Advertisement

ವಿದ್ಯಾರ್ಥಿಗಳ ಪಾಲಿಗೆ ಆದರ್ಶರಿವರು

11:51 PM Sep 03, 2019 | mahesh |

ಭಾರತ ದೇಶ ಅನೇಕ ಮಹಾನ್‌ ಸಾಧಕರು ಬದುಕಿ ಬಾಳಿದ, ಬದುಕುತ್ತಿರುವ ದೇಶ. ಕಡು ಬಡತನದಲ್ಲಿಯೇ ಹುಟ್ಟಿ, ಬೆಳೆದು ದೇಶದ ಶ್ರೀಮಂತ ವ್ಯಕ್ತಿ, ರಾಷ್ಟ್ರಪತಿ, ಪ್ರಧಾನಿ, ವಿಜ್ಞಾನಿ, ವೈದ್ಯ ಹೀಗೆ ಹತ್ತು ಹಲವು ಉನ್ನತ ಸ್ಥಾನಗಳಲ್ಲಿ ಗುರುತಿಸಿಕೊಂಡವರು ಇಲ್ಲಿದ್ದಾರೆ. ಇಂತಹ ಮಹಾನ್‌ ವ್ಯಕ್ತಿಗಳೇ ಇಂದಿನ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು. ಅಂಥ‌ ಕೆಲವು ಆದರ್ಶ ವ್ಯಕ್ತಿಗಳ ಕಿರು ಪರಿಚಯ ಇಲ್ಲಿದೆ.

ಎ.ಪಿ.ಜೆ. ಅಬ್ದುಲ್ ಕಲಾಂ

ದಿ ಮಿಸೆಲ್ ಮ್ಯಾನ್‌ ಆಫ್ ಇಂಡಿಯಾ ಎಂದೇ ಕರೆಯಲ್ಪಡುವ ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ವಿದ್ಯಾರ್ಥಿಗಳಿಗೆ ಒಬ್ಬ ಉತ್ತಮ ಆದರ್ಶ ವ್ಯಕ್ತಿ. ಕೇವಲ ರಾಷ್ಟ್ರಪತಿಯಾಗಿ ಮಾತ್ರವಲ್ಲದೇ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಇವರ ಕೊಡುಗೆ ಅತ್ಯಮೂಲ್ಯವಾದುದು. ಭಾರತ ರತ್ನ, ಪದ್ಮ ವಿಭೂಷಣ, ಪದ್ಮ ಭೂಷಣದಂತಹ ದೇಶದ ಅತ್ಯಮೂಲ್ಯ ಪ್ರಶಸ್ತಿಗಳನ್ನು ಪಡೆದರೂ ಅತೀ ಸರಳವಾಗಿ ಎಲ್ಲರೊಂದಿಗೆ ಕೂಡಿ ಬಾಳಿದವರು ಕಲಾಂ. ಯುವ ಜನತೆಯ ಶಕ್ತಿಯ ಮೇಲೆ ನಂಬಿಕೆ ಇಟ್ಟಿದ್ದ ಇವರು ಸದಾ ಸಾಧನೆಗೆ ಪ್ರೇರೇಪಿಸುವ ಕೆಲಸ ಮಾಡುತ್ತಿದ್ದರು.

ಕ್ಯಾಪ್ಟನ್‌ ಪ್ರೇಮ್‌ ಮಥೂರ್‌

ಸಮಾಜ ಏನನ್ನು ಒಪ್ಪುದಿಲ್ಲವೋ ಅದನ್ನು ನೀವು ಸಾಧಿಸುವವರಾದರೆ ಕ್ಯಾಪ್ಟನ್‌ ಪ್ರೇಮ್‌ ಮಥೂರ್‌ ಅವರಿಗಿಂತ ಬೇರೆ ಆದರ್ಶ ನಿಮಗೆ ಸಿಗಲಾರದು. ಲಿಂಗ ಸರಿಸಮಾನತೆ ಇಲ್ಲದ ಸಮಯದಲ್ಲಿಯೇ ಸಮಾಜವನ್ನು ಎದುರಿಸಿ ಪೈಲೈಟ್ ಲೈಸೆನ್ಸ್‌ ಅನ್ನು ಪಡೆಯುವ ಮೂಲಕ ಪೈಲೈಟ್ ಲೈಸೆನ್ಸ್‌ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಇವರು. ಮಹಿಳಾ ಪೈಲೆಟ್ ಏನು ಮಾಡಬಲ್ಲಳು ಎಂಬ ಮನೋಭಾವನೆಯಿಂದ ಹಲವು ಏರ್‌ಲೈನ್ಸ್‌ಗಳು ಇವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಹಿಂದೇಟು ಹಾಕಿದವು. ಆದರೂ ಛಲಬಿಡದ ಈಕೆ ಸತತ ಪ್ರಯತ್ನದಿಂದ ಡೆಕ್ಕನ್‌ ಏರ್‌ಲೈನ್ಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡರು. 1949ರಲ್ಲಿ ನ್ಯಾಶನಲ್ ಏರ್‌ ರೇಸ್‌ನಲ್ಲಿ ಜಯಶಾಲಿಯಾಗಿ ಎಲ್ಲರನ್ನೂ ನಿಬ್ಬೆರಗು ಗೊಳಿಸಿದರು.

ವರ್ಗೀಸ್‌ ಕುರಿಯನ್‌

ವೈಟ್ ರೆವ್ಯೂಲೂಶನ್‌ನ ಪಿತಾಮಹ ಎಂದೇ ಕರೆಯಲಾಗುವ ವರ್ಗೀಸ್‌ ಕುರಿಯನ್‌ ಅವರ ಸಾಧನೆ ಇಂದಿನ ಮಕ್ಕಳಿಗೆ ಆದರ್ಶವಾಗಲೇಬೇಕು. ರೈತರ ಮಾಲಕತ್ವದಲ್ಲಿ ವೃತ್ತಿಪರರಿಂದ ನಡೆಸಲ್ಪಡುವ 30ಕ್ಕೂ ಅಧಿಕ ಸಂಸ್ಥೆಗಳನ್ನು ಹುಟ್ಟಿಹಾಕಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಮುಲ್ ಬ್ರ್ಯಾಂಡ್‌ನ‌ ಡೇರಿ ಉತ್ಪನ್ನಗಳ ಯಶಸ್ಸಿನ ಹಿಂದಿನ ರೂವಾರಿ ಕೂಡ ಇವರೇ ಆಗಿದ್ದಾರೆ.

ಪ್ರಕಾಶ್‌ ಆಮ್ಟೆ

ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಹೆಸರುವಾಸಿಯಾದವರು ಪ್ರಕಾಶ್‌ ಆಮ್ಟೆ. ಇವರು ಕುಷ್ಠರೋಗಿಗಳಿಗೆ ನೆರವಾಗುವ ಮೂಲಕ ಹೆಸರುವಾಸಿಯಾಗಿದ್ದ ಬಾಬಾ ಆಮ್ಟೆ ಅವರ ಪುತ್ರ. ತಂದೆಯ ಹಾದಿಯಲ್ಲೇ ಮುಂದುವರಿದಿರುವ ಇವರು ವಿದ್ಯುತ್‌ ಕೂಡ ಇಲ್ಲದ ಊರಿನಲ್ಲಿ ಆಸ್ಪತ್ರೆ ನಡೆಸುವ ಮೂಲಕ ಬಡ ಜನರ ಸೇವೆ ಮಾಡುತ್ತಿದ್ದಾರೆ. ಶಾಲೆ, ಆಸ್ಪತ್ರೆ, ಪ್ರಾಣಿ ಸಂರಕ್ಷಣಾ ಕೇಂದ್ರಗಳನ್ನು ನಡೆಸುತ್ತಿರುವ ಇವರ ಮಾನವೀಯತೆ ಪ್ರತಿಯೊಬ್ಬರಿಗೂ ಆದರ್ಶ.
ಪ್ರಸನ್ನ ಹೆಗಡೆ ಊರಕೇರಿ
Advertisement
Advertisement

Udayavani is now on Telegram. Click here to join our channel and stay updated with the latest news.

Next