ಬೆಂಗಳೂರು/ ಕೋಲಾರ: ಲೋಕಸಭೆ ಚುನಾವಣೆ ನಂತರ ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಇದಕ್ಕೆ ಪುಷ್ಟಿ ನೀಡುವಂತೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕೂಡ ಹೇಳಿಕೆ ನೀಡಿದ್ದಾರೆ. ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸದಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ಥಾನಕ್ಕೆ ಕಂಟಕ ಇದೆ ಎಂಬ ಅವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ಬೈರತಿ ಸುರೇಶ್ ಹೇಳಿದ್ದೇನು?:
ಇದೀಗ ಕೋಲಾರದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೊರತುಪಡಿಸಿ, ಬೇರೆ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಕಂಟಕ ಬರುವ ಸಾಧ್ಯತೆ ಇದೆ ಎನ್ನುವ ಮೂಲಕ ಮತ್ತೂಂದು ಸುತ್ತಿನ ರಾಜಕೀಯ ಚರ್ಚೆಗೆ ನಾಂದಿ ಹಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲೋಕಸಭೆ ಚುನಾವಣೆ ನಂತರ ಅಧಿಕಾರದಿಂದ ಕಿತ್ತೂಗೆಯುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಆರ್.ಅಶೋಕ್, ವಿಜಯೇಂದ್ರ ಹಾಗೂ ಇತರರು ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಎಂದೂ ಹಣದ ಆಮಿಷ ಕೊಟ್ಟು ಸಿಎಂ ಆದವರಲ್ಲ. ಧೈರ್ಯ, ನಾಯಕತ್ವದ ಬುದ್ಧಿಮತ್ತೆಯಿಂದ ಮುಖ್ಯಮಂತ್ರಿಯಾದವರು. ಬಿಜೆಪಿಯ ಇಡಿ, ಐಟಿ, ಸಿಬಿಐ ಸಿದ್ದರಾಮಯ್ಯರನ್ನು ಏನು ಮಾಡಲಾಗುತ್ತಿಲ್ಲ. ಸಿದ್ದರಾಮಯ್ಯ ಒಬ್ಬ ಜಿ.ಪಂ. ಸದಸ್ಯ ಮಾಡಿದಷ್ಟು ಹಣವನ್ನೂ ಮಾಡಿಲ್ಲ. ಸಿದ್ದರಾಮಯ್ಯ ನಿಷ್ಠಾವಂತರಾಗಿ ಪ್ರಾಮಾಣಿಕ ರಾಜಕಾರಣಿಯಾಗಿ ನಿತ್ಯವೂ ಮೋದಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಆದ್ದರಿಂದ, ಸಿದ್ದರಾಮಯ್ಯ ಅವರ ಸ್ಥಾನವನ್ನು ಭದ್ರಪಡಿಸಲು ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಇಲ್ಲವಾದರೆ ಅವರ ಸ್ಥಾನಕ್ಕೆ ಕಂಟಕ ಇದೆ ಎನ್ನುವುದನ್ನು ಅರಿತುಕೊಳ್ಳಬೇಕು. ಇದನ್ನು ಕುರುಬ ಸಮಾಜ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಇತ್ತೀಚೆಗಷ್ಟೇ ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣ್ ಒಕ್ಕಲಿಗ, ಒಕ್ಕಲಿಗರನ್ನು ಗೆಲ್ಲಿಸಿ, ವರುಣಾದಲ್ಲಿ 60 ಸಾವಿರ ಮತಗಳ ಲೀಡ್ ಕೊಡಿ. ಆಗ ಮಾತ್ರ ನಾನು ಸಿಎಂ ಆಗಿ ಮುಂದುವರಿಯಲು ಸಾಧ್ಯ ಎನ್ನುವಂತೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.
ಚುನಾವಣೆ ತರುವಾಯ ಸರ್ಕಾರ ಅಧಿಕಾರದಲ್ಲಿ ಇರುತ್ತದೆಯೋ ಇಲ್ಲವೋ ಎನ್ನುವ ಚರ್ಚೆಗೆ ಪುಷ್ಟಿ ನೀಡುವಂತೆ ವಿಪಕ್ಷ ಬಿಜೆಪಿ ಒಂದೆಡೆ ಹೇಳಿಕೆಗಳನ್ನು ಕೊಡುತ್ತಿದ್ದರೆ, ಇನ್ನೊಂದೆಡೆ ಇದನ್ನೇ ರಾಜಕೀಯ ದಾಳ ಮಾಡಿಕೊಂಡಿರುವ ಆಡಳಿತಾರೂಢ ಕಾಂಗ್ರೆಸ್, ಸರ್ಕಾರ ಉಳಿಸಿಕೊಳ್ಳುವುದರ ಜತೆಗೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಕಸರತ್ತೂ ನಡೆಸುತ್ತಿದೆ.
ಅನೇಕ ಮಂತ್ರಿಗಳೂ ತಂತಮ್ಮ ಕ್ಷೇತ್ರಗಳನ್ನೇ ಇದೇ ದಾಳ ಉರುಳಿಸಲಾರಂಭಿಸಿದ್ದಾರೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ, ನಮ್ಮ ಸಚಿವ ಸ್ಥಾನ ಉಳಿಸಿ ಎಂದು ಕೇಳಿಕೊಳ್ಳಲಾರಂಭಿಸಿದ್ದಾರೆ. ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಇಂಥದ್ದೇ ಹೇಳಿಕೆಯನ್ನು ಕೊಟ್ಟಿದ್ದರಲ್ಲದೆ, ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ತಾವು ಸಿಎಂ ಆಗುವ ಸುಳಿವನ್ನೂ ನೀಡಿದ್ದರು. ಅದೇ ರೀತಿ ಸಚಿವ ಶರಣಬಸಪ್ಪ ದರ್ಶನಾಪುರ ಕೂಡ “ನೀವು ಗೆಲ್ಲಿಸಿದರೆ, ನಾನು ಮಂತ್ರಿಯಾಗಿರುತ್ತೇವೆ’ ಎಂದು ಮತದಾರರ ಮುಂದೆ ಹೇಳಿಕೊಂಡಿದ್ದರು.
ಕುರುಬರು ಮಾತು ಕೊಟ್ಟರೆ ಬದಲಾಗುವರಲ್ಲ:
ಕುರುಬ ಸಮಾಜವನ್ನು ಹಾಲುಮತಸ್ಥರು ಎಂದು ಕರೆಯುತ್ತಾರೆ. ಯಾವುದೇ ಚುನಾವಣೆಯಲ್ಲಿ ಮೊದಲ ಮತ ಕುರುಬರಿಂದಲೇ ಹಾಕಿಸುತ್ತಾರೆ, ಕುರುಬರು ಮಾತುಕೊಟ್ಟರೆ ಬದಲಾಗುವರಲ್ಲ ಎನ್ನುವುದೇ ಇದಕ್ಕೆ ಕಾರಣವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಕುರುಬ ಸಮಾಜದವರು ಎಂಬ ಕಾರಣಕ್ಕೆ ಡಿ.ಕೆ.ಶಿವಕುಮಾರ್ ತಮಗೆ ಮೊದಲು ಬಿ ಫಾರಂ ನೀಡಿದ್ದರು. ಹಾಗೆಯೇ ಕಾಂಗ್ರೆಸ್ ಪಕ್ಷವು ಬಹುಮತದ ಸರ್ಕಾರ ನಡೆಸಿದೆ. ತಾವು ಸೇರಿದಂತೆ ಕುರುಬ ಸಮಾಜದ ಎಲ್ಲಾ ನಾಯಕರು ತಲೆ ಎತ್ತಿ ಜನಪ್ರತಿನಿಧಿಗಳಾಗಿದ್ದೇವೆ ಎಂದು ಧೈರ್ಯದಿಂದ ಹೇಳಿಕೊಳ್ಳಲು ಸಿದ್ದರಾಮಯ್ಯರೇ ಕಾರಣವಾಗಿದ್ದಾರೆ, ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ ವರ್ತೂರು ಪ್ರಕಾಶ್‌ರಿಗೂ ಸಿದ್ದರಾಮಯ್ಯರೇ ಗುರುತಿಸಿ ಅವಕಾಶ ಕಲ್ಪಿಸಿದ್ದರೆಂದರು.