ಬೆಳ್ಳಾರೆ: ದೇಶದ ಪ್ರತಿಯೊಬ್ಬನೂ ಒಂದೊಂದು ಮರ ನೆಟ್ಟು ಬೆಳೆಸಿದಾಗ ಮಾತ್ರ ಪ್ರಕೃತಿ, ದೇಶ ಉಳಿಯಲು ಸಾಧ್ಯ. ಅಭಿವೃದ್ಧಿಯ ನೆಪದಲ್ಲಿ ಮರಗಳನ್ನು ಕಡಿಯದಿರಿ. ಮರ ಬೆಳೆಸಿದರೆ ಮಾತ್ರ ದೇಶದ ಉದ್ಧಾರ ಎಂದು ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಹೇಳಿದರು.
ಅವರು ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ ನಡೆದ ಮಕ್ಕಳ ಬೇಸಗೆ ಶಿಬಿರ ವನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಲ್ಲದೆ ಕೊರಗುತ್ತಿದ್ದ ನಾನು 4 ಕಿ.ಮೀ. ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಟ್ಟು ಮರಗಳನ್ನೇ ಮಕ್ಕಳಂತೆ ಭಾವಿಸಿ ನೀರು ಹಾಕಿ ಬೆಳೆಸಿದಕ್ಕೆ ರಾಷ್ಟ್ರಮಟ್ಟದಲ್ಲಿ ನನ್ನನ್ನು ಗುರುತಿಸುವಂತಾಯಿತು. 70 ವರ್ಷಗಳ ಹಿಂದೆ ನೆಟ್ಟ ಗಿಡಗಳು ಈಗ ಮೂರು ಜನ ತಬ್ಬಬಹುದಾದ ಬೃಹತ್ ಮರಗಳಾಗಿ ಬೆಳೆದಿವೆ. ಗಿಡ ಮರ ಬೆಳೆಸಿ ಪ್ರಕೃತಿ ಉಳಿಸದಿದ್ದಲ್ಲಿ ಮುಂದಿನ ಪೀಳಿಗೆ ಅಪಾಯಕ್ಕೆ ತುತ್ತಾಗ ಬಹುದು ಎಂದು ತಿಮ್ಮಕ್ಕ ತಿಳಿಸಿದರು.
ಪ್ರತಿಜ್ಞೆ ಮಾಡಿ
ಮುಖ್ಯ ಅತಿಥಿಯಾಗಿದ್ದ ಹಿರಿಯ ರಂಗ ಕಲಾವಿದೆ ಗೀತಾ ಮೋಂಟಡ್ಕ ಮಾತನಾಡಿ, ಪ್ರತಿ ವಿದ್ಯಾರ್ಥಿಯೂ ತನ್ನ ಮನೆಯಲ್ಲಿ ಒಂದೊಂದು ಗಿಡ ನೆಡುವ ಪ್ರತಿಜ್ಞೆ ಮಾಡಿ, ಗಿಡ ಮರಗಳನ್ನು ಬೆಳೆಸಿದಾಗ ಮಾತ್ರ ಪ್ರಕೃತಿಯ ಉಳಿವು ಸಾಧ್ಯ. ಸಮೂಹದಲ್ಲಿ ಬೆರೆತು ಸೃಜನಾತ್ಮಕತೆಯನ್ನು ಬೆಳೆಸುವ ಇಂತಹ ಶಿಬಿರಗಳು ಇಂದಿನ ಅಗತ್ಯವಾಗಿದೆ ಎಂದರು.
ಸಮ್ಮಾನ
ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರನ್ನು ಸಂಸ್ಥೆಯ ವತಿ ಯಿಂದ ಸಂಚಾಲಕರ ಮಾತಾಪಿತರಾದ ಪುಟ್ಟಣ್ಣ ಗೌಡ ಮತ್ತು ಗಂಗಮ್ಮ ಸಮ್ಮಾನಿಸಿದರು. ತಿಮ್ಮಕ್ಕರವರ ದತ್ತು ಪುತ್ರ ಉಮೇಶ್, ಶಾಲಾ ಸಂಚಾಲಕ ಉಮೇಶ್ ಎಂ.ಪಿ., ಮುಖ್ಯೋಪಾಧ್ಯಾಯಿನಿ ದೇಚಮ್ಮ ಉಪಸ್ಥಿತರಿದ್ದರು.
ಶಿಕ್ಷಕಿ ರೇಶ್ಮಾ ಪ್ರಸ್ತಾವಿಸಿದರು. ಉಮೇಶ್ ಸ್ವಾಗತಿಸಿ, ಸಹಶಿಕ್ಷಕ ಪ್ರದೀಪ್ ಕನ್ಯಪ್ಪಾಡಿ ವಂದಿಸಿದರು. ಶಿಕ್ಷಕಿ ವಾರಿಜಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ಎ. 10ರ ವರೆಗೆ ಸಂಸ್ಥೆಯಲ್ಲಿ ಸಂಪನ್ಮೂಲ ವ್ಯಕ್ತಿಗಳ ಮೂಲಕ ವಿವಿಧ ರಂಗ ತರಬೇತಿಯೊಂದಿಗೆ ಬೇಸಗೆ ಶಿಬಿರ ನಡೆಯಲಿದೆ.