Advertisement

ಈದ್ಗಾ ಮೈದಾನ ಪ್ರವೇಶ ನಿರ್ಬಂಧಿಸಿ ಬೀಗ

01:36 PM Sep 19, 2022 | Team Udayavani |

ಹುಬ್ಬಳ್ಳಿ: ವಾಣಿಜ್ಯ ನಗರಿಯ ಹೃದಯ ಭಾಗ ಕಿತ್ತೂರು ಚನ್ನಮ್ಮ ವೃತ್ತ ಸುತ್ತಲಿನ ಮಾರ್ಕೇಟ್‌ ಹಾಗೂ ಅಂಗಡಿಕಾರರಿಗೆ ಪಾರ್ಕಿಂಗ್‌ ತಾಣವಾಗಿದ್ದ ಈದ್ಗಾ ಮೈದಾನಕ್ಕೆ ಪ್ರವೇಶ ನಿರ್ಬಂಧಿಸಿ ಬೀಗ ಜಡಿದಿದ್ದು, ಅಂಗಡಿ ಮುಂಗಟ್ಟುಗಳ ಇಕ್ಕೆಲ ರಸ್ತೆಗಳ ಮುಂಭಾಗವೇ ಪಾರ್ಕಿಂಗ್‌ ಸ್ಥಳವಾಗಿ ಮಾರ್ಪಡುತ್ತಿವೆ.

Advertisement

ಮಾರುಕಟ್ಟೆಗೆಂದು ವಾಣಿಜ್ಯನಗರಿಗೆ ಆಗಮಿಸುವ ಜನರ ವಾಹನಗಳಿಗೆ ಈದ್ಗಾ ಮೈದಾನವೇ ಉಚಿತ ಪಾರ್ಕಿಂಗ್‌ ಸ್ಥಳ. ಕೆಲ ಹಬ್ಬಗಳಲ್ಲಿ ಮಾರುಕಟ್ಟೆ ಸ್ಥಳ. ಟ್ಯಾಕ್ಸಿ ವಾಹನಗಳಿಗೆ ಇದೊಂದು ನಿಲ್ದಾಣವೂ ಹೌದು. ಹೆಚ್ಚಾಗಿ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳ ಮಾಲೀಕರ ಕಾರುಗಳಿಗೆ ಪಾರ್ಕಿಂಗ್‌ ತಾಣ. ಆದರೆ ಇದೀಗ ಇವೆಲ್ಲದಕ್ಕೂ ಬ್ರೇಕ್‌ ಬಿದ್ದ ಕಾರಣ ಸುತ್ತಲಿನ ಕಿರಿದಾದ ರಸ್ತೆಗಳು ಪಾರ್ಕಿಂಗ್‌ ಸ್ಥಳವಾಗಿ ಮಾರ್ಪಡುತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ.

ಬೀದಿಗೆ ಬಂದ ಟ್ಯಾಕ್ಸಿಗಳು: ಎರಡು ರಾಷ್ಟ್ರೀಯ ಹಬ್ಬ, ಎರಡು ಬಾರಿ ನಮಾಜ್‌ ನಂತರ ಈ ಮೈದಾನ ಸಾರ್ವಜನಿಕರಿಗೆ ಮುಕ್ತವಾಗಿತ್ತು. ವಿವಿಧ ಭಾಗಗಳಿಂದ ಬರುವರಿಗೆ ಪಾರ್ಕಿಂಗ್‌ ಸ್ಥಳ ಜತೆಗೆ ಸುಮಾರು 200 ಟ್ಯಾಕ್ಸಿ ವಾಹನಗಳಿಗೆ ನಿಲ್ದಾಣವಾಗಿದೆ. ಹೃದಯ ಭಾಗವಾಗಿದ್ದರಿಂದ ಒಂದಿಷ್ಟು ದುಡಿಮೆ ಕೂಡ ಇದೆ. ಆದರೆ ಸುಮಾರು 22 ದಿನಗಳಿಂದ ಪ್ರವೇಶ ನಿರ್ಬಂಧಿಸಿರುವುದು ಟ್ಯಾಕ್ಸಿ ಮಾಲೀಕರಿಗೆ ಅತಂತ್ರ ಭಾವ ಕಾಡಲಾರಂಭಿಸಿದೆ.

ಅಭಿವೃದ್ಧಿ ಕಾಮಗಾರಿಗೆ ಅಲ್ಲಲ್ಲಿ ರಸ್ತೆ, ಪಾದಚಾರಿ ಮಾರ್ಗ ಅಗೆಯಲಾಗಿದೆ. ಹೀಗಿರುವಾಗ ವಾಹನಗಳು ರಸ್ತೆ ಮೇಲೆ ನಿಲ್ಲುವಂತಾಗಿವೆ. ರಸ್ತೆಗಳು ಖಾಲಿಯಿದ್ದರೂ ಸಂಚಾರ ದಟ್ಟಣೆ ನಿರ್ವಹಣೆ ಕಷ್ಟ. ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿರ್ವಹಿಸುವಲ್ಲಿ ಸಂಚಾರ ಠಾಣೆ ಪೊಲೀಸರು ಹೈರಾಣಾಗುತ್ತಿದ್ದಾರೆ. ಇಲ್ಲಿ ಉಚಿತ ಪಾರ್ಕಿಂಗ್‌ ಇರುವ ಕಾರಣಕ್ಕೆ ತಮ್ಮ ಲಾಭಕ್ಕಾಗಿ ಪಾರ್ಕಿಂಗ್‌ ಗುತ್ತಿಗೆದಾರರ ಕೈವಾಡ ಇದೆಯಾ ಎನ್ನುವ ಅನುಮಾನ ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ.

ಪೊಲೀಸರೋ, ಪಾಲಿಕೆಯೋ?

Advertisement

ಗಣೇಶ ಉತ್ಸವ ಮುಗಿದು ಇಷ್ಟು ಕಳೆದರೂ ಈದ್ಗಾ ಮೈದಾನ ಬಳಕೆ ಯಥಾ ಸ್ಥಿತಿಗೆ ಬಾರದಿರುವುದು ಹಿಂದಿನ ರಹಸ್ಯ ಸಾರ್ವಜನಿಕರಿಗೆ ತಿಳಿಯದಾಗಿದೆ. ಸಾರ್ವಜನಿಕರ ಸದ್ಬಳಕೆಗೆ ಅವಕಾಶ ನೀಡುವಂತೆ ಮಹಾಪೌರ ಸೇರಿದಂತೆ ಕೆಲ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅವರಿಂದ ಬಂದ ಉತ್ತರ ಮಾತ್ರ ಆಶ್ಚರ್ಯ ಮೂಡಿಸುತ್ತಿದೆ. ಈದ್ಗಾ ಮೈದಾನಕ್ಕೆ ಬೀಗ ಹಾಕಿದ್ದು ನಾವಲ್ಲ ಪೊಲೀಸರು ಹಾಕಿದ್ದಾರೆ ಎನ್ನುತ್ತಿದೆ ಪಾಲಿಕೆ. ಆದರೆ ಮೈದಾನದ ಮಾಲೀಕರು ಪಾಲಿಕೆಯಾಗಿರುವ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರದಲ್ಲಿ ಅವರ ನಿರ್ಧಾರಕ್ಕೆ ಪೂರಕವಾಗಿ ಪೊಲೀಸ್‌ ಇಲಾಖೆ ನಡೆದುಕೊಳ್ಳುವುದಾಗಿ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕಕುಮಾರ, ಮಹಾನಗರ ಪೊಲೀಸ್‌ ಆಯುಕ್ತ ಲಾಭೂರಾಮ ಅವರು ತಮ್ಮ ಜವಾಬ್ದಾರಿ ವ್ಯಕ್ತಪಡಿಸಿದ್ದರು. ಹೀಗಿರುವಾಗ ಇನ್ನೊಬ್ಬರ ಮಾಲೀಕತ್ವದ ಮೈದಾನಕ್ಕೆ ಅದೇಗೆ ಪೊಲೀಸರು ಬೀಗ ಹಾಕುತ್ತಾರೆ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಹೀಗಾಗಿ ಬೀಗ ಹಾಕಿದ್ದು ಪಾಲಿಕೆಯೋ ಅಥವಾ ಪೊಲೀಸರೋ ಎಂಬುದು ಸ್ಪಷ್ಟವಾಗಬೇಕಿದೆ.

ಮಹಾನಗರ ಪಾಲಿಕೆ ಆಸ್ತಿಗೆ ಪೊಲೀಸರು ಆದ್ಯಾಕೆ ಬೀಗ ಹಾಕಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಮಹಾನಗರ ಪಾಲಿಕೆಯಿಂದ ಯಾವುದೇ ನಿರ್ಬಂಧ ಹೇರಿಲ್ಲ. ಬೀಗ ಹಾಕಿರುವ ಬಗ್ಗೆ ಮಹಾನಗರ ಪೊಲೀಸ್‌ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ಅವರು ಬೀಗ ತೆಗೆದರೆ ಸರಿ. ಇಲ್ಲದಿದ್ದರೆ ನಾನೇ ಬೀಗ ಒಡೆದು ಸಾರ್ವಜನಿಕ ಬಳಕೆಗೆ ಕಲ್ಪಿಸುತ್ತೇನೆ. –ಈರೇಶ ಅಂಚಟಗೇರಿ, ಮಹಾಪೌರ

ಮಹಾನಗರ ಪಾಲಿಕೆಯಿಂದ ಟ್ಯಾಕ್ಸಿಗಳಿಗೆ ನಿಲ್ದಾಣ ಗುರುತಿಸದ ಕಾರಣ ಕಳೆದ 20 ವರ್ಷಗಳಿಂದ ಈದ್ಗಾ ಮೈದಾನವನ್ನೇ ಅವಲಂಭಿಸಿದ್ದೆವು. ಸುಮಾರು 200 ಕ್ಕೂ ಹೆಚ್ಚು ಟ್ಯಾಕ್ಸಿ ವಾಹನಗಳಿಗೆ ಇದೇ ಆಶ್ರಯ ತಾಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ದಿನ ಪ್ರವೇಶಕ್ಕೆ ನಿರ್ಬಂಧ ಹೇರಿರಲಿಲ್ಲ. ಮಹಾನಗರ ಪಾಲಿಕೆ ನಮ್ಮ ಸಮಸ್ಯೆ ಅರಿತು ಆದಷ್ಟು ಬೇಗ ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಡಬೇಕು. –ರಾಜು ತಡಸ, ಅಧ್ಯಕ್ಷ, ಶ್ರೀ ಸತ್ಯಸಾಯಿ ಟ್ಯಾಕ್ಸಿ ಸಂಘ

-ಹೇಮರಡ್ಡಿ ಸೈದಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next