ಹೊಸದಿಲ್ಲಿ: ಪುಣೆ ಪೊಲೀಸರು ಆ.28ರಂದು ಬಂಧಿಸಿದ ಐವರು ಹೋರಾಟಗಾರರ ಗೃಹ ಬಂಧನದ ಅವಧಿಯನ್ನು ಸುಪ್ರೀಂಕೋರ್ಟ್ ಸೆ.19ರ ವರೆಗೆ ವಿಸ್ತರಿಸಿದೆ. ಇದೇ ವೇಳೆ ಉದ್ದೇಶ ಪೂರ್ವಕವಾಗಿಯೇ ಪೊಲೀಸರು ಹೋರಾಟಗಾರರ ವಿರುದ್ಧ ಆರೋಪಗಳನ್ನು ಹೊರಿಸಿದ್ದು ದೃಢಪಟ್ಟರೆ ಅವರ ವಿರುದ್ಧದ ಆರೋಪಗಳನ್ನು ವಜಾ ಮಾಡುತ್ತೇವೆ. ತನಿಖೆಯಲ್ಲಿ ಗಂಭೀರ ಲೋಪಗಳಿದ್ದರೆ ಅಥವಾ ಸಾಕ್ಷ್ಯಗಳು ಪೊಲೀಸರ ಸೃಷ್ಟಿಯೆಂದು ಸಾಬೀತಾದರೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆ ಮಾಡುವುದರ ಬಗ್ಗೆಯೂ ಚಿಂತನೆ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಸೋಮವಾರ ಹೇಳಿದೆ. ಹೀಗಾಗಿ, ಭಿಮಾ- ಕೋರೆಗಾಂವ್ ಹಿಂಸಾಚಾರ, ಪ್ರಧಾನಿ ಮೋದಿ ಹತ್ಯೆ ಸಂಚು ಮತ್ತು ಇತರ ಗುರುತರ ಆರೋಪಗಳ ಹಿನ್ನೆಲೆಯಲ್ಲಿ ಬಂಧಿತಲಾಗಿರುವ ಪಿ.ವರವರ ರಾವ್, ಅರುಣ್ ಫೆರೇರಾ, ವೆನೊìನ್ ಗೊನ್ಸಾಲ್ವಿಸ್, ಸುಧಾ ಭಾರದ್ವಾಜ್ ಮತ್ತು ಗೌತಮ್ ನವ್ಲಾಖಾ ವಿರುದ್ಧ ಪ್ರಕರಣಗಳ ಭವಿಷ್ಯ ಬುಧವಾರ ನಿರ್ಧಾರವಾಗಲಿದೆ.