ಕೊಲ್ಲಾಪುರ/ಪಣಜಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮತ್ತೆ ಜಾರಿಗೆ ತರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗಂಭೀರ ಆರೋಪ ಮಾಡಿದರು. ಅಲ್ಲದೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನೂ ವಾಪಸ್ ಪಡೆದುಕೊಳ್ಳಲಿದೆ ಎಂದೂ ಹೇಳಿದರು.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಆಯೋಜಿ ಸಲಾಗಿದ್ದ ಚುನಾವಣ ಪ್ರಚಾರ ಸಭೆಯಲ್ಲಿ ಶನಿವಾರ ಮಾತನಾಡಿದ ಪ್ರಧಾನಿ ಮೋದಿ, ಎನ್‌ಡಿಎ ಅಭಿವೃದ್ಧಿಯ ಕಾರ್ಯನೀತಿಯ ವಿರುದ್ಧ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಅರಿತಿರುವ ಕಾಂಗ್ರೆಸ್ ಮತ್ತು ಅದರ ಗೆಳೆಯರು ತಮ್ಮ ತಂತ್ರವನ್ನು ಬದಲಿಸಿದ್ದಾರೆ. ತಮ್ಮ ಗೆಲುವಿಗಾಗಿ ರಾಷ್ಟ್ರ ವಿರೋಧಿ ಅಜೆಂಡಾಗಳು ಮತ್ತು ತುಷ್ಟೀಕರಣದ ಮೊರೆ ಹೋಗಿದ್ದಾರೆಂದು ಆರೋಪಿಸಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟವು 3 ಅಂಕಿಯ ಸದಸ್ಯರನ್ನೂ ಗೆಲ್ಲದು ಅಥವಾ ಸರಕಾರ ರಚಿಸುವ ಸನಿಹ ಕೂಡ ಬರಲಾರದು. ಆದರೂ ವರ್ಷಕ್ಕೊಬ್ಬರು ಪ್ರಧಾನಿಯಾಗುವ ಯೋಜನೆಯನ್ನು ಹೊಂದಿದೆ ಎಂದು ಆರೋಪಿಸಿದರು.
ರಾಮ ಮಂದಿರ ವಿರುದ್ಧ ಕಾನೂನು ಹೋರಾಟ ನಡೆಸಿದ ಅನ್ಸಾರಿ ಮತ್ತು ಅವರ ಕುಟುಂಬವು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳುತ್ತದೆ. ಆದರೆ ಕಾಂಗ್ರೆಸ್ ಮಾತ್ರ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನವನ್ನು ತಿರಸ್ಕರಿಸುತ್ತದೆ ಎಂದು ಹೇಳಿದರು.
ಸ್ವಾರ್ಥ ಸಾಧನೆಗೆ ಇಂಡಿಯಾ ಕೂಟ: ಈ ಚುನಾ ವಣೆಯು ಎರಡು ನೀತಿಗಳ ವಿರುದ್ಧ ನಡೆಯುತ್ತಿದೆ. ಒಂದು ಕಡೆ ಇರುವ ಎನ್‌ಡಿಎ ದೇಶದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಪ್ರಯತ್ನಿಸುತ್ತಿದೆ. ಮತ್ತೂಂದೆಡೆ ಇಂಡಿಯಾ ಕೂಟವು ತನ್ನ ಸ್ವಾರ್ಥಕ್ಕಾಗಿ ಮತ್ತು ತಮ್ಮ ಕುಟುಂಬಗಳ ಉದ್ಧಾರಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗೋವಾದ ಪ್ರಚಾರ ಸಭೆಯಲ್ಲಿ ಹೇಳಿದರು.
ಎನ್‌ಡಿಎಗೆ 2-0 ಮುನ್ನಡೆ: ಮೋದಿ
ಕೊಲ್ಲಾಪುರ ಫುಟ್ಬಾಲ್‌ಗೆ ಹೆಸರುವಾಸಿ. ಫುಟ್ಬಾಲ್ ಭಾಷೆಯಲ್ಲಿ ಹೇಳುವುದಾದರೆ ಎನ್‌ಡಿಎ ಈ ಚುನಾವಣೆಯಲ್ಲಿ 2-0ರಿಂದ ಮುನ್ನಡೆಯಲ್ಲಿದೆ ಎಂದು ಮೋದಿ ಹೇಳಿದರು. ಇಂಡಿಯಾ ಕೂಟವು ರಾಷ್ಟ್ರ ವಿರೋಧಿ ಮತ್ತು ತುಷ್ಟೀಕರಣವನ್ನು ಅಳವಡಿಸಿಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.