ನರಗುಂದ: ಸಾತ್ವಿಕ ಜೀವನಕ್ಕೆ ಅವಶ್ಯಕವಾದ ಮೌಲ್ಯಗಳನ್ನು ಎಲ್ಲಿಯೂ ಖರೀದಿ ಮಾಡಲಾಗದು. ಅದನ್ನು ನಾವೇ ರೂಪಿಸಿಕೊಳ್ಳಬೇಕು. ಇದಕ್ಕೆ ಅಧ್ಯಾತ್ಮದ ಅರಿವು ಬೇಕಾಗಿದೆ. ಆಧ್ಯಾತ್ಮಿಕ ಮೌಲ್ಯಗಳಿಂದ ಆದರ್ಶಮಯ ಬದುಕು ಸಾಗಿಸಲು ಸಾಧ್ಯ ಎಂದು ಪಟ್ಟಣದ ಈಶ್ವರೀಯ ವಿವಿ ಸಂಚಾಲಕಿ ಬ್ರಹ್ಮಕುಮಾರಿ ಪ್ರಭಕ್ಕನವರು ಹೇಳಿದರು.
ಪಟ್ಟಣದ ಈವಿವಿಯಲ್ಲಿ 11 ದಿನಗಳ ಕಾಲ ನಡೆಸಲಾದ ಶಾಲಾ ಮಕ್ಕಳಿಗಾಗಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಆಧ್ಯಾತ್ಮಿಕ ಶಕ್ತಿ ಮನುಕುಲದ ಜೀವನದಲ್ಲಿ ಹೊಂದಾಣಿಕೆ ಮತ್ತು ಸಂಬಂಧಗಳನ್ನು ವೃದ್ಧಿಸುತ್ತದೆ ಎಂದು ಪ್ರತಿಪಾದಿಸಿದರು.
ಚಿಕ್ಕವರಿದ್ದಾಗಲೇ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ರೂಪಿಸಬೇಕಾಗಿದೆ. ನಾನು ಹೇಗೆ ಬದುಕಬಲ್ಲೇ ಎಂಬ ನೈತಿಕ ಮತ್ತು ಆತ್ಮಸ್ಥೈರ್ಯ ತುಂಬುವಂತಹ ಶಿಕ್ಷಣ ಇಂದಿನ ಮಕ್ಕಳಿಗೆ ಅಗತ್ಯವಾಗಿದೆ ಎಂದರು.
ಮಕ್ಕಳು ಏನಾದರೂ ತಪ್ಪು ಮಾಡಿದಾಗ ಅವರಲ್ಲಿ ತಪ್ಪಿನ ಅರಿವು ಮೂಡಿಸಿದಾಗ ಮತ್ತೂಮ್ಮೆ ತಪ್ಪು ಮಾಡುವ ಸನ್ನಿವೇಶ ಬಾರದು. ಬೇಸಿಗೆ ರಜೆಯಲ್ಲಿ ಹಿಂದೆಲ್ಲ ಮಕ್ಕಳನ್ನು ಅಜ್ಜಿಯ ಮನೆಗೆ ಕಳಿಸುತ್ತಿದ್ದರು. ಅಜ್ಜಿಯರು ಹಳೆಯ ಕಥೆಗಳು, ನೀತಿ ಕಥೆಗಳನ್ನು ಹೇಳಿ ಮಕ್ಕಳಲ್ಲಿ ಆದರ್ಶ ಗುಣಗಳನ್ನು ಬೆಳೆಸುತ್ತಿದ್ದರು. ಆದರೆ ಇಂದು ಮಕ್ಕಳನ್ನು ಬೇಸಿಗೆ ರಜೆಗೆ ಕಳಿಸುವ ಸಂಪ್ರದಾಯ ಕಳೆದು ಹೋಗುತ್ತಿದೆ ಎಂದು ವಿಷಾದಿಸಿದರು.
ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪಾಲಕರ ಜವಾಬ್ದಾರಿ, ಪಾತ್ರ ಬಹಳವಾಗಿದೆ. ಮಕ್ಕಳ ಬದುಕಿನಲ್ಲಿ ಮೌಲ್ಯಗಳನ್ನು ಬಿತ್ತಿ ಬೆಳೆದಾಗ ಆತನೊಬ್ಬ ಸತಜೆಯಾಗಿ ಹೊರಹೊಮ್ಮಲು ಸಾಧ್ಯವಿದೆ. ಮುಖ್ಯವಾಗಿ ಮಕ್ಕಳಲ್ಲಿ ನೈತಿಕತೆ ಬೆಳೆಸುವಲ್ಲಿ ಪಾಲಕರು ಮುಂದಾಗಬೇಕು ಎಂದರು.
ಈವಿವಿಯಲ್ಲಿ 11 ದಿನಗಳ ಕಾಲ ಶಾಲಾ ಮಕ್ಕಳ ಬೇಸಿಗೆ ಶಿಬಿರದಲ್ಲಿ ಜೀವನದ ಮೌಲ್ಯಗಳು, ಹಾಡು, ಶ್ಲೋಕ, ನೀತಿ ಕಥೆಗಳು, ವ್ಯಕ್ತಿತ್ವ ವಿಕಸನ, ಶುದ್ಧ ಬರಹ ಮುಂತಾದ ವಿಷಯಗಳನ್ನು ಬೋಧಿಸಲಾಗಿದೆ. ನಿವೃತ್ತ ಪ್ರಾಚಾರ್ಯ ಸಿ.ಎಸ್. ಸಾಲೂಟಗಿಮಠ, ಪತ್ರಕರ್ತರಾದ ಸಿದ್ಧಲಿಂಗಯ್ಯ ಮಣ್ಣೂರಮಠ, ಪ್ರಭು ಗುಡಾರದ, ಶಂಕರ ತೆಗ್ಗಿನಮನಿ, ಪುರಸಭೆಯ ಶಿವಾನಂದ ಅಜ್ಜನ್ನವರ, ಪ್ರೀತಿ ಗವಿಮಠ, ಮಹಾಂತೇಶ ವಾಳದ, ಶಾಂತಾ ವೀರನಗೌಡ್ರ, ವಾಣಿಶ್ರೀ ಇಂಗಳಳ್ಳಿ ಮುಂತಾದವರಿದ್ದರು.