ಬೆಂಗಳೂರು: ವೈಜ್ಞಾನಿಕ ಕಸ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಚಿಂದಿ ಆಯುವವರಿಗೂ ಗುರುತಿನ ಚೀಟಿ ನೀಡಿ ಒಣ ಕಸ ಸಂಗ್ರಹಿಸಲು ಅವಕಾಶ ಮಾಡಿಕೊಡಲು ಬಿಬಿಎಂಪಿ ನಿರ್ಧರಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿನ ಮನೆಗಳ ಕಸ ಸಂಗ್ರಹಣೆಗೆ ಸೆ.1ರಿಂದ ಹೊಸ ಟೆಂಡರ್ ಜಾರಿ ಬರಲಿದ್ದು, ಹಸಿ ಕಸವನ್ನು ಪೌರಕಾರ್ಮಿಕರು ಪಡೆಯಲಿದ್ದು, ಒಣ ಕಸ ಚಿಂದಿ ಆಯುವವರು ಸಂಗ್ರಹಿಸಲಿದ್ದಾರೆ.
ಪೌರಕಾರ್ಮಿಕರಿಗೆ ನೀಡಿರುವ ಮಾದರಿಯಲ್ಲೇ ಚಿಂದಿ ಆಯುವವರಿಗೂ ಗುರುತಿನ ಚೀಟಿ ನೀಡಲು ಬಿಬಿಎಂಪಿ ನಿರ್ಧರಿಸಿದೆ. ಈ ಸಂಬಂಧ ಶೀಘ್ರವೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಯಾರಿ ನಡೆಸಿದೆ. ಪಾಲಿಕೆ ನೀಡುವ ಗುರುತಿನ ಚೀಟಿಯಲ್ಲಿ ಚಿಂದಿ ಆಯುವವರ ಹೆಸರು, ವಿಳಾಸ, ಅವರ ಭಾವಚಿತ್ರ, ಯಾವ ವಾರ್ಡ್‌ನ ಯಾವ ರಸ್ತೆಯ ಮನೆಗಳಲ್ಲಿ ಒಣ ಕಸ ಸಂಗ್ರಹಿಸಬೇಕು ಎಂಬುದರ ಮಾಹಿತಿ ಮುದ್ರಿಸಲಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ 8 ಸಾವಿರ ಚಿಂದಿ ಆಯುವವರನ್ನು ಗುರುತಿಸಲಾಗಿದ್ದು, ಅವರ ಜತೆ ಚರ್ಚಿಸಲಾಗಿದೆ. ಜಾಹೀರಾತು ಮೂಲಕ ಇನ್ನಷ್ಟು ಚಿಂದಿ ಆಯುವವರನ್ನು ಗುರುತಿಸಿ ಒಣ ಕಸ ಸಂಗ್ರಹಿಸಲು ವಲಯ ಮತ್ತು ವಾರ್ಡ್‌ವಾರು ಹಂಚಿಕೆ ಮಾಡಲಾಗುವುದು ಎಂದು ಅವರು ಹೇಳುತ್ತಾರೆ.
ಚಿಂದಿ ಆಯುವವರು ಒಣ ಕಸ ಸಂಗ್ರಹಿಸಿದ ನಂತರ ಕಸ ಕೊಂಡೊಯ್ಯಲು 1500 ಮನೆಗಳಿಗೆ ಒಂದರಂತೆ ಆಟೋ ನೀಡಲು ಪಾಲಿಕೆ ತೀರ್ಮಾನಿಸಿದ್ದು, ಆಟೋಗೆ ಇಂಧನ ಚಿಂದಿ ಆಯುವವರೇ ಹಾಕಬೇಕು. ಒಣ ಕಸ ಮಾರಾಟದಿಂದ ಬರುವ ಹಣ ಚಿಂದಿ ಆಯುವವರೇ ಪಡೆಯಬಹುದು. ಜತೆಗೆ, ಪಾಲಿಕೆ ಮಾತ್ರವಲ್ಲದೇ ರಾಜ್ಯ ಮತ್ತು ಕೇಂದ್ರದ ಸವಲತ್ತುಗಳನ್ನು ಪಡೆಯಲು ಅರ್ಹರಾಗಲಿದ್ದಾರೆ. ಚಿಂದಿ ಆಯುವವರಿಗೆ ಒಣ ಕಸ ಸಂಗ್ರಹಣೆಯ ಜವಾಬ್ದಾರಿ ನೀಡುವ ಸಂಬಂಧ ಕೌನ್ಸಿಲ್ ಸಭೆಯ ಅನುಮೋದನೆ ಮಾತ್ರ ಬಾಕಿ ಇದೆ.
ಹಸಿ- ಒಣ ಕಸ ಪ್ರತ್ಯೇಕ ವಿಲೇವಾರಿ: ಹಸಿ ಕಸ ವಿಲೇವಾರಿಗೆ ಸಂಬಂಧಿಸಿ ಕಾರ್ಯಾದೇಶ ಪತ್ರ ನೀಡಲಾಗಿದ್ದು, ಸೆ. 1ರಿಂದ ಕಸ ಸಂಗ್ರಹಣೆ ಮತ್ತು ವಿಲೇವಾರಿ ನಡೆಯಲಿದೆ. ಆದರೆ, ಚಿಂದಿ ಆಯುವವರು ಒಣ ಕಸ ವಿಲೇವಾರಿ ಮಾಡಲಿದ್ದಾರೆ. ಈ ಕುರಿತು ರೂಪು-ರೇಷೆಯನ್ನು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಸಿದ್ಧಪಡಿಸುತ್ತಿದ್ದಾರೆ.
ಒಣ ಕಸ ಸಂಗ್ರಹಿಸಲು ಚಿಂದಿ ಆಯುವವರನ್ನು ಬಳಸಿಕೊಳ್ಳಲಾಗುವುದು. ಅವರಿಗೆ ಗುರುತಿನ ಚೀಟಿ ನೀಡುವ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಈಗಾಗಲೇ ಚಿಂದಿ ಆಯುವವರನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ಶೀಘ್ರವೇ ವಲಯವಾರು ಹಂಚಿಕೆ ಮಾಡಲಾಗುವುದು. ಈ ಬಗ್ಗೆ ಕೌನ್ಸಿಲ್ ಸಭೆಯ ಅನುಮೋದನೆ ಪಡೆಯಲಾಗುವುದು.
-ರಂದೀಪ್, ವಿಶೇಷ ಆಯುಕ್ತ (ಘನತ್ಯಾಜ್ಯ)
* ಮಂಜುನಾಥ ಗಂಗಾವತಿ