ಬೆಂಗಳೂರು: ಕಾವೇರಿ ಚಿತ್ರಮಂದಿರ ಜಂಕ್ಷನ್‌ನಿಂದ ಹೆಬ್ಟಾಳವರೆಗೆ ಉದ್ದೇಶಿತ ಉಕ್ಕಿನ ಸೇತುವೆ ಅಥವಾ ಎಲಿವೇಟೆಡ್ ಕಾರಿಡಾರ್ ಯೋಜನೆಗಾಗಿ 144 ಮರಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದ ಸಿಟಿಜನ್ ಫಾರ್ ಬೆಂಗಳೂರು ಸಂಘಟನೆ ಆಗ್ರಹಿಸಿದೆ.
ಭಾನುವಾರ ಬಳ್ಳಾರಿ ರಸ್ತೆಯಲ್ಲಿ ಸಂಜಯನಗರ, ಮಲ್ಲೇಶ್ವರ, ಹೆಬ್ಟಾಳ, ಆರ್.ಟಿ.ನಗರ, ಸದಾಶಿವನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ನಾಗರಿಕರು “ಮರ ಹತ್ಯೆ ತಡೆಯೋಣ’ ಎಂಬ ಘೋಷ ವಾಕ್ಯಗಳಿರುವ ಭಿತ್ತಿಪತ್ರಗಳನ್ನು ಹಿಡಿದು ಮರಗಳನ್ನು ಕತ್ತರಿಸಬಾರದೆಂದು ಒತ್ತಾಯಿಸಿದರು.
ಸಂಘಟನೆ ಸಹ ಸಂಸ್ಥಾಪಕ ಶ್ರೀನಿವಾಸ್ ಅಳವಳ್ಳಿ ಮಾತನಾಡಿ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಉಕ್ಕಿನ ಸೇತುವೆ ಯೋಜನೆ ರದ್ದುಗೊಳಿಸಿದೆ. ಜತೆಗೆ ಬಳ್ಳಾರಿ ರಸ್ತೆಯಲ್ಲಿ ಪರಿಸರ ಇಲಾಖೆಯಿಂದ ಯಾವುದೇ ಯೋಜನೆಗೆ ಅನುಮೋದನೆ ಸಿಕ್ಕಿಲ್ಲ. ಹೀಗಿರುವಾಗ ಯಾವ ಕಾರಣಕ್ಕಾಗಿ ಮರಗಳನ್ನು ಕಡಿಯಲು ಗುರುತು ಮಾತನಾಡಿದೆ ಎಂದು ಪ್ರಶ್ನಿಸಿದರು.
ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಉಕ್ಕಿನ ಸೇತುವೆ ಮತ್ತು ಎಲಿವೇಟೆಡ್ ಕಾರಿಡಾರ್ ಪರಿಹಾರವಲ್ಲ. ಮೆಟ್ರೋದಂತಹ ಯೋಜನೆಗಳನ್ನು ಜಾರಿಗೊಳಿಸಿ, ಮರ ಕಡಿಯುವುದನ್ನು ಕೈಬಿಡಬೇಕು. ಮರ ಕಡಿಯುತ್ತಿರುವುದರಿಂದ ಬೆಂಗಳೂರಿನ ಮೂಲ ಸ್ವರೂಪ ಕಳೆದುಕೊಳ್ಳುತ್ತಿದ್ದು, ಉಷ್ಣಾಂಶ ಹೆಚ್ಚಳವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ಪರಿಸರ ಟ್ರಸ್ಟ್, ಬಸ್ ಪ್ರಯಾಣಿಕರ ವೇದಿಕೆ, ಪ್ರಜಾ ರಾಗ್, ನಮ್ಮ ಬೆಳ್ಳಂದೂರು ಜೊತೆಗೆ, ಐ ಚೇಂಜ್ ಇಂದಿರಾನಗರ ಸೇರಿದಂತೆ ಹಲವು ಸಂಘಟನೆಗಳ ಪ್ರತಿನಿಧಿಗಳು ಇದ್ದರು.