Advertisement

ರಸಗೊಬ್ಬರ ಕೃತಕ ಅಭಾವ ಸೃಷಿಸಿದ್ರೆ ಕಠಿಣ ಕ್ರಮ; ಜಿಲ್ಲಾಧಿಕಾರಿ

06:37 PM May 26, 2022 | Team Udayavani |

ಚಿಕ್ಕಬಳ್ಳಾಪುರ: ರಸಗೊಬ್ಬರ ದಾಸ್ತಾನು ಮಳಿಗೆಗಳಲ್ಲಿ ಲಭ್ಯವಿದ್ದರೂ, ಇಲ್ಲ ಎಂದು ಕೃತಕ ಅಭಾವ ಸೃಷ್ಟಿಸುವ ಮಾರಾಟ ಮಳಿಗೆಗಳ ಮಾಲಿಕರು, ಏಜೆನ್ಸಿ ಸಂಸ್ಥೆಗಳ ವಿರುದ್ಧ ನಿರ್ದಾಕ್ಷ್ಯಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ಲತಾ ಎಚ್ಚರಿಕೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ಪರಿಕರ ಮಾರಾಟಗಾರರು, ರಸಗೊಬ್ಬರ ತಯಾರಿಕಾ ಪ್ರತಿನಿಧಿಗಳು, ಕೃಷಿ ಬೆಳೆ ವಿಮೆ ಪ್ರತಿನಿಧಿಗಳು, ರೈತ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದರು.

ನಿಗದಿಗಿಂತ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುವುದು, ಗೊಬ್ಬರ ಖಾಲಿಯಾಗುತ್ತಿದೆ ಎನ್ನುವ ನಾಮಫಲಕ ಪ್ರದರ್ಶಿಸಿ, ರೈತರಿಗೆ ಮೋಸ ಮಾಡಿ, ಕೃತಕ ಅಭಾವ ಸೃಷ್ಟಿಸುವ ಮಾರುಕಟ್ಟೆ ತಂತ್ರವನ್ನು ಪ್ರಯೋಗಿಸುವುದು ಒಳಿತಲ್ಲ. ಜಿಲ್ಲಾದ್ಯಂತ ಪರವಾನಗಿ ಪಡೆದ ರಸಗೊಬ್ಬರ ಅಂಗಡಿಗಳ ಮುಂದೆ, ಆಯಾ ದಿನದ ದಾಸ್ತಾನು, ಬೆಲೆ ವಿವರ ಪ್ರದರ್ಶಿಸುವ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಹೇಳಿದರು.

ಕಟ್ಟುನಿಟ್ಟಿನ ಕಾನೂನು ಕ್ರಮ: ಜಿಲ್ಲೆಯಲ್ಲಿ ದಾಸ್ತಾನು ಕೊರತೆ ಇಲ್ಲವಾದ್ದರಿಂದ, ಸೂಕ್ತ ಸಮಯದಲ್ಲಿ ರಸಗೊಬ್ಬರ ಪೂರೈಕೆ ಮಾಡಬೇಕು. ಕಾನೂನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಖಡಕ್‌ ಎಚ್ಚರಿಕೆ ನೀಡಿದರು.

ರೈತರಲ್ಲಿ ಡೀಸಿ ಮನವಿ: ಸರ್ಕಾರದ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ರೈತರಿಗೆ ಅನಿರೀಕ್ಷಿತ ಅಥವಾ ಹವಾಮಾನ ಪರಿಸ್ಥಿತಿಗಳಿಂದ ಉಂಟಾದ ನಷ್ಟಕ್ಕೆ ರೈತರಿಗೆ ಪರಿಹಾರ ಒದಗಿಸಲಾಗುತ್ತಿದೆ. ಮುಂಗಾರು ಬೆಳೆಗೆ ವಿಮಾ ಮೊತ್ತದ ಶೇ.2, ಹಿಂಗಾರು ಬೆಳೆಗಳಿಗೆ ಶೇ.1.5, ವಾಣಿಜ್ಯ, ತೋಟಗಾರಿಕಾ ಬೆಳೆಗಳಿಗೆ ವಿಮಾ ಮೊತ್ತದ ಶೇ.5 ಪ್ರಿಮೀಯಂ ಮೊತ್ತ ಪಾವತಿಸಿ, ಬೆಳೆ ವಿಮೆ ಮಾಡಿಸಿಕೊಳ್ಳ ಬೇಕು. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಷ್ಟವಾದಲ್ಲಿ
ವಿಮೆ ಪಡೆದುಕೊಳ್ಳಬಹುದು ಎಂದು ಹೇಳಿದರು.

Advertisement

ನೊಂದಣಿ ಹೇಗೆ?: ಬೆಳೆವಿಮೆ ಮಾಡಿಸಲು ಹತ್ತಿರ ಗ್ರಾಮೀಣ ಸಹಕಾರ ಬ್ಯಾಂಕ್‌, ಸಿಎಸ್‌ಸಿ ಕೇಂದ್ರ ಹಾಗೂ ಗ್ರಾಮ ಒನ್‌ ಅನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 1800-425- 0505ಅನ್ನು ಸಂಪರ್ಕಿಸಬಹುದು ಅಥವಾ ಸಮೀಪದ ಕೃಷಿ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕಟ್ಟುನಿಟ್ಟಿನ ಸೂಚನೆ: ಕೃಷಿ ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿನ ರೈತರನ್ನು ಸಂಪರ್ಕ ಮಾಡಿ, ಬೆಳೆ ವಿಮೆ ಸಾಧಕಗಳನ್ನು ಉದಾಹರಣೆ ಸಹಿತ ವಿವರಣೆ ನೀಡಿ, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸಲು ಮನವೊಲಿಸಬೇಕು. ಈ ನಿಟ್ಟಿನಲ್ಲಿ ತಮ್ಮ ಕ್ಷೇತ್ರಾದ್ಯಂತ ಸಂಚರಿಸಿ ನಿಗದಿತ ಗುರಿ ನಿಗದಿಪಡಿಸಿಕೊಂಡು, ಬೆಳೆ ವಿಮೆ ಮಾಡಿಸಲು ಕಟ್ಟುನಿಟ್ಟಿನ ಸೂಚನೆ ಜಿಲ್ಲಾಧಿಕಾರಿಗಳು ನೀಡಿದರು.

2022-23ನೇ ಸಾಲಿನಲ್ಲಿ 2022ರ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು ಅಗ್ರಿಕಲ್ಚರ್‌ ಇನ್ಯೂರೆನ್ಸ್‌ ಕಂಪನಿ ಆಫ್‌ ಇಂಡಿಯಾ ಲಿ. ಸಂಸ್ಥೆಯಿಂದ 2022ರ ಮುಂಗಾರು ಹಂಗಾಮಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯೂ ಒಳಗೊಂಡಂತೆ ರಾಜ್ಯದ 6 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ವಿವರಿಸಿದರು.

ಭಿತ್ತಿಪತ್ರ ಬಿಡುಗಡೆ: ಈ ವೇಳೆ ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್‌ ಭಿಮಾ ಯೋಜನೆ- ಮುಂಗಾರು 2022 ಹಾಗೂ ಬೆಳೆವಿಮೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿ ಆರ್‌.ಲತಾ ಬಿಡುಗಡೆಗೊಳಿಸಿದರು. ಸಭೆಯಲ್ಲಿ ಎಡೀಸಿ ಎಚ್‌.ಅಮರೇಶ್‌, ಜಂಟಿ ಕೃಷಿ ನಿರ್ದೇಶಕಿ ರೂಪಾ, ಕೃಷಿ ಉಪನಿರ್ದೇಶಕ ಚಂದ್ರ ಕುಮಾರ್‌, ಅನುರೂಪಾ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ರಮೇಶ್‌, ಕೃಷಿ ಪರಿಕರ
ಮಾರಾಟಗಾರ ಸಂಘದ ಅಧ್ಯಕ್ಷ ಮಂಜುನಾಥ್‌, ಶಿವಣ್ಣ, ರಸಗೊಬ್ಬರ ತಯಾರಿಕಾ ಸಂಸ್ಥೆಯ ಪ್ರತಿನಿಧಿಗಳು, ಮಾರಾಟ ಪ್ರತಿನಿಧಿಗಳು, ಕೃಷಿ ಬೆಳೆ ವಿಮೆ ಜಿಲ್ಲಾ ಪ್ರತಿನಿಧಿ ಪ್ರವೀಣ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next