Advertisement

ಬೀದಿ ವ್ಯಾಪಾರಿಗಳಿಗೆ ಐಡೆಂಟಿಟಿ ಕಾರ್ಡ್‌

11:09 AM Sep 17, 2017 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿರುವ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲು ನಿರ್ಧರಿಸಿರುವ ಬಿಬಿಎಂಪಿ ಶೀಘ್ರವೇ ಸಮೀಕ್ಷೆ ನಡೆಸಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ಸರ್ವೆ ಕಾರ್ಯ ಆರಂಭಿಸಿದೆ.

Advertisement

ಬೀದಿ ಬದಿ ವ್ಯಾಪಾರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ಕಿರುಕುಳ ನೀಡುತ್ತಾರೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿದೆ. ಇದನ್ನೆಲ್ಲ ಕೊನೆಗೊಳಿಸಲು ಬಿಬಿಎಂಪಿ ಈ ಸರ್ವೇ ಆರಂಭಿಸಿದೆ. ಪಾಲಿಕೆಗೆ ಸಮರ್ಪಕ ದಾಖಲೆಗಳನ್ನು ಒದಗಿಸುವ ವ್ಯಾಪಾರಿಗಳಿಗೆ ಶೀಘ್ರದಲ್ಲಿಯೇ ಗುರುತಿನ ಚೀಟಿ ದೊರೆಯಲಿದೆ. 

ಕೇಂದ್ರ ಸರ್ಕಾರದ ದೀನದಯಾಳ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯಗಳ ಅಭಿಯಾನ (ಡಿಎವೈ-ನಲ್ಮ್) ಅಡಿಯಲ್ಲಿ ಪಾಲಿಕೆಯ ಅಧಿಕಾರಿಗಳು ಸರ್ವೆ ನಡೆಸಲಿದ್ದಾರೆ. ಮೊದಲಿಗೆ ಬೀದಿ ವ್ಯಾಪಾರಿಗಳು ಪಾಲಿಕೆಯ ಕಚೇರಿಗಳಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಕೊಡಬೇಕು. ನಂತರದಲ್ಲಿ ಸರ್ವೆ ಅಧಿಕಾರಿಗಳ ತಂಡ ಎಲ್ಲ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಆಗ ತಮ್ಮ ಬಗ್ಗೆ ವ್ಯಾಪಾರಿಗಳು ಮಾಹಿತಿ ನೀಡಬೇಕು. 

ಸಮೀಕ್ಷೆ ಏಕೆ ನಡೆಸಬೇಕು?:  ಬೀದಿ ವ್ಯಾಪಾರಿಗಳಿಗೆ ಜೀವನೋಪಾಯದ ಸುರಕ್ಷತೆ ಇಲ್ಲದ ಕಾರಣದಿಂದ ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಹಾಗೂ ಕೆಲ ಸ್ಥಳೀಯರು ಕಿರುಕುಳ ನೀಡುತ್ತಾರೆ ಎಂಬ ಆರೋಪವಿದೆ. ಹೀಗಾಗಿ ಬಿಬಿಎಂಪಿಯು ಡಿಎವೈ-ನಲ್ಮ್ ಯೋಜನೆಯಡಿಯಲ್ಲಿ ಫ‌ಲಾನುಭವಿಗಳನ್ನು ಗುರುತಿಸಿ, ಗುರುತಿನ ಚೀಟಿ ನೀಡಲು ತೀರ್ಮಾನಿಸಿದೆ.

ಸಮೀಕ್ಷೆಯಾದ ನಂತರ ಪಾಲಿಕೆಯ ವತಿಯಿಂದ ಇವರಿಗೆ ಕುಡಿಯುವ ನೀರು, ಶೌಚಾಲಯ, ಗೋದಾಮು, ತಕ್ಕಡಿ, ತಳ್ಳುವ ಗಾಡಿ, ಸೌರದೀಪಗಳು ಸೇರಿದಂತೆ ಅಗತ್ಯ ಪರಿಕರಗಳನ್ನು ಮಾರುಕಟ್ಟೆಗಳಲ್ಲಿ ಒದಗಿಸಿಕೊಡಬೇಕಾಗುತ್ತದೆ. ಇದರೊಂದಿಗೆ ವ್ಯಾಪಾರಿಗಳಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಸೂಕ್ಷ್ಮ-ಉªಮೆಗಳ ಅಭಿವೃದ್ಧಿ, ಸಾಲಗಳ ಸಕ್ರಿಯೆ, ಬೀದಿ ವ್ಯಾಪಾರ-ಪರನಗರದ ಯೋಜನೆ ರಚಿಸುವುದರಿಂದ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಅಲ್ಪಸಂಖ್ಯಾತರಿಗೆ ಸಾಮಾಜಿಕ ಭದ್ರತೆ ಸಿಕ್ಕಂತಾಗುತ್ತದೆ. 

Advertisement

ಸಮೀಕ್ಷೆ ಯಾರು ಮಾಡುತ್ತಾರೆ?: ನಗರದಲ್ಲಿರುವ ಬೀದಿ ವ್ಯಾಪಾರಿಗಳನ್ನು ಸಮೀಕ್ಷೆ ನಡೆಸುವುದು ಬಿಬಿಎಂಪಿ ಅಧಿಕಾರಿಗಳ ಜವಾಬ್ದಾರಿ. ಈಗಾಗಲೇ ವಲಯ ಮಟ್ಟದ ಅಧಿಕಾರಿಗಳಿಗೆ ಸರ್ವೆ ನಡೆಸುವ ಕುರಿತು ಆದೇಶ ನೀಡಲಾಗಿದೆ. ಅದರಂತೆ ಪ್ರತಿ ವಾರ್ಡ್‌ಗೆ ಒಬ್ಬರಂತೆ ಅಧಿಕಾರಿಯನ್ನು ನೇಮಿಸಲಾಗುತ್ತದೆ.

ಜತೆಗೆ ಸಮೀಕ್ಷೆಗಾಗಿ ವಾರ್ಡ್‌ ವ್ಯಾಪ್ತಿಗೆ ತಕ್ಕಂತೆ ಗಣತಿದಾರರನ್ನು ನೇಮಿಸಿಕೊಳ್ಳಲಾಗುತ್ತದೆ ಮತ್ತು ನಲ್ಮ್ ಯೋಜನೆಯ ಸ್ವಸಹಾಯ ಗುಂಪುಗಳ ಸದಸ್ಯರು, ಆರೋಗ್ಯ ಪರಿವೀಕ್ಷಕರು, ಪಾಲಿಕೆಯ ಟೇಲರಿಂಗ್‌ ಟೀಚರುಗಳು, ಟೇಲರಿಂಗ್‌ ಮೇಲ್ವಿಚಾರಕರ ನೆರವು ಪಡೆಯಲಾಗುತ್ತದೆ. ಆದರೆ, ಯಾವುದೇ ಹಂತದಲ್ಲೂ, ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳನ್ನು ಬಳಸಿಕೊಳ್ಳುವುದಿಲ್ಲ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಬೀದಿ ವ್ಯಾಪಾರಿ ಎಂದರೆ ಯಾರು?:  “ಬೀದಿ ವ್ಯಾಪಾರಿ’ ಎಂದರೆ ಒಂದು ರಸ್ತೆ, ಗಲ್ಲಿ, ಓಣಿ, ಪಾದಚಾರಿ ಮಾರ್ಗ, ಬೀದಿಬದಿ, ಸಾರ್ವಜನಿಕ ಉದ್ಯಾನ ಅಥವಾ ಇತರೆ ಯಾವುದೇ ಸಾರ್ವಜನಿಕ ಸ್ಥಳ ಅಥವಾ ಖಾಸಗಿ ಪ್ರದೇಶದಲ್ಲಿನ ತಾತ್ಕಾಲಿಕ ನಿರ್ಮಾಣದಲ್ಲಿ ಅಥವಾ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಸಂಚರಿಸುತ್ತ, ಸಾರ್ವಜನಿಕರಿಗೆ ದಿನ ಬಳಕೆಯ ವಸ್ತುಗಳು, ಸರಕು-ಸಾಮಗ್ರಿಗಳ ಮಾರಾಟ ಹಾಗೂ ಸೇವೆ ನೀಡುವುದರಲ್ಲಿ ತೊಡಗಿರುವವರನ್ನು ಬೀದಿ ವ್ಯಾಪಾರಿಗಳು ಎಂದು ಪರಿಗಣಿಸಲಾಗುತ್ತದೆ. 

ವ್ಯಾಪಾರಿಗಳು ಮಾಡಬೇಕಾದ ಕೆಲಸವೇನು?
– ವಲಯ, ವಾರ್ಡ್‌ ಕಚೇರಿಗಳಿಂದ ಮಾಹಿತಿ ಪಡೆದು ಸರ್ವೆ ಅರ್ಜಿಯನ್ನು ಪಡೆಯಬೇಕು.
– ತಾವಿರುವ ವಾರ್ಡ್‌ನ ಹೆಸರು ಹಾಗೂ ಸಂಖ್ಯೆ ತಿಳಿದುಕೊಳ್ಳಬೇಕು.
– ಸಮೀಕ್ಷೆ ತಂಡ ಬಂದಾಗ ವ್ಯಾಪಾರಗಾರರು ತಮ್ಮನ್ನು ಅವರ ಬಳಿ ಗುರುತಿಸಿಕೊಳ್ಳಬೇಕು.
– ಸಮೀಕ್ಷೆ ಅರ್ಜಿಯೊಂದಿಗೆ ಪಡಿತರ ಚೀಟಿ, ಆಧಾರ್‌, ಗುರುತಿನ ಚೀಟಿ, ಚಾಲನಾ ಪರವಾನಗಿಯಂತಹ ದಾಖಲೆಗಳ ಪ್ರತಿ ನೀಡಬೇಕು
– ಅಧಿಕಾರಿಗಳು ಸಮೀಕ್ಷೆಯಲ್ಲಿ ಗುರುತಿಸದಿದ್ದರೆ ಕೂಡಲೇ ವಿಷಯವನ್ನು ಸಂಘಟನೆಯ ಮುಖಂಡರಿಗೆ ತಿಳಿಸಬೇಕು. 
– ಬೀದಿ ವ್ಯಾಪಾರಿಯಲ್ಲದವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಮುಂದಾದರೆ ಪಾಲಿಕೆಯ ಅಧಿಕಾರಿಗಳು ಹಾಗೂ ಪೊಲೀಸರ ಗಮನಕ್ಕೆ ತರಬೇಕು.
– ಸಮೀಕ್ಷೆಗೆ ಪರಿಗಣಿಸಲು ಅಧಿಕಾರಿಗಳು ಹಣ ಕೇಳಿದರೆ ಪಾಲಿಕೆಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ದೂರು ನೀಡಬಹುದು. 

ವ್ಯಾಪಾರಿಗಳಿಗೆ ಇಲ್ಲಿ ಸಿಗಲಿದೆ ಮಾಹಿತಿ 
ಮಾಹಿತಿಗಾಗಿ ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ 9483191035, 9880316961, 9008664220, 9880595032 ಸಂಪರ್ಕಿಸಬಹುದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next