Advertisement

ರಾಜ್ಯದಲ್ಲಿಯೂ ಮೂರು ತಿದ್ದುಪಡಿ ಕಾಯ್ದೆ ಹಿಂಪಡೆಯದಿದ್ದರೆ ತೀವ್ರ ಹೋರಾಟ: ಹಿರೇಮಠ

06:12 PM Feb 01, 2022 | Team Udayavani |

ಬೆಳಗಾವಿ: ರಾಜ್ಯದಲ್ಲಿ ಮೂರು ಕರಾಳ ಕೃಷಿ ಕಾಯ್ದೆ ಸರ್ಕಾರ ಹಿಂಪಡೆಯದಿದ್ದರೆ ಅಹಿಂಸಾತ್ಮಕ ಹೋರಾಟ ನಡೆಸಲಾಗುವುದು. ಜತೆಗೆ ಬಿಜೆಪಿ ಶಾಸಕರ ಮೇಲೆ ಒತ್ತಡ ಹಾಕಲಾಗುವುದು ಎಂದು ಸಮಾಜ ಪರಿವರ್ತನಾ ಸಮಾಜದ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಎಚ್ಚರಿಕೆ ನೀಡಿದರು.

Advertisement

ನಗರದಲ್ಲಿ ಸೋಮವಾರ ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಿದ್ದುಪಡಿ ಕಾಯ್ದೆ ಹಾಗೂ ಜಾನುವಾರು ಹತ್ಯೆ ತಡೆ ಹಾಗೂ ಸಂರಕ್ಷಣಾ ಕಾಯ್ದೆ ಹಿಂಪಡೆಯಬೇಕು. ಖಾಸಗೀಕರಣಕ್ಕೆ ಆಸ್ಪದ ನೀಡಬಾರದು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದರು.

ಜನಾಂದೋಲನ ಮಹಾಮೈತ್ರಿ ಹಾಗೂ ಸಮಾನ ಮನಸ್ಕ ಸಂಘಟನೆಗಳು ರಾಜ್ಯದ ಬಜೆಟ್‌ ಗಮನದಲ್ಲಿ ಇಟ್ಟುಕೊಂಡು ಬೀದರ ಜಿಲ್ಲೆಯ ಬಸವಕಲ್ಯಾಣ ಅನುಭವ ಮಂಟಪದಿಂದ ಬೆಂಗಳೂರುವರೆಗೆ, ಚಾಮರಾಜನಗರ ಜಿಲ್ಲೆಯ ಮಲೆ ಮಹಾದ್ವೇಶ್ವರ ಬೆಟ್ಟದಿಂದ ಬೆಂಗಳೂರುವರೆಗೆ ಜಾಥಾ ಹಮ್ಮಿಕೊಳ್ಳಲಾಗುವುದು. ಈ ಕಾಯ್ದೆಗಳ ರದ್ದತಿಗಾಗಿ ಮತ್ತು ಬೆಳೆಗೆ ಕನಿಷ್ಟ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಜಾಥಾ ಹಮ್ಮಿಕೊಳ್ಳಲಾಗುವುದು ಎಂದರು.

ಬೆಳಗಾವಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಪರ್ಯಾಯವಾಗಿ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಆರಂಭಿಸಲಾಗಿದೆ. ಕೂಡಲೇ ಈ ಜೈ ಕಿಸಾನ್‌ ಸಗಟು ಮಾರುಕಟ್ಟೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಪಂಚರಾಜ್ಯ ಚುನಾವಣೆ ಫಲಿತಾಂಶಕ್ಕೆ ಹೆದರಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಸ್‌ ಪಡೆದಿದೆ. ಕೇಂದ್ರ ಸರ್ಕಾರ ಎಂಎಸ್‌ಪಿ ಬಗ್ಗೆ ಸಮಿತಿ ಮಾಡುವುದಾಗಿ ಹೇಳಿದರೂ ಇದುವರೆಗೆ ಮಾಡಿಲ್ಲ.

ರಾಜ್ಯದಲ್ಲಿ ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆ ಹಿಂಪಡೆಯಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಬಿಜೆಪಿ-ಕಾಂಗ್ರೆಸ್‌ ಪಕ್ಷಗಳು ಹಾಸುಹೊಕ್ಕಾಗಿವೆ. ರೈತ ವಿರೋ ಧಿ ಕಾಯ್ದೆಗೆ ಸಿದ್ದರಾಮಯ್ಯ, ಯಡಿಯೂರಪ್ಪ ಇಬ್ಬರೂ ಹೊಣೆಗಾರರಿದ್ದಾರೆ. ಈ ಕಾಯ್ದೆಗಳನ್ನು ಕಿತ್ತೂಗೆಯುವವರೆಗೂ ನಾವು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

Advertisement

ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ ಮಾತನಾಡಿ, ಜೈ ಕಿಸಾನ್‌ ಸಗಟು ತರಕಾರಿ ಮರ್ಚಂಟ್‌ ಅಸೋಸಿಯೇಷನ್‌ ಖಾಸಗಿ ಮಾರುಕಟ್ಟೆ ಇಲ್ಲಿಯ ಗಾಂ ಧಿ ನಗರದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಆರಂಭಿಸಲಾಗಿದೆ. ಇದು ಕಾನೂನು ಬಾಹಿರವಾಗಿದ್ದು, ಈ ಮಾರುಕಟ್ಟೆ ರದ್ದುಗೊಳಿಸಿ ಎಪಿಎಂಸಿ ಮಾರುಕಟ್ಟೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ, ಸಂಬಂಧಿಸಿದ ಸಚಿವರು, ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಜ. 11ರಂದು ಸಭೆ ನಡೆಸಿದರೂ ಜಿಲ್ಲಾ ಧಿಕಾರಿಗಳು ಇದನ್ನು ಹಗುರವಾಗಿ ಪರಿಗಣಿಸಿದ್ದಾರೆ. ಈವರೆಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಖಾಸಗಿ ಮಾರುಕಟ್ಟೆ ವಿರುದ್ಧ ರಾಜ್ಯದ ರೈತಪರ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಮಹಿಳಾ, ಯುವಜನ, ಸಾಮಾಜಿ ಹೋರಾಟಗಾರರ ನೇತೃತ್ವದಲ್ಲಿ ರಾಜ್ಯ ಮಟ್ಟದ ಹೋರಾಟದ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು. ಎಲ್ಲ ಜಿಲ್ಲಾ-ತಾಲೂಕು, ಗ್ರಾಮ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ದೆಹಲಿಯ ಸಂಯುಕ್ತ ಕಿಸಾನ್‌ ಮೋರ್ಚಾ ಮಾದರಿಯಲ್ಲಿ ಬೆಳಗಾವಿಯಲ್ಲಿ ಹೋರಾಟ ನಡೆಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಕಾರ್ಯದರ್ಶಿ ರವಿಕಿರಣ ಪೂಣಜ, ಭೂಮಿ ಹಾಗೂ ವಸತಿ ವಂಚಿತರ ಸಂಘದ ಅಧ್ಯಕ್ಷ ಸಿರಿಮನೆ ನಾಗರಾಜ, ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ಸದಸ್ಯ ಟಿ.ಯಶವಂತ, ಎಐಸಿಇಟಿಯು ಸದಸ್ಯ ಪಿಆರ್‌ ಎಸ್‌ ಮಣಿ, ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ವರದರಾಜೇಂದ್ರ ಸೇರಿದಂತೆ ಇತರರು ಇದ್ದರು. ನಂತರ ಸಂಘಟನೆಗಳ ಪ್ರಮುಖರು ನಗರದ ಎಪಿಎಂಸಿ ಸಗಟು ಮಾರುಕಟ್ಟೆ ಆವರಣದಲ್ಲಿ ಎಪಿಎಂಸಿ ಅಧ್ಯಕ್ಷರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ರಾಜ್ಯದಲ್ಲಿ 20 ಪರ್ಸೆಂಟ್‌ ಇದ್ದ ಕ್ರಿಮಿನಾಲಿಟಿ ಈಗ 40 ಪರ್ಸೆಂಟ್‌ ಗೆ ಹೆಚ್ಚಾಗಿದೆ. ಜೆಸಿಬಿ(ಜೆಡಿಎಸ್‌-ಕಾಂಗ್ರೆಸ್‌ -ಬಿಜೆಪಿ) ಪಕ್ಷಗಳನ್ನು ಹಠಾವೋ ಮಾಡಿದರೆ
ಮಾತ್ರ ಜನರಿಗೆ ನ್ಯಾಯ ಸಿಗಲಿದೆ. ಕರಾಳ ಕೃಷಿ ಕಾಯ್ದೆಗಳು ರೈತರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಕೂಡಲೇ ಸರ್ಕಾರ ಕಾಯ್ದೆ ಹಿಂಪಡೆದು ರೈತರ ಬೆನ್ನಿಗೆ ನಿಲ್ಲಬೇಕು.
ಎಸ್‌.ಆರ್‌. ಹಿರೇಮಠ, ಅಧ್ಯಕ್ಷರು, ಸಮಾಜ
ಪರಿವರ್ತನಾ ಸಮುದಾಯ

Advertisement

Udayavani is now on Telegram. Click here to join our channel and stay updated with the latest news.

Next