ಕೊಪ್ಪಳ: ಸಮಾಜದಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸಿದಾಗ ಸ್ಫೂರ್ತಿ ಹೊಂದಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ಜಿಪಂ ಸದಸ್ಯ ಗವಿಸಿದ್ದಪ್ಪ ಕರಡಿ ಹೇಳಿದರು.
ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ತಾಲೂಕಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರತಿಭಾವಂತ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಕಷ್ಟು ಪ್ರತಿಭೆಗಳಿದ್ದಾರೆ. ಅವರನ್ನು ಇನ್ನೂ ಗುರುತಿಸುವ ಕಾರ್ಯ ನಡೆಯಬೇಕಿದೆ. ಇದರ ಮಧ್ಯೆ ಸಮಾಜದ ಮುಖಂಡರು ಅಂತರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ. ನಿಜಕ್ಕೂ ಇದೊಂದು ಶ್ಲಾಘನೀಯ ಕಾರ್ಯ ಎಂದರು.
ಸರ್ಕಾರಿ ಸಹಾಯಕ ಅಭಿಯೋಜಕ ಬಿ.ಎಸ್. ಪಾಟೀಲ ಮಾತನಾಡಿ, ಸಮಾಜದಲ್ಲಿ ಸಾಧಿಸುವ ವಿದ್ಯಾರ್ಥಿಗಳು ಭವಿಷ್ಯತ್ತಿನ ಬಗ್ಗೆ ಚಿಂತನೆ ಮಾಡಬೇಕು. ನಾವು ಸಮಾಜಕ್ಕೆ ಮಾಡಿದ ಕೆಲಸದ ಬಗ್ಗೆ ಹೇಳಿಕೊಳ್ಳದೇ ಉತ್ತಮವಾಗಿ ಕಾರ್ಯ ನಿರ್ವಹಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಗೊಳಿಸಿ ಐಎಎಸ್, ಕೆಎಎಸ್ ಸೇರಿದಂತೆ ಇತರ ಉನ್ನತ ಹುದ್ದೆಗಳನ್ನು ಪಡೆಯುವಂತೆ ಪ್ರೇರಣೆ ನೀಡಬೇಕೆಂದರು.
ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷ ಕರಿಯಪ್ಪ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮಾಜದ ನೋಟರಿ ವಕೀಲರಾಗಿ ನೇಮಕಗೊಂಡ ಹಾಗೂ ಜಿಲ್ಲಾ ಸರಕಾರಿ ನೌಕರರ ಸಂಘಕ್ಕೆ ಆಯ್ಕೆಯಾದವರನ್ನು ಈ ವೇಳೆ ಸನ್ಮಾನಿಸಲಾಯಿತು.
ಮುಖಂಡರಾದ ವೀರಬಸಪ್ಪ ಪಟ್ಟಣಶೆಟ್ಟರ್, ಸೋಮನಗೌಡ ಪಾಟೀಲ, ಇ.ಡಿ. ಬೃಂಗಿ, ವೀರೇಶ, ನಗರಸಭೆ ಸದಸ್ಯ ಚನ್ನಪ್ಪ ಕೋಟ್ಯಾಳ, ಸರ್ವೇಶ ಬನ್ನಿಕೊಪ್ಪ, ಲತಾಶ್ರೀ ಗವಿಸಿದ್ದಪ್ಪ ಚಿನ್ನೂರು, ಉಮಾ ಗವಿಸಿದ್ದಪ್ಪ ಪಾಟೀಲ, ಸಿದ್ದಪ್ಪ ಹಂಚಿನಾಳ, ಶೀಲಾ ಮೈನಹಳ್ಳಿ, ಗೀತಾ ಪಾಟೀಲ, ಪ್ರತಿಮಾ ಪಟ್ಟಣಶೆಟ್ಟರ್, ಕಿಶೋರಿ ಬೂದನೂರು, ಗವಿಸಿದ್ದಪ್ಪ ಚಿನ್ನೂರು ಸೇರಿದಂತೆ ವಿವಿಧ ಮುಖಂಡರು ಪಾಲ್ಗೊಂಡಿದ್ದರು.