Advertisement

ಮನುಷ್ಯ ಸಮಾಜಮುಖೀಯಾಗಿ ಬದುಕಿದರೆ ಜೀವನ ಸಾರ್ಥಕ

08:37 AM Jan 17, 2019 | Team Udayavani |

ಕಡೂರು: ಹುಟ್ಟು ಸಾವಿನ ಮಧ್ಯೆ ಮನುಷ್ಯ ಸಮಾಜಮುಖೀಯಾಗಿ ಬದುಕಿದರೆ ಅದೇ ಸಾರ್ಥಕ ಜೀವನ ಎಂದು ಮಾಜಿ ಮುಖ್ಯಮಂತ್ರಿ ಎಸ್‌. ಸಿದ್ದರಾಮಯ್ಯ ಹೇಳಿದರು.

Advertisement

ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ದಿ|ಶಾಸಕ ಕೆ.ಎಂ.ಕೃಷ್ಣಮೂರ್ತಿ ಅವರ ತಾಯಿ ಜಯಮ್ಮ ಅವರ ಶಿವಗಣಾರಾಧನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನುಷ್ಯನಾಗಿ ಹುಟ್ಟಿದ ಮೇಲೆ ಸಾವು ನಿಶ್ಚಿತ. ನಡುವಿನ ಬದುಕಿನಲ್ಲಿ ಪ್ರೀತಿ ಮತ್ತು ಗೌರವ ಸಂಪಾದಿಸಬೇಕು. ಧರ್ಮದ ಹೊರತಾದ ಮಾನವೀಯ ಅಂತಃಕರಣ ಇರುವ ಪ್ರೀತಿ ಮುಖ್ಯ. ಆತ್ಮೀಯ ಸಂಬಂಧ ಮತ್ತು ಒಳಿತನ್ನು ಮಾಡುವ ಗುಣ ರೂಢಿಸಿಕೊಳ್ಳಬೇಕು ಎಂದರು.

ದಿ| ಜಯಮ್ಮ ಅವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಾಜಿ ಶಾಸಕ ಕೆ.ಎಚ್. ಮುದಿಯಪ್ಪ ಅವರ ಪತ್ನಿ. ಸ್ವಾತಂತ್ರ್ಯ ಹೋರಾಟಗಾರರಲ್ಲಿ ಆಸ್ತಿ ಮತ್ತು ಅಧಿಕಾರದ ಆಸೆ ಇರಲಿಲ್ಲ. ದೇಶಕ್ಕೆ ಒಳಿತನ್ನು ಮಾಡಬೇಕೆಂಬ ಸಂಕಲ್ಪವಿತ್ತು. ತ್ಯಾಗದ ಅವರ ಜೀವನ ಇಂದಿನ ಸಮಾಜಕ್ಕೆ ಬಹುದೊಡ್ಡ ಮಾದರಿ ಎಂದು ಹೇಳಿದರು.

ಕೃಷ್ಣಮೂರ್ತಿ ನಾಲ್ಕು ಬಾರಿ ಈ ಕ್ಷೇತ್ರದ ಶಾಸಕರಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ನಂತರ ಯಾವುದೇ ಅಭಿವೃದ್ಧಿ ಈ ಕ್ಷೇತ್ರದಲ್ಲಿ ಆಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

Advertisement

ಪ್ರಾಸ್ತಾವಿಕವಾಗಿ ಜಿಪಂ ಮಾಜಿ ಅಧ್ಯಕ್ಷ ಹಾಗೂ ಜಯಮ್ಮ ಅವರ ಎರಡನೇ ಪುತ್ರ ಕೆ.ಎಂ. ಕೆಂಪರಾಜು ಮಾತನಾಡಿ, 91 ವರ್ಷದ ತುಂಬು ಜೀವನ ನಡೆಸಿದ ತಮ್ಮ ತಾಯಿ ಈ ಕ್ಷೇತ್ರದ ಬಹಳಷ್ಟು ಜನರಿಗೆ ಚಿರ ಪರಿಚಿತರಾಗಿದ್ದರು. ಕೆಲವು ತಿಂಗಳ ಹಿಂದೆ ಸಿದ್ದರಾಮಯ್ಯ ಅವರ ಬಳಿ ಅವರು ಮಾತನಾಡುತ್ತಾ ತಾವು ಸತ್ತಾಗ ಬಂದು ನೋಡಪ್ಪಾ ಎಂದು ಕೋರಿಕೊಂಡಿದ್ದ ಘಟನೆ ಸ್ಮರಿಸಿಕೊಂಡರು.

ಅಂದಿನ ದಿನಗಳಲ್ಲಿ ತಮ್ಮ ತಂದೆ ಮೈಸೂರು ಸಂಸ್ಥಾನದ ಶಾಸಕರಾಗಿದ್ದಾಗ ಕ್ಷೇತ್ರದ ಜನರು ನಿತ್ಯ ಮನೆಗೆ ಬಂದು ಇಲ್ಲೇ ಉಳಿದುಕೊಂಡು ಊಟ, ತಿಂಡಿ ಸೇವಿಸುತ್ತಿದ್ದರು. ಅತಿಥಿಗಳ ಸೇವೆಗೆ ತಮ್ಮ ತಾಯಿ ಜಯಮ್ಮ ಅವರು ಸದಾ ನಿಂತಿದ್ದರು. ಇಂದಿಗೂ ಅದು ಮುಂದುವರೆದುಕೊಂಡು ಬಂದಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ|ಡಿ.ಎಲ್‌. ವಿಜಯ್‌ಕುಮಾರ್‌ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಟಿ.ಡಿ. ರಾಜೇಗೌಡ, ಮಾಜಿ ಶಾಸಕ ಜಿ.ಎಸ್‌. ಶ್ರೀನಿವಾಸ್‌, ವಿಧಾನ ಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇ ಗೌಡ, ಜಿ.ಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಮಾತನಾಡಿದರು. ಕೆಪಿಸಿಸಿ ಸದಸ್ಯ ಕೆ.ಎಸ್‌. ಆನಂದ್‌, ಜಿಲ್ಲಾ ವಕ್ತಾರ ಎ.ಎನ್‌. ಮಹೇಶ್‌, ಕಡೂರು ಬ್ಲಾಕ್‌ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಬೀರೂರು ಬ್ಲಾಕ್‌ ಅಧ್ಯಕ್ಷ ಆಸಂದಿ ಕಲ್ಲೇಶ್‌, ಜಿ.ಪಂ. ಸದಸ್ಯ ಶರತ್‌ ಕೃಷ್ಣಮೂರ್ತಿ, ತಾ.ಪಂ ಅಧ್ಯಕ್ಷೆ ಭಾರತಮ್ಮ, ಮಾಜಿ ಅಧ್ಯಕ್ಷೆ ರೇಣುಕಾ ಉಮೇಶ್‌, ಉಪಾಧ್ಯಕ್ಷ ದಾಸಯ್ಯನಗುತ್ತಿ ಚಂದ್ರಪ್ಪ, ಪುರಸಭಾ ಅಧ್ಯಕ್ಷ ಎಂ. ಮಾದಪ್ಪ, ಸದಸ್ಯರಾದ ಮೋಹನ್‌ಕುಮಾರ್‌, ಎನ್‌. ಬಷೀರ್‌ಸಾಬ್‌ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next