Advertisement

ಹಾವೇರಿಯಲ್ಲಿ ಸೋಂಕಿತರು ಹೆಚ್ಚಾದ್ರೆ ಬೆಡ್‌ ಕೊರತೆ!

07:46 PM May 04, 2021 | Team Udayavani |

ಹಾವೇರಿ: ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಹರಡುತ್ತಿರುವ ಕೊರೊನಾ ಎರಡನೇ ಅಲೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸೋಮವಾರ ಬರೋಬ್ಬರಿ 330 ಜನರಿಗೆ ಕೊರೊನಾ ಸೋಂಕು ತಗಲಿದ್ದು, ಜಿಲ್ಲೆಯಲ್ಲಿ ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಸೋಂಕಿತರು ಬೆಡ್‌ಗಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಲಿದೆ.

Advertisement

ರಾಜ್ಯದ ಇತರೆ ಜಿಲ್ಲೆಯಲ್ಲಿ ಕೊರೊನಾ ಪರಿಸ್ಥಿತಿ ಉಲ್ಬಣಗೊಂಡಿದ್ದರೂ ಜಿಲ್ಲೆಯಲ್ಲಿ ಮಾತ್ರ ನಿಯಂತ್ರಣದಲ್ಲಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ದಿಢೀರ್‌ ಹೆಚ್ಚುತ್ತಿರುವುದು ತೀವ್ರ ಆತಂಕ ಮೂಡಿಸಿದೆ. ಕಳೆದೊಂದು ವಾರದಿಂದ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದ್ದು, ಹೀಗೆ ಪ್ರಕರಣಗಳು ಹೆಚ್ಚುತ್ತಿದ್ದರೆ ಸೋಂಕಿತರಿಗೆ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಹರಸಾಹಸ ಪಡಬೇಕಾದೀತು.

ಆಸ್ಪತ್ರೆಗಳಲ್ಲಿ ಏನೆಲ್ಲ ವ್ಯವಸ್ಥೆ:

ನಗರದ ಜಿಲ್ಲಾಸ್ಪತ್ರೆಯಲ್ಲಿ 148 ಬೆಡ್‌ಗಳ ವ್ಯವಸ್ಥೆ ಇದ್ದು, ಅದರಲ್ಲಿ ಈಗಾಗಲೇ 69 ಬೆಡ್‌ಗಳಲ್ಲಿ ಸೋಂಕಿತರು ದಾಖಲಾಗಿದ್ದಾರೆ. 16 ಸೋಂಕಿತರು ಐಸಿಯುನಲ್ಲಿ, 18 ಜನ ಆಕ್ಸಿಜನ್‌ ನಲ್ಲಿ, 35 ಜನ ಆಕ್ಸಿಜನ್‌ ರಹಿತ ಬೆಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 79ಬೆಡ್‌ಗಳು ಖಾಲಿ ಉಳಿದಿವೆ. ಜಿಲ್ಲೆಯಲ್ಲಿ ಕೇವಲ 54 ಐಸಿಯು ಬೆಡ್‌ಗಳಿದ್ದು, ಅದರಲ್ಲಿ 20 ಬೆಡ್‌ಗಳಿಗೆ ಮಾತ್ರ ವೆಂಟಿಲೇಟರ್‌ ವ್ಯವಸ್ಥೆ ಇದೆ. ಇನ್ನುಳಿದ 34 ಬೆಡ್‌ಗಳಲ್ಲಿ ವೆಂಟಿಲೇಟರ್‌ ವ್ಯವಸ್ಥೆ ಇಲ್ಲದಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 243ಬೆಡ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಇದರಲ್ಲಿ 151 ಬೆಡ್‌ ಗಳಲ್ಲಿ ಸೋಂಕಿತರು ದಾಖಲಾಗಿದ್ದಾರೆ. ಇದರಲ್ಲಿ 20 ಜನ ಆಕ್ಸಿಜನ್‌ ವ್ಯವಸ್ಥೆ ಪಡೆದಿದ್ದರೆ, 131 ಆಕ್ಸಿಜನ್‌ ರಹಿತ ಬೆಡ್‌ಗಳಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯ ಯಾವುದೇ ತಾಲೂಕು ಆಸ್ಪತ್ರೆಯಲ್ಲೂ ಐಸಿಯು ವ್ಯವಸ್ಥೆ ಮಾಡಿಕೊಂಡಿಲ್ಲ.

ಸೋಂಕಿತರಿಗೆ ಬೆಡ್‌ಗಳ ಕೊರತೆ:

Advertisement

ಹಾನಗಲ್ಲ ತಾಲೂಕು ಆಸ್ಪತ್ರೆಯಲ್ಲಿ 44 ಬೆಡ್‌ಗಳಲ್ಲಿ 38 ಬೆಡ್‌ಗಳಲ್ಲಿ ಸೋಂಕಿತರು ದಾಖಲಾಗಿದ್ದಾರೆ. ಕೇವಲ 6 ಬೆಡ್‌ ಗಳು ಮಾತ್ರ ಬಾಕಿ ಉಳಿದಿವೆ. ಶಿಗ್ಗಾವಿಯಲ್ಲಿ 44 ಬೆಡ್‌ಗಳ ವ್ಯವಸ್ಥೆ ಇದ್ದು, ಈಗ ಎಲ್ಲ ಬೆಡ್‌ಗಳೂ ಭರ್ತಿಯಾಗಿರುವುದರಿಂದ ಹೊಸದಾಗಿ ಸೋಂಕಿತರಿಗೆ ಬೆಡ್‌ಗಳ ಕೊರತೆ ಎದುರಾಗಲಿದೆ ಎಂಬ ಆತಂಕ ಶುರುವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಕೊರತೆ: ಜಿಲ್ಲೆಯ ರಾಣಿಬೆನ್ನೂರಿನ ಓಂ ಆಸ್ಪತ್ರೆ, ಸಾಯಿ ಆಸ್ಪತ್ರೆ, ಹಾವೇರಿಯ ದೇವಧರ ಆಸ್ಪತ್ರೆ, ಮಲ್ಲಾಡದ ಆಸ್ಪತ್ರೆಗಳಲ್ಲಿ ಒಟ್ಟು 141 ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, 57 ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಐಸಿಯು ವ್ಯವಸ್ಥೆ ಇಲ್ಲದಾಗಿದೆ.

ಕೇರ್‌ ಸೆಂಟರ್‌ ವ್ಯವಸ್ಥೆ:

ಜಿಲ್ಲೆಯ ಬಾಡ, ಬಸಾಪುರ, ಬ್ಯಾಡಗಿ, ದೂದೀಹಳ್ಳಿ, ಕಲಕೇರಿ, ರಾಣಿಬೆನ್ನೂರ, ಸವಣೂರಿನಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಸ್ಥಾಪಿಸಿ 535 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದ್ದು, 117 ಸೋಂಕಿತರು ದಾಖಲಾಗಿದ್ದು, 418 ಬೆಡ್‌ಗಳು ಖಾಲಿ ಇದ್ದರೂ ಅಲ್ಲಿ ಆಕ್ಸಿಜನ್‌, ಐಸಿಯು, ವೆಂಟಿಲೇಟರ್‌ ವ್ಯವಸ್ಥೆ ಇಲ್ಲದಾಗಿದೆ. ಹೀಗಾಗಿ ಕೊರೊನಾ ಸೋಂಕಿತರು ಆತಂಕ ಪಡುವಂತಾಗಿದೆ. ಸೋಂಕಿತರ ಸಂಖ್ಯೆ ಏರಿಕೆ: ಜಿಲ್ಲಾಸ್ಪತ್ರೆಯಲ್ಲಿರುವ ಲಿಕ್ವಿಡ್‌ ಮೆಡಿಕಲ್‌ ಟ್ಯಾಂಕ್‌ಗೆ 5500 ಲೀಟರ್‌ ಆಕ್ಸಿಜನ್‌ ಸೋಮವಾರ ಪೂರೈಕೆಯಾಗಿದ್ದು, ಇದು ಸದ್ಯ ಇರುವ ಸೋಂಕಿತರ ಸಂಖ್ಯೆಗೆ ಲೆಕ್ಕ ಹಾಕಿದರೆ ಎರಡು ದಿನಗಳಿಗೆ ಸಾಲುತ್ತದೆ. ನಿತ್ಯ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಬೆಡ್‌, ಆಕ್ಸಿಜನ್‌, ವೆಂಟಿಲೇಟರ್‌ ಕೊರತೆಯಾಗುವುದಂತೂ ನಿಶ್ಚಿತ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಅಗತ್ಯ ವ್ಯವಸ್ಥೆ ಮಾಡಿಕೊಂಡು ಚಾಮರಾಜನಗರದಲ್ಲಿನ ಘಟನೆ ಜಿಲ್ಲೆಯಲ್ಲಿ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next