Advertisement
ಸ್ಥಾಯೀ ಸಮಿತಿ ಅಧ್ಯಕ್ಷ ಮುಕುಂದ ಮಾತನಾಡಿ, ಕಂದಾಯ ಇಲಾಖೆಯ ಭ್ರಷ್ಟಾಚಾರ ತಾಲೂಕಿಗೆ ಕಪ್ಪುಚುಕ್ಕೆ ಆಗಿದೆ. ಇದಕ್ಕೆ ಕಡಿವಾಣ ಹಾಕಲೇ ಬೇಕಾಗಿದೆ. ಲಂಚ ನೀಡದೇ ಇದ್ದರೆ, ಕಡತಗಳು ಮುಂದೆ ಹೋಗುವುದೇ ಇಲ್ಲ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೆಳ ಹಂತದ ಅಧಿಕಾರಿಯಿಂದಲೇ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.
94ಸಿ, 94ಸಿಸಿ ಹಕ್ಕುಪತ್ರ ನೀಡಬೇಕಾದರೆ ಇಂತಿಷ್ಟು ಹಣ ನೀಡಬೇಕು ಎಂಬ ಬೇಡಿಕೆ ಇಡಲಾಗುತ್ತಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಅಧಿಕಾರಿಗಳು ಗೌಪ್ಯವಾಗಿ ಹಣ ವಸೂಲು ಮಾಡುವುದನ್ನು ಸಾರ್ವಜನಿಕರು ನಮ್ಮ ಬಳಿ ಹೇಳಿಕೊಳ್ಳುತ್ತಿದ್ದಾರೆ. ಬಡ ವರ್ಗದವರು ಸಾಲ ಮಾಡಿ ಮನೆ ಕಟ್ಟುವ ಕನಸು ಕಂಡಿದ್ದರೆ, ಅದಕ್ಕೂ ಕಲ್ಲು ಹಾಕುವ ಪ್ರಯತ್ನ ಅಧಿಕಾರಿಗಳಿಂದ ನಡೆಯುತ್ತಿದೆ. ಹೀಗಾದರೆ ಬಡಪಾಯಿಗಳು ಜೀವನ ನಿರ್ವಹಣೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು. ಕಂದಾಯ ಇಲಾಖೆಯಲ್ಲಿ ಕಡತಗಳು ಯಾಕೆ ವಿಲೇವಾರಿ ಆಗುತ್ತಿಲ್ಲ. ಒಂದು ಕಡತವನ್ನು ತುಂಬಾ ದಿನ ಇಟ್ಟುಕೊಳ್ಳು ವುದು ಯಾಕೆ, ಇನ್ನು ಕೆಲ ಅರ್ಜಿಗಳು ತಿರಸ್ಕೃತಗೊಳ್ಳುವುದು ಯಾಕೆ ಎಂದು ಪ್ರಶ್ನಿಸಲಾಯಿತು. ಉತ್ತರಿಸಿದ ಉಪತಹಶೀಲ್ದಾರ್ ಶ್ರೀಧರ್, ಈ ಬಗ್ಗೆ ಮಾಹಿತಿ ಪಡೆದು ಬಳಿಕ ಉತ್ತರಿಸುತ್ತೇನೆ ಎಂದರು.
Related Articles
ಸಿಡಿಪಿಒ ಶಾಂತಿ ಹೆಗ್ಡೆ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು ಪೌಷ್ಟಿಕ ಆಹಾರ ಸೇವನೆಗೆ ಅಂಗನವಾಡಿ ಕೇಂದ್ರಗಳಿಗೆ ಬರುತ್ತಿಲ್ಲ ಎನ್ನುವುದನ್ನು ಸಭೆ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಶಾಸಕಿ ಅಧ್ಯಕ್ಷತೆಯ ಸಭೆ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಿಕೊಟ್ಟಿದೆ. ಈ ನಡುವೆ ಯೋಜನೆಯ ಸಮರ್ಪಕ ಜಾರಿಗೆ ಇಲಾಖೆಯಿಂದಲೂ ಮೇಲಿನಿಂದ ಮೇಲೆ ಸಭೆ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೆ ಮನೆಗೊಯ್ದು ಕೊಡಬಾರದು ಎಂದು ತಿಳಿಸಲಾಗಿದೆ ಎಂದರು.ಪ್ರಧಾನಮಂತ್ರಿ ಮಾತೃವಂದನ ಯೋಜನೆ ಜಿಲ್ಲೆಯಲ್ಲಿ ಡಿಸೆಂಬರ್ ಕೊನೆ ವಾರದಿಂದ ಜಾರಿಗೆ ಬಂದಿದೆ. ಮೊದಲ ಬಾರಿಯ ಗರ್ಭಿಣಿ, ಬಾಣಂತಿ ಇದರ ಫಲಾನುಭವಿಗಳು. ಗರ್ಭಿಣಿಗೆ 1,000 ರೂ., ಬಾಣಂತಿಗೆ 2,000 ರೂ. ನೀಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. 200 ಮಾತೃವಂದನ ಅರ್ಜಿಗಳು ಆನ್‌ಲೈನ್‌ನಲ್ಲಿ ಫೀಡ್ ಆಗಿದ್ದು, 33 ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ ಎಂದು ಮಾಹಿತಿ ನೀಡಿದರು.
Advertisement
ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಚೆನ್ನಬಸಪ್ಪ ಮಾತನಾಡಿ, 40 ಹಳೆ ಬಸ್‌ಗಳ ಓಡಾಟ ನಿಲ್ಲಿಸಿದ್ದೇವೆ. 74 ಹೊಸ ಬಸ್‌ಗಳು ಓಡಾಟ ಆರಂಭಿಸಿವೆ. ಬಸ್‌ಗಳನ್ನು ಸಮಯಕ್ಕೆ ಸರಿಯಾಗಿ ಸಂಚರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು. ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಕಾರ್ಯನಿರ್ವಹಣ ಅಧಿಕಾರಿ ಜಗದೀಶ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ತರಬೇತಿಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್. ಮಾತನಾಡಿ, ಈ ವರ್ಷ 5,110 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಹೆತ್ತವರ ಜತೆ ಸಭೆ ನಡೆಸಲಾಗಿದೆ. ಇದರಲ್ಲಿ ಮುಸ್ಲಿಂ
ಸಮುದಾಯದ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ. ಇವರ ಹೆತ್ತವರ ಜತೆ ಮಾತನಾಡಿದಾಗ, ಉತ್ತಮ ಸ್ಪಂದನೆ ಸಿಕ್ಕಿದೆ. ಇದೀಗ ವಲಯ ಮಟ್ಟದಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. 30 ಅಂಕಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅವರಿಗೆ ವಿಶೇಷ ತರಬೇತಿ ನೀಡಿ, ಪರೀಕ್ಷೆಗೆ ತಯಾರಿ ನಡೆಸಲಾಗುವುದು ಎಂದು ವಿವರಿಸಿದರು. ಸಮಯಕ್ಕೆ ಸರಿಯಾಗಿ ಬಸ್ ಸಂಚರಿಸಲಿ
ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್ ಮಾತನಾಡಿ, ಪರೀಕ್ಷೆಗಳು ಹತ್ತಿರ ಬರುತ್ತಿವೆ. ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಗಮನ ಹರಿಸಬೇಕು. ಸಮಯಕ್ಕೆ ಸರಿಯಾಗಿ ಬಸ್ ಸಂಚರಿಸಬೇಕು. ವಿದ್ಯಾರ್ಥಿಗಳನ್ನು ತಿರಸ್ಕಾರದ ಭಾವನೆಯಿಂದ ನೋಡಬೇಡಿ. ಮಾನವೀಯ ನೆಲೆಯಲ್ಲಿ ಕೆಲಸ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು. ಇದಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಗೌಡ ಧ್ವನಿಗೂಡಿಸಿದರು.