Advertisement

ವಿಗ್ರಹ ಧ್ವಂಸ ಪ್ರಕರಣ: ಸೂಕ್ತ ತನಿಖೆಗೆ ಆಗ್ರಹ

09:12 PM Jun 18, 2019 | Team Udayavani |

ಗುಂಡ್ಲುಪೇಟೆ: ಪಟ್ಟಣದ ಹೊರವಲಯದಲ್ಲಿರುವ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದ ವಿಗ್ರಹ ಧ್ವಂಸ ಮತ್ತು ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಘಟನೆಯನ್ನು ಪ್ರಚೋದಿಸುವ ಮತ್ತು ಸವರ್ಣಿಯರನ್ನು ಹಿಯಾಳಿಸುವ ಕೃತ್ಯ ನಡೆಯುತ್ತಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವೀರಶೈವ ಮಹಾಸಭಾದ ಪದಾಧಿಕಾರಿಗಳು ಡಿವೈಎಸ್‌ಪಿ ಸಿ.ಟಿ.ಜಯಕುಮಾರ್‌ರನ್ನು ಭೇಟಿ ಮನವಿ ಸಲ್ಲಿಸಿದರು.

Advertisement

ಪಟ್ಟಣದ ಸೋಮೇಶ್ವರ ವಿದ್ಯಾರ್ಥಿ ನಿಲಯದಿಂದ ಕಾಲ್ನಡಿಗೆಯಲ್ಲಿ ತೆರಳಿದ ನೂರಾರು ಪದಾಧಿಕಾರಿಗಳು ಘಟನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಂಘಟನೆಗಳು ಜಾಥಾ ನಡೆಸಿದರೆ ಇತರ ಸಮುದಾಯದವರೂ ಸಹ ಪ್ರತಿಜಾಥಾ ನಡೆಸುವ ಬಗ್ಗೆ ಯೋಚಿಸಿದ್ದು ಇದರಿಂದ ಸಮಾಜದಲ್ಲಿ ಅಶಾಂತಿಯುಂಟಾಗಿ ಸಾಮರಸ್ಯ ಹಾಳಾಗಲಿದೆ ಎಂದು ವಿವರಿಸಿದರು.

ಅಲ್ಲದೆ ಫೇಸ್‌ ಬುಕ್‌ ಹಾಗೂ ವಾಟ್ಸ್‌ ಆ್ಯಪ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಅಸಹ್ಯ ಭಾಷೆಗಳಲ್ಲಿ ಇತರ ವರ್ಗಗಳನ್ನು ನಿಂದಿಸುವ ಪ್ರಚೋದಿಸುವ ಕೆಲಸವನ್ನು ಮಾಡುತ್ತಾ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿಯನ್ನೂ ಆಲಿಸಿದ ಡಿವೈಎಸ್‌ಪಿ ಜಯಕುಮಾರ್‌ ತಾವು ಈಗಾಗಲೇ ತನಿಖೆ ಕೈಗೊಂಡಿದ್ದು ಘಟನೆಗೆ ಸಂಬಂಧಿಸಿದ ಎಲ್ಲರ ವಿಚಾರಣೆಯನ್ನು ವಿಡಿಯೋ ಮಾಡಲಾಗುತ್ತಿದೆ. ಇನ್ನು ಎರಡು ತಿಂಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡುವವರ ವಿರುದ್ಧ ಸಾಕ್ಷ್ಯಾಧಾರ ಸಮೇತ ದೂರು ನೀಡಿದರೆ ಯಾವುದೇ ಮುಲಾಜಿಲ್ಲದೇ ಕಾನೂನು ಕ್ರಮಕೈಗೊಳ್ಳಲಾಗುವುದು. ಸಮಾಜಘಾತಕ ಕೃತ್ಯ ಎಸಗುವವರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ, ತಾಲೂಕು ಅಧ್ಯಕ್ಷ ಹಂಗಳನಂಜಪ್ಪ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಸಮುದಾಯದ ಯುವಕರು, ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next