Advertisement

ದೇವದಾಸಿ ಸ್ತ್ರೀಯರ ವಹಿಸಿದರೆ 2 ಲಕ್ಷ ಪ್ರೋತ್ಸಾಹ ಧನ

01:00 PM Oct 25, 2017 | Team Udayavani |

ಬೆಂಗಳೂರು: ದೇವದಾಸಿ ಪದ್ಧತಿಯಿಂದ ಮುಕ್ತಿ ಪಡೆದ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಂಡರೆ, ಅಂತಹ ದಂಪತಿಗೆ 2 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು. ಆದರೆ, ಆ ಪ್ರೋತ್ಸಾಹಧನದ ಹಣವನ್ನು ಯಾವುದೇ ಕಾರಣಕ್ಕೂ ಗಂಡನ ಕೈಯಲ್ಲಿ ನೀಡುವುದಿಲ್ಲ. ಬದಲಾಗಿ ಕುಟುಂಬ ನಿರ್ವಹಣೆ ದೃಷ್ಟಿಯಿಂದ ಹೆಂಡತಿಯ ಕೈಗೆ ಹಣ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ತಿಳಿಸಿದರು.

Advertisement

ರಾಷ್ಟ್ರೀಯ ಕಾನೂನು ಶಾಲೆಯ ತಳ ಸಮುದಾಯಗಳ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರು ಕೇಂದ್ರ ವಿವಿ ಸಹಯೋಗದಲ್ಲಿ ಮಂಗಳವಾರ ಸೆಂಟ್ರಲ್‌ ಕಾಲೇಜಿನ ಸೆನೆಟ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ದೇವದಾಸಿ ತಾಯಂದಿರ ಮತ್ತು ಮಕ್ಕಳ ಸಹಭಾಗಿತ್ವದಲ್ಲಿ ಅಧ್ಯಯನ ಮತ್ತು ಸಮಗ್ರ ಪುನರ್ವಸತಿ ನೀತಿ ರೂಪಿಸುವ’ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದೇವದಾಸಿ ಕುಟುಂಬಗಳ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಸರ್ಕಾರ ಪ್ರತಿ ಕುಟುಂಬಕ್ಕೆ ತಲಾ 2 ಎಕರೆ ಜಮೀನು ಮಂಜೂರು ಮಾಡಲು ಆಲೋಚಿಸಿದ್ದು, ಅದಕ್ಕಾಗಿ 50 ಕೋಟಿ ರೂ. ವೆಚ್ಚದಲ್ಲಿ ಜಮೀನು ಖರೀದಿಸಲು ಚಿಂತನೆ ನಡೆದಿದೆ. 

ಸಮಾಜದ ಎಲ್ಲ ವರ್ಗದವರಂತೆ ದೇವದಾಸಿ ಕುಟುಂಬಗಳು ಸಹ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಬೆಳೆಯಬೇಕು ಅನ್ನುವುದು ಸರ್ಕಾರದ ಆಶಯ. ದೇವದಾಸಿಯರ ಮಕ್ಕಳು ವೈದ್ಯಕೀಯ, ಇಂಜಿನಿಯರಿಂಗ್‌ ಸೇರಿ ಉನ್ನತ ಶಿಕ್ಷಣ ಪಡೆಯಲು ಬಯಸಿದರೆ, ಅದಕ್ಕೆ ಸರ್ಕಾರ ಆರ್ಥಿಕ ನೆರವು ನೀಡಲಿದೆ. ದೇವದಾಸಿ ಮಕ್ಕಳ ಪೋಷಣೆಗೆ ಪಾಲಕರಿಗೆ ಮಾಸಿಕ 2 ಸಾವಿರ ರೂ. ನೀಡಲಾಗುವುದು ಎಂದರು.

ಇದೇ ವೇಳೆ ದೇವದಾಸಿ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕೆಂದು ಸಭೆಯಲ್ಲಿ ಕೇಳಿ ಬಂದ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಪರಿಶಿಷ್ಟರಿಗೆ ಸಿಗುವ ಮೀಸಲಾತಿ ದೇವದಾಸಿ ಕುಟುಂಬಗಳಿಗೂ ಅನ್ವಯವಾಗಲಿದೆ. ಒಳಮೀಸಲಾತಿ ಬೇಕೆಂದರೆ, ಅದು ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು. 

Advertisement

ಕಾರ್ಯಕ್ರಮದಲ್ಲಿ ದೇವದಾಸಿ ತಾಯಂದಿರು, ದೇವದಾಸಿ ತಾಯಂದಿರ ಮಕ್ಕಳು ತಮ್ಮ ಅನುಭವಗಳನ್ನು ಹಂಚಿಕೊಂಡು, ಸರ್ಕಾರದ ಮುಂದೆ ಬೇಡಿಕೆಗಳನ್ನು ಮಂಡಿಸಿದರು. ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ. ಎಸ್‌. ಜಾಫೆಟ್‌, ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಅಧ್ಯಕ್ಷೆ ಪಡಿಯಮ್ಮ, ವಿಮೋಚನಾ ಸಂಸ್ಥೆ ಅಧ್ಯಕ್ಷ ಬಿ.ಎಲ್‌. ಪಾಟೀಲ್‌, ಸಖೀ ಸಂಸ್ಥೆಯ ಡಾ. ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next