Advertisement

ನಿವೇಶನ-ಮನೆ ಇಲ್ಲದ ಬಡವರ ಗುರುತಿಸಿ

03:10 PM May 15, 2022 | Team Udayavani |

ಚಿತ್ರದುರ್ಗ: ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ ಮನೆ ನಿರ್ಮಾಣಕ್ಕಾಗಿ ಕಂದಾಯ ಇಲಾಖೆಯಿಂದ 30 ಎಕರೆ ಭೂಮಿ ವಶಕ್ಕೆ ಪಡೆಯಲಾಗಿದೆ. ಇನ್ನೂ 50 ಎಕರೆಯಲ್ಲಿ ಬಡವರಿಗೆ ಮನೆ ನಿರ್ಮಾಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಿವೇಶನ, ಮನೆ ಇಲ್ಲದ ಬಡವರನ್ನು ಗುರುತಿಸಿ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಭರಮಸಾಗರ ಭಾಗದ ಪಿಡಿಒ, ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕಂದಾಯ ಇಲಾಖೆಗೆ ಸೇರಿದ ಒಟ್ಟು 80 ಎಕರೆ ಭೂಮಿಯಿದೆ. ಮನೆ ನಿರ್ಮಾಣಕ್ಕೆ ಬಡವರ ಪಟ್ಟಿ ತಯಾರಿಸಿದರೆ ಜಿಲ್ಲಾ ಧಿಕಾರಿಗೆ ಕಳಿಸಿ ಅನುಮೋದನೆ ಪಡೆಯುವ ಜವಾಬ್ದಾರಿಯಿದೆ. ಪಿಡಿಒಗಳು ಖುದ್ದು ಬಡವರ ಮನೆ ಬಾಗಿಲಿಗೆ ಹೋಗಿ ಪಟ್ಟಿ ತಯಾರು ಮಾಡಬೇಕು. ಅರ್ಹರನ್ನು ಗುರುತಿಸಿ ಜೂನ್‌ ಅಂತ್ಯದೊಳಗೆ ಮನೆ ಕಟ್ಟಿಸಿಕೊಡುವ ಕೆಲಸ ಚುರುಕಾಗಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಧಾನ ಮಂತ್ರಿಗಳ ಆವಾಸ್‌ ಯೋಜನೆಯಡಿ ರಾಜ್ಯಕ್ಕೆ ಲಕ್ಷಾಂತರ ಮನೆಗಳು ಮಂಜೂರಾಗಿವೆ. ಭರಮಸಾಗರದಲ್ಲಿ ಮನೆಗಳಿಲ್ಲದ ಬಡವರನ್ನು ಗುರುತಿಸಬೇಕಿದೆ. ಇದಕ್ಕಾಗಿ ಮೀಸಲಿಟ್ಟಿರುವ ಭೂಮಿಗೆ, ಒಂದು ವಾರದೊಳಗೆ ಸ್ಕೆಚ್‌ ಆಗಿ ಪೋಡ್‌ ಮಾಡಬೇಕು. ಮನೆಗಳ ಹಂಚಿಕೆಯಲ್ಲಿ ಯಾರಿಗೂ ಅನ್ಯಾಯ ಆಗದಂತೆ ಕೆಲಸ ಮಾಡಿ ಎಂದು ಸೂಚಿಸಿದರು.

ತಾಪಂ ಅಧಿಕಾರಿ ಲೋಕೇಶ್‌ ಮಾತನಾಡಿ, ಬಸವ ವಸತಿ ಯೋಜನೆಯಡಿ ಮಂಜೂರಾದ 331 ಮನೆಗಳಲ್ಲಿ 266 ಮನೆಗಳು ನಿರ್ಮಾಣವಾಗಿವೆ. 85 ಮನೆಗಳು ಬಾಕಿ ಇದೆ. ಅಲೆಮಾರಿಗಳಿಗೆ ಮಂಜೂರಾಗಿರುವ 317 ಮನೆಗಳಲ್ಲಿ 223 ಮನೆಗಳಿಗೆ ಫಲಾನುಭವಿಗಳು ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಮನೆಗಳು ಮಂಜೂರಾಗಿ 8 ತಿಂಗಳಾದರೂ ಈವರೆಗೆ ಯಾಕೆ ಪೂರ್ಣಗೊಂಡಿಲ್ಲ ಎಂದು ಪ್ರಶ್ನಿಸಿದರು.

ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಯಾವುದೇ ಜಾತಿ ತಾರತಮ್ಯ ಮಾಡದೇ ಎಲ್ಲ ಜಾತಿಯ ಬಡವರನ್ನು ಆಯ್ಕೆ ಮಾಡಿ ಎಂದು ಸೂಚಿಸಿದರು.

Advertisement

ಬ್ಯಾಲಾಳು ಪಂಚಾಯಿತಿಯಲ್ಲಿ ಐದು ಎಕರೆ ಜಮೀನು ಗುರುತಿಸಲಾಗಿದೆ. ಕಂದಾಯ ಇಲಾಖೆಯವರು ಚಕ್ಕುಬಂದಿ ನೀಡಿ ಒಂದುವರೆ ವರ್ಷವಾಯಿತು. ಸ್ಕೆಚ್‌ ಮಾಡಿ ಕಲ್ಲು ನೆಡಬೇಕು. ದೊಡ್ಡಿಗನಾಳ್‌ನಲ್ಲಿ 12 ಎಕರೆ, ದೊಡ್ಡಿಗನಾಳ್‌ ಹೊಸಹಟ್ಟಿಯಲ್ಲಿ 5 ಎಕರೆ, ಭರಮಸಾಗರದಲ್ಲಿ 6 ಎಕರೆ, ಕೋಡಿರಂಗವ್ವನಹಳ್ಳಿಯಲ್ಲಿ 6 ಎಕರೆ, ಚಿಕ್ಕಬೆನ್ನೂರಿನಲ್ಲಿ 6 ಎಕರೆ, ಕಾಲ್ಕೆರೆಯಲ್ಲಿ 3 ಎಕರೆ, ಕೊಳಹಾಳ್‌ ಎಮ್ಮೆಹಟ್ಟಿಯಲ್ಲಿ 3 ಎಕರೆ, ಅಡವಿಗೊಲ್ಲರಹಟ್ಟಿಯಲ್ಲಿ 6 ಎಕರೆ, ಹುಲ್ಲೆಹಾಳ್‌ನಲ್ಲಿ 8.33 ಎಕರೆ, ಹುಲ್ಲೇಹಾಳ್‌ ಗೊಲ್ಲರಹಟ್ಟಿಯಲ್ಲಿ 6 ಎಕರೆ, ಕಾಲ್ಗೆರೆ ದಾಸನಹಳ್ಳಿಯಲ್ಲಿ 4 ಎಕರೆ, ಬೇವಿನಹಳ್ಳಿಯಲ್ಲಿ 2 ಎಕ ರೆ, ಕೋಣನೂರಿನಲ್ಲಿ 2.4 ಎಕರೆ, ಆಲಘಟ್ಟದಲ್ಲಿ 2 ಎಕರೆ, ಕೋಗುಂಡೆಯಲ್ಲಿ 5 ಎಕರೆ ಜಾಗವಿದೆ ಎಂದು ಲೋಕೇಶ್‌ ಶಾಸಕರ ಗಮನಕ್ಕೆ ತಂದರು.

ಸಭೆಯಲ್ಲಿ ತಹಶೀಲ್ದಾರ್‌ ಜಿ.ಎಚ್. ಸತ್ಯನಾರಾಯಣ, ತಾಪಂ ಇಒ ಹನುಮಂತಪ್ಪ ಸೇರಿದಂತೆ ಅಧಿಕಾರಿಗಳು ಇದ್ದರು. ಪಿಡಿಒ ಅಮಾನತಿಗೆ ಸೂಚನೆ ಪಿಡಿಒ ಕಾರ್ಯದರ್ಶಿಗಳ ಸಭೆಗೆ ಗೈರು ಹಾಜರಾಗಿದ್ದ ಅಳಗವಾಡಿ ಪಿಡಿಒಗೆ ನೋಟಿಸ್‌ ನೀಡಿ ಸೇವೆಯಿಂದ ಅಮಾನತು ಮಾಡುವಂತೆ ಜಿಪಂ ಸಿಇಒ ಡಾ| ಕೆ.ನಂದಿನಿದೇವಿ ಅವರಿಗೆ ಶಾಸಕ ಎಂ. ಚಂದ್ರಪ್ಪ ದೂರವಾಣಿ ಮೂಲಕ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next