ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಬಲ ಕಂಪನ ಉಂಟಾಗುವ ಬಗೆಗಿನ ಸುಳಿಗಳು ಈಗಾಗಲೇ ವ್ಯಕ್ತವಾಗತೊಡಗಿವೆ ಎಂಬ ಸಂಕೇತಗಳು ಈಗಾಗಲೇ ವ್ಯಕ್ತವಾಗಿವೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ನೇತೃತ್ವದಲ್ಲಿ 40 ಮಂದಿ ಶಾಸಕರು ಬಿಜೆಪಿ ಜತೆಗೆ ಮೈತ್ರಿ ಮಾಡುಕೊಳ್ಳುವ ಸದ್ಯದ ವದಂತಿ ನಿಜವೇ ಆದರೆ, ನಾವು ಆ ಮೈತ್ರಿಕೂಟದಲ್ಲಿ ಇರುವುದಿಲ್ಲ. ಜತೆಗೆ ಸರ್ಕಾರದಲ್ಲೂ ಭಾಗಿಯಾಗುವುದಿಲ್ಲ ಎಂದು ಶಿವಸೇನೆಯ ಏಕನಾಥ ಶಿಂಧೆ ಬಣ ಬುಧವಾರ ಕಟುವಾದ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಮುಂಬೈನಲ್ಲಿ ಮಾತನಾಡಿದ ಶಿಂಧೆ ಬಣದ ವಕ್ತಾರ ಸಂಜಯ ಶಿರ್ಸತ್ “ಎನ್‌ಸಿಪಿ ನೇರವಾಗಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ನಮ್ಮ ಗುಂಪಿನ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಒಂದು ವೇಳೆ ಬಿಜೆಪಿ, ಅಜಿತ್ ಪವಾರ್ ನೇತೃತ್ವದ ಬಣದ ಜತೆಗೆ ಕೈಜೋಡಿಸಿದರೆ ಮಹಾರಾಷ್ಟ್ರದ ಜನರು ಅದಕ್ಕೆ ಬೆಂಬಲ ನೀಡುವುದಿಲ್ಲ. ನಾವು ಆ ಗುಂಪಿನ ಜತೆಗೆ ಅಧಿಕಾರದಲ್ಲಿ ಇರಲು ಬಯಸುವುದಿಲ್ಲ. ಎನ್‌ಸಿಪಿ ಜತೆಗೆ ಅಧಿಕಾರ ಹಂಚಿಕೊಳ್ಳದೇ ಇರಲು ರಾಜ್ಯದ ಜನರು ಉದ್ದೇಶಿಸಿದ್ದರಿಂದಲೇ ಶಿವಸೇನೆ 2 ಹೋಳು ಆಗಬೇಕಾಯಿತು” ಎಂದು ಹೇಳಿದ್ದಾರೆ.
ಇದೇ ಉದ್ದೇಶಕ್ಕಾಗಿಯೇ ಮಹಾ ವಿಕಾಸ ಅಘಾಡಿ ಸರ್ಕಾರ ಪತನಗೊಂಡಿತು ಎಂದರು ಶಿರ್ಸತ್. ಸದ್ಯ ಪ್ರತಿಪಕ್ಷ ನಾಯಕರಾಗಿರುವ ಅಜಿತ್ ಪವಾರ್ ಅವರಿಗೆ ತಮ್ಮ ಪುತ್ರ ಪಾರ್ಥ ಪವಾರ್ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಆ ನೋವು ಅವರನ್ನು ಕಾಡುತ್ತಿದೆಯೇ ಹೊರತು, ಏಕನಾಥ ಶಿಂಧೆ ನೇತೃತ್ವದ 16 ಮಂದಿ ಶಾಸಕರ ವಿರುದ್ಧದ ಅನರ್ಹತೆ ಪ್ರಕರಣದ ತೀರ್ಪು ಬರಲಿದೆ ಎಂಬುದು ಅಂಶವೇ ಅಲ್ಲ. ಎರಡೂ ಭಿನ್ನವಾಗಿರುವ ವಿಚಾರಗಳು ಎಂದು ಹೇಳಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಪಾರ್ಥ ಪವಾರ್ ಮಾವಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
15 ದಿನಗಳಲ್ಲಿ 2 ರಾಜಕೀಯ ಭೂಕಂಪ: ಸುಪ್ರಿಯಾ
“ಇನ್ನು ಹದಿನೈದು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಮತ್ತು ನವದೆಹಲಿಯಲ್ಲಿ ಎರಡು ಪ್ರಬಲ ರಾಜಕೀಯ ಭೂಕಂಪ ಸಂಭವಿಸಲಿದೆ” ಎಂದು ಬಾರಾಮತಿ ಲೋಕಸಭಾ ಕ್ಷೇತ್ರದ ಸಂಸದೆ, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಭವಿಷ್ಯ ನುಡಿದಿದ್ದಾರೆ. ಆದರೆ ಎರಡು ಕಂಪನಗಳ ಬಗ್ಗೆ ಅವರು ಹೆಚ್ಚು ವಿವರಣೆ ನೀಡಿಲ್ಲ.