ಪಿರಿಯಾಪಟ್ಟಣ: ನಿವೇಶನಕ್ಕೆ ಸಂಬಂಧ ಪಟ್ಟಂತೆ ಸರ್ಕಾರದ ಸೂಕ್ತ ದಾಖಲೆ ಇದ್ದರೂ ಕೂಡ ಪಂಚಾಯ್ತಿ ಅಧಿಕಾರಿಗಳು ಮನೆ ನಿರ್ಮಿಸಲು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ತಾಪಂ ಎದುರು ಪ್ರತಿಭಟನೆ ನಡೆಸಿದರು.
ತಾಲೂಕಿನ ಬೆಟ್ಟದತುಂಗ ಗ್ರಾಪಂ ವ್ಯಾಪ್ತಿಯ ಕದರೆಗೌಡನ ಕೊಪ್ಪಲು ಜವರೇ ಗೌಡರ ಮಗ ಬಸವರಾಜ್ ಎಂಬುವವರು ಹಲವು ವರ್ಷಗಳಿಂದ ಗ್ರಾಮಗಳಲ್ಲಿ ವಾಸವಾಗಿದ್ದು, ಅಂತೆಯೇ ಗ್ರಾಪಂಗೆ ಕಂದಾಯ ಕೂಡ ಪಾವತಿಸಿ ಹಳೆ ಮನೆಯಲ್ಲಿ ವಾಸವಿದ್ದರು ಇತ್ತೀಚೆಗೆ ಮಳೆಗಾಳಿಯಿಂದ ಮನೆಯು ಶಿಥಿಲಗೊಂಡು ನೆಲಸಮವಾದ ಕಾರಣ ನಿವೇಶನದಲ್ಲಿ ನೂತನ ಮನೆ ನಿರ್ಮಿಸಲು ಗ್ರಾಪಂ ವ್ಯಾಪ್ತಿಯಿಂದ ಪರವಾನಗಿ ಪಡೆದು ಕಂದಾಯ ಕೂಡ ಪಾವತಿಸಲಾಗಿದೆ.
ಆದರೆ ಮನೆ ನಿರ್ಮಿಸುವ ಸಂದರ್ಭ ದಲ್ಲಿ ವಿನಾಃ ಕಾರಣ ತಾಪಂ ಕಾರ್ಯ ನಿರ್ವಹಣಾಧಿಕಾರಿ ಬಸವರಾಜ್ ಗ್ರಾಮಕ್ಕೆ ಆಗಮಿಸಿ ಮನೆ ನಿರ್ಮಿಸಲು ಆಗದು ಎಂದು ತಡೆಯೊಡ್ಡಿ ತೊಂದರೆ ನೀಡುತ್ತಿದ್ದಾರೆ. ಇದರಿಂದಾಗಿ ಮನೆ ಇಲ್ಲದ ಕುಟುಂಬಸ್ಥರು ಸೂರಿಲ್ಲದೆ ಬೀದಿ ಪಾಲಾಗಿದ್ದಾರೆ.
ಅಲ್ಲದೆ ನಮ್ಮ ತಂದೆಯವರ ಆರೋಗ್ಯವು ಕೂಡ ಹದಗೆಟ್ಟಿದ್ದು ಜೀವನ ನಡೆಸಲು ತುಂಬ ತೊಂದರೆಯಾಗುತ್ತಿದೆ ಎಂದು ಬಸವರಾಜ್‌ರ ಮಗ ಸುನಿಲ್ ಆರೋಪಿಸಿದರು. ಆದ್ದರಿಂದ ನಿವೇಶನ ಜಾರಿ ಮಾಡಿ ವಾಸಿಸಲು ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ತಿಳಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಪಂ ಸಹಾಯಕ ನಿರ್ದೇಶಕ ಬಾಬು ಅವರಿಗೆ ಮನವಿ ಸಲ್ಲಿಸಲಾಯಿತು. ಸುನೀತ, ಚಿಕ್ಕೇಗೌಡ, ಅಪ್ಪಾಜಿಗೌಡ, ಸೀಗೂರು ವಿಜಯ್‌ಕುಮಾರ್, ಅಣ್ಣೇಗೌಡ, ಡಿ. ರಾಜೇಂದ್ರ, ಅಕ್ಕಯ್ಯಮ್ಮ, ನೀಲಮ್ಮ, ರತ್ನಮ್ಮ, ಶಿವಣ್ಣ, ಲೋಕೇಶ್, ಯೋಗೇಶ್, ಅಶೋಕ, ರಾಜೇಗೌಡ, ಸಂತೋಷ್ ಹಾಜರಿದ್ದರು.