Advertisement

ಅಪಘಾತವಾದರೆ ಆ್ಯಂಬ್ಯುಲೆನ್ಸ್‌ ಬರುತ್ತದೆ,

10:21 AM Jul 21, 2018 | Team Udayavani |

ಇದು ಕಾಲೇಜು ವಿದ್ಯಾರ್ಥಿಗಳು ತಯಾರಿಸಿದ ಸೆನ್ಸರ್‌ ಹೆಲ್ಮೆಟ್‌!

Advertisement

ಮಹಾನಗರ: ಈ ಹೆಲ್ಮೆಟ್‌ ಧರಿಸಿ ಅಪಾಯಕರ ವೇಗದಲ್ಲಿ ಬೈಕ್‌ ಓಡಿಸಿದರೆ ತತ್‌ಕ್ಷಣ ಪೋಷಕರಿಗೆ ಸಂದೇಶ ರವಾನೆಯಾಗುತ್ತದೆ. ಮದ್ಯಪಾನ ಮಾಡಿದ್ದರೆ ಬೈಕ್‌ ಸ್ಮಾರ್ಟ್‌ ಕೂಡ ಆಗುವುದಿಲ್ಲ. ದ್ವಿಚಕ್ರ ವಾಹನ ಸವಾರರನ್ನು ಗಮನದಲ್ಲಿರಿಸಿಕೊಂಡು ಉಡುಪಿಯ ತಾಂತ್ರಿಕ ಕಾಲೇಜೊಂದರ ವಿದ್ಯಾರ್ಥಿಗಳು ರೂಪಿಸಿರುವ ಹೆಲ್ಮೆಟ್‌ನ ವೈಶಿಷ್ಟ್ಯ ಇದು.

ಉಡುಪಿ ಜಿಲ್ಲೆಯ ಬಂಟಕಲ್‌ ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮ್ಯಾನೇಜ್‌ಮೆಂಟ್‌ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿದ್ಯಾರ್ಥಿಗಳು ಇಂತಹದ್ದೊಂದು ಅಪರೂಪದ ಹೆಲ್ಮೆಟ್‌ ವಿನ್ಯಾಸ ಮಾಡಿದ್ದಾರೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಪ್ರತಿವರ್ಷ ಸರಾಸರಿ ಒಂದು ಲಕ್ಷಕ್ಕೂ ಅಧಿಕ ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಆ ಪೈಕಿ ಶೇ. 50ರಷ್ಟು ಮಂದಿ ಬೈಕ್‌ ಸವಾರರು. ಇದನ್ನು ಗಂಭೀರವಾಗಿ ಪರಿಗಣಿಸಿದ ಈ ಕಾಲೇಜಿನ ವಿದ್ಯಾರ್ಥಿಗಳ ತಂಡ ಕೇವಲ ಆರು ತಿಂಗಳಿನಲ್ಲಿ ‘ವೈಜರ್‌ 360’ ಹೆಲ್ಮೆಟ್‌ ತಯಾರಿಸಿದ್ದಾರೆ. ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಪ್ರಾಧ್ಯಾಪಕ ಬಿ.ಎನ್‌. ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶ್ರದ್ಧಾ, ನಿಧಿಶ್ರೀ, ಭರತ್‌ ಮತ್ತು ಸಿದ್ಧಾಂತ್‌ ಅವರು ಈ ನೂತನ ಹೆಲ್ಮೆಟ್‌ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹೆಲ್ಮೆಟ್‌ ಐಒಟಿ (ಇಂಟರ್‌ನೆಟ್‌ ಆಫ್‌ ಥಿಂಗ್‌) ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ಹೆಲ್ಮೆಟ್‌ನ ಒಳಗೆ ಮೊಬೈಲ್‌ ಗಾತ್ರದ ಸಣ್ಣ ಸಾಧನ ಅಳವಡಿಸಲಾಗಿದೆ. ಬೈಕ್‌ನಲ್ಲಿಯೂ ಒಂದು ಉಪಕರಣ ಸ್ಥಾಪಿಸಲಾಗುತ್ತದೆ. ಈ ಎರಡೂ ಡಿವೈಸ್‌ನಲ್ಲಿ ಮೊಬೈಲ್‌ ಸಿಮ್‌ ಅಳವಡಿಸಿ ಅದರ ಜತೆ ವೈಫೈ ಮತ್ತು ಸೆನ್ಸರ್‌ ಕೂಡ ಕೆಲಸ ನಿರ್ವಹಿಸುವಂತೆ ಸಂಪರ್ಕ ಕಲ್ಪಿಸಲಾಗುತ್ತದೆ. ಈ ರೀತಿಯ ತಂತ್ರಜ್ಞಾನದಡಿ ಹೆಲ್ಮೆಟ್‌ ಕಾರ್ಯ ನಿರ್ವಹಿಸುತ್ತದೆ.

‘ವೈಜರ್‌ 360’ ಬೈಕ್‌ ಸವಾರರಿಗೆ ಮದ್ಯಪಾನ ಮಾಡಿ ಬೈಕ್‌ ಚಲಾಯಿಸಲು ಅವಕಾಶ ಮಾಡಿಕೊಡುವುದಿಲ್ಲ. ಏಕೆಂದರೆ ಅಳವಡಿಸಲಾದ ಸೆನ್ಸರ್‌ಗೆ ಮದ್ಯಪಾನವನ್ನು ಗ್ರಹಿಸುವ ಸಾಮರ್ಥ್ಯವಿದೆ. ಮದ್ಯಪಾನ ಮಾಡಿ ಬೈಕ್‌ ಚಲಾಯಿಸಲು ಮುಂದಾದರೆ ಅದು ಸ್ಟಾರ್ಟ್‌ ಕೂಡ ಆಗುವುದಿಲ್ಲ. ಅಪಾಯಕಾರಿ ವೇಗದಲ್ಲಿ ಬೈಕ್‌ ಚಲಾಯಿಸಿದರೆ ಕೂಡಲೇ ಸೆನ್ಸರ್‌ನಲ್ಲಿ ಪ್ರೋಗ್ರಾಂ ಮಾಡಿರುವ ಮೊಬೈಲ್‌ ಸಂಖ್ಯೆಯ ಮೂಲಕ ಪೋಷಕರಿಗೆ ಸಂದೇಶ ರವಾನೆಯಾಗುತ್ತದೆ.

Advertisement

ಆ್ಯಂಬುಲೆನ್ಸ್‌ಗೆ ಕರೆ
ಅಪಘಾತ ಸಂಭವಿಸಿದಾಗ ಸಕಾಲಕ್ಕೆ ತುರ್ತು ಚಿಕಿತ್ಸೆ ಪಡೆಯಲು ಸಾಧ್ಯ ವಾಗದೆ ಪ್ರಾಣ ಕಳೆದುಕೊಳ್ಳುವ ಸಾಕಷ್ಟು ನಿದರ್ಶನಗಳಿವೆ. ಈ ಹೆಲ್ಮೆಟ್‌ ಧರಿಸಿರುವ ಸವಾರ ದುರದೃಷ್ಟವಶಾತ್‌ ಅಪ ಘಾತಕ್ಕೆ ಒಳಗಾದರೆ ಸೆನ್ಸರ್‌ ಅದನ್ನು ಗ್ರಹಿಸುತ್ತದೆ. ಮಾಹಿತಿಯನ್ನು ಸ್ಥಳೀಯ ಆ್ಯಂಬುಲೆನ್ಸ್‌, ಪೊಲೀಸ್‌ ಠಾಣೆ ಹಾಗೂ ಸವಾರರ ಪೋಷಕರಿಗೆ ರವಾನಿಸುತ್ತದೆ. ಅಪಘಾತ ನಡೆದ ನಿರ್ದಿಷ್ಟ ಜಾಗದ ವಿವರ ಸೇರಿದಂತೆ ಅಗತ್ಯ ಮಾಹಿತಿಯು ಜಿಪಿಎಸ್‌ ತಂತ್ರಜ್ಞಾನದ ಮುಖೇನ ರವಾನೆಯಾಗುತ್ತದೆ. ಇದಕ್ಕಾಗಿ ಬೈಕ್‌ ಮತ್ತು ಹೆಲ್ಮೆಟ್‌ಗಳಲ್ಲಿ ಅಳವಡಿಸಿದ ಡಿವೈಸ್‌ನಲ್ಲಿ ಮೊದಲೇ ಆ್ಯಂಬುಲೆನ್ಸ್‌ ಸೇರಿದಂತೆ ತತ್‌ಕ್ಷಣಕ್ಕೆ ಸ್ಪಂದಿಸಬೇಕಾದವರ ದೂರವಾಣಿ ಸಂಖ್ಯೆ ಮತ್ತು ಸಂದೇಶವನ್ನು ದಾಖಲು ಮಾಡಲಾಗುತ್ತದೆ.

ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ 
ಈ ಹೆಲ್ಮೆಟ್‌ನ್ನು ಇನ್ನಷ್ಟು ಸಂಶೋಧನೆಗೆ ಒಳಪಡಿಸಿ ಸುಧಾರಿತಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಡಿವೈಸ್‌ನಲ್ಲಿ ಯಾವೆಲ್ಲ ಭಾಗಗಳು ಅಗತ್ಯ ಎಂದು ಗುರುತಿಸಿ ಗಾತ್ರವನ್ನು ಮತ್ತಷ್ಟು ಸಣ್ಣದು ಮಾಡಲಾಗುತ್ತದೆ. ಅಲ್ಲದೆ ಈ ರೀತಿಯ ಹೆಲ್ಮೆಟ್‌ನಿಂದಾಗುವ ಉಪಯೋಗದ ಬಗ್ಗೆ ಸಾರ್ವಜನಿ ಕರಿಂದ ಅಭಿಪ್ರಾಯ ಕೂಡ ಸಂಗ್ರಹಿಸಲಾ ಗುತ್ತದೆ. ಸದ್ಯ ಸಂಸ್ಥೆಗೆ ಹೆಲ್ಮೆಟ್‌ ಮಾದರಿ ತಯಾರಿಸಲು 12,000 ರೂ. ತಗಲಿದೆ. ಇದರ ಉತ್ಪಾದನೆ ಸಂಬಂಧ ಕೆಲವು ಹೆಲ್ಮೆಟ್‌ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೈಗೆಟಕುವ ದರದಲ್ಲಿ ಈ ಹೆಲ್ಮೆಟ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಂಸ್ಥೆ ಯೋಚಿಸುತ್ತಿದೆ.

ಬೈಕ್‌ ಕಳವು ಅಸಾಧ್ಯ 
ಹೆಲ್ಮೆಟ್‌ ಮತ್ತು ಬೈಕ್‌ನಲ್ಲಿ ಸೆಂಡರ್‌ ಮತ್ತು ರಿಸೀವರ್‌ ಡಿವೈಸ್‌ ಅಳವಡಿಸಿರುವ ಕಾರಣ ಅದೇ ಹೆಲ್ಮೆಟ್‌ ಧರಿಸಿದ ವ್ಯಕ್ತಿ ಮಾತ್ರ ಆ ಬೈಕ್‌ ಚಲಾಯಿಸಲು ಸಾಧ್ಯ. ಬೇರಾರೇ ಚಲಾಯಿಸಲು ಪ್ರಯತ್ನಿಸಿದರೂ ಬೈಕ್‌ ಚಾಲೂ ಆಗುವುದಿಲ್ಲ.

ಮತ್ತಷ್ಟು ಸಂಶೋಧನೆ
ವಿದ್ಯಾರ್ಥಿಗಳು ಆರು ತಿಂಗಳಿನಲ್ಲಿ ಈ ವಿನೂತನ ತಂತ್ರಜ್ಞಾನದ ಹೆಲ್ಮೆಟ್‌ ತಯಾರು ಮಾಡಿದ್ದಾರೆ. ಈ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಸಲಿದ್ದೇವೆ. ವೈಜರ್‌ 360 ಡಿವೈಸ್‌ ಅಳವಡಿಸುವ ಕುರಿತಂತೆ ಈಗಾಗಲೇ ಕೆಲವು ಹೆಲ್ಮೆಟ್‌ ಕಂಪೆನಿಗಳ ಜತೆ ಮಾತುಕತೆ ನಡೆಸಿದ್ದೇವೆ.
 - ವಾಸುದೇವ,
ಕಂಪ್ಯೂಟರ್‌ ಸೈನ್‌ ವಿಭಾಗ ಮುಖ್ಯಸ್ಥ

ಸೋಲಾರ್‌ ಚಾರ್ಜ್‌ಗೆ ಚಿಂತನೆ
ಈಗ ಬೈಕ್‌ ಮತ್ತು ಹೆಲ್ಮೆಟ್‌ಗೆ ಅಳವಡಿಸಲಾದ ಬ್ಯಾಟರಿಯನ್ನು ವಿದ್ಯುತ್‌ ನಿಂದ ಚಾರ್ಜ್‌ ಮಾಡಬೇಕು. ಆದರೆ ಮುಂದಿನ ದಿನಗಳಲ್ಲಿ ಸೋಲಾರ್‌ ವಿದ್ಯುತ್‌ ಮುಖೇನ ಚಾರ್ಜ್‌ ಮಾಡುವ ಸಂಶೋಧನೆ ಮಾಡಲಿದ್ದೇವೆ. 
 - ಭರತ್‌, ಸಂಶೋಧನಾ ವಿದ್ಯಾರ್ಥಿ

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next