Advertisement

ನೈತಿಕತೆ ಇದ್ದರೆ ಬಿಎಸ್‌ವೈ ರಾಜೀನಾಮೆ ನೀಡಲಿ

06:05 AM Oct 29, 2017 | |

ಬೆಂಗಳೂರು: “ನೈತಿಕತೆ ಇದ್ದರೆ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ’ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Advertisement

“ಯಡಿಯೂರಪ್ಪ ವಿರುದ್ಧ ವಂಚನೆ, ಡಿನೋಟಿಫಿಕೇಶನ್‌ ಅವ್ಯವಹಾರ ಸೇರಿ ಅನೇಕ ಪ್ರಕರಣಗಳು ದಾಖಲಾಗಿವೆ. ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಬೇರೆಯವರ ತಟ್ಟೆಯಲ್ಲಿನ ನೊಣ ತೆಗೆಯಲು ಹೋಗುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿಯೇ ತಮ್ಮ ವಿರುದಟಛಿ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಈಗ ಡಿವೈಎಸ್‌ಪಿ ಗಣಪತಿ ಸಾವಿನ ಪ್ರಕರಣ ವನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಇಷ್ಟೊಂದು ಪ್ರಕರಣಗಳು ದಾಖಲಾಗಿರುವಾಗ ಯಡಿಯೂರಪ್ಪ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಅರ್ಹರೇ ಎಂದು ಪ್ರಶ್ನಿಸಿದರು.

ಎಫ್ಐಆರ್‌ ದಾಖಲಾದ ತಕ್ಷಣ ಆರೋಪ ಸಾಬೀತಾಗಿದೆ ಎಂದು ಅರ್ಥವಲ್ಲ. ಯಾರೇ ದೂರು ನೀಡಿದರೂ ಮೊದಲು ಎಫ್ಐಆರ್‌
ದಾಖಲಾಗುವುದು ಸಹಜ. ಅಷ್ಟಕ್ಕೆ ಜಾರ್ಜ್‌ ರಾಜೀನಾಮೆಗೆ ಒತ್ತಾಯ ಮಾಡುವುದು ಸರಿಯಲ್ಲ. ಈ ಹಿಂದೆ ಜಾರ್ಜ್‌ ನಾನು
ಬೇಡವೆಂದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಹೀಗಾಗಿ ಮತ್ತೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದರು.

Advertisement

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಕೂಡ ಜಾರ್ಜ್‌ ಪರವಾಗಿ ಮಾತನಾಡಿದ್ದಾರೆಂಬ ಪ್ರಶ್ನೆಗೆ , “ಜಾರ್ಜ್‌ ಪರವಾಗಿ ಮಾತನಾಡಿಲ್ಲ, ಕಾನೂನು ಪರವಾಗಿ ಮಾತನಾಡಿದ್ದಾರೆ. ನಾನೂ ಸಹ ಜಾರ್ಜ್‌ ರಕ್ಷಣೆಗೆ ನಿಂತಿಲ್ಲ.ಆದರೆ, ಕಾನೂನು ಪರವಾಗಿದ್ದೇನೆ. ಸಿಬಿಐ ತನಿಖೆ ಮೇಲೆ ಜಾರ್ಜ್‌ ಪ್ರಭಾವ ಬೀರುತ್ತಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆ. ಹೀಗಾಗಿ ತನಿಖೆಗೆ ತೊಂದರೆಯಾಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಜಾರ್ಜ್‌ ನನ್ನ ಶಿಷ್ಯ ಎಂದು ಯಡಿಯೂರಪ್ಪ ಬುದ್ಧಿ ಇಲ್ಲದೇ ಮಾತನಾಡುತ್ತಾರೆ. ಯಡಿಯೂರಪ್ಪಗೆ ಏನು ಮಾತನಾಡುತ್ತಿದ್ದೇನೆ
ಎನ್ನುವುದೇ ಅರಿವಿರುವುದಿಲ್ಲ. ಜಾರ್ಜ್‌ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಿದ್ದಾರೆ ಎಂದರು.

ಕನ್ನಡಕ್ಕೆ ಮೊದಲ ಸ್ಥಾನ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಆದೇಶ ಮಾಡಿದ್ದು, ಏರ್‌ಪೋರ್ಟ್‌, ಮೆಟ್ರೊ ರೈಲು ನಿಲ್ದಾಣ ಸೇರಿ ಎಲ್ಲಿಯೇ ಆದರೂ ಕನ್ನಡ ಇರಲೇಬೇಕು ಎಂದು ಹೇಳಿದರು.

ಡಿಕೆಶಿ, ಎಚ್‌ಡಿಕೆ ಭೇಟಿ ಗೊತ್ತಿಲ್ಲ: ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿಯನ್ನು ಭೇಟಿ ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ವಿದ್ಯುತ್‌ ಖರೀದಿ ಸಂಬಂಧ ಇಂಧನ ಇಲಾಖೆಯಲ್ಲಿ ನಡೆದ ಹಗರಣದ ತನಿಖೆ ನಡೆಸುತ್ತಿರುವ ಸದನ ಸಮಿತಿಯಲ್ಲಿ ಎಚ್‌ಡಿಕೆ ಸದಸ್ಯರಿದ್ದಾರೆ. ಹೀಗಾಗಿ ಆ ಉದ್ದೇಶಕ್ಕಾಗಿ ಅವರನ್ನು ಭೇಟಿ ಮಾಡಿರಬಹುದು ಎಂದು ಹೇಳಿದರು.

ಪ್ರಾಧಿಕಾರ ರಚನೆ ಇಲ್ಲ: ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಉದ್ದೇಶ ಸರ್ಕಾರದ ಮುಂದೆ ಇಲ್ಲ. ಅಂತಹ ಪ್ರಸ್ತಾವನೆಯೂ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next