಸಿಬಿಐಗೆ ಒಪ್ಪಿಸಲಿ. ಸಿಬಿಐನವರು ಸೂಕ್ತ ತನಿಖೆ ನಡೆಸುತ್ತಾರೆ.
-ಶೋಭಾ ಕರಂದ್ಲಾಜೆ, ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next